ವೀರಾಜಪೇಟೆ, ಜ. 10: ಅಮ್ಮತ್ತಿ ಪಟ್ಟಣದಲ್ಲಿ ನಿರಂತರ ಕಳ್ಳತನಗಳು ನಡೆಯುತ್ತಿದ್ದು ಪೊಲೀಸ್ ಇಲಾಖೆಯು ನಿಷ್ಕ್ರಿಯವಾಗಿದೆ ಎಂದು ಆರೋಪಿಸಿ ಎರಡು ಸೇತುವೆಗಳ ಕಾಮಗಾರಿ ವಿಳಂಬದ ವಿರುದ್ಧ ಅಮ್ಮತ್ತಿ ಕೊಡವ ಸಮಾಜ ಹಾಗೂ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಇಂದು 10ಗಂಟೆಯಿಂದ 11ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಅಮ್ಮತ್ತಿಯ ಮುಖ್ಯ ರಸ್ತೆಯ ಸರ್ಕಲ್‍ನಲ್ಲಿ ಮಾನವ ಸರಪಳಿ ರಚಿಸಿ ಹಾಗೂ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಭಾರೀ ಪ್ರತಿಭಟನೆ ನಡೆಸಲಾಯಿತು.

ಕೊಡವ ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಪ್ರತಿಭಟನೆಕಾರರನ್ನುದ್ದೇಶಿಸಿ ಮಾತನಾಡಿ ಕಳೆದ ಒಂದು ತಿಂಗಳಿಂದ ಅಮ್ಮತ್ತಿ ವಿಭಾಗದಲ್ಲಿ ನಿರಂತರ ಕಳ್ಳತನಗಳು ನಡೆಯುತ್ತಿದ್ದು ನಿವಾಸಿಗಳು ಭಯ ಭೀತರಾಗಿದ್ದಾರೆ. ಕಳ್ಳತನದಲ್ಲಿ ಪೊಲೀಸರು ಕೆಲವನ್ನು ಪತ್ತೆ ಹಚ್ಚಿದರೆ ಇನ್ನು ಕೆಲವು ಹಾಗೆಯೇ ಉಳಿದಿದೆ. ಅಮ್ಮತ್ತಿಯಲ್ಲಿ ಪೊಲೀಸರ ಸಂಖ್ಯೆ ಕಡಿಮೆ ಇರುವದರಿಂದ ಕಳ್ಳತನಕ್ಕೆ ಪ್ರೇರಣೆ ನೀಡಿದಂತಾಗಿದೆ. ಇದಕ್ಕಾಗಿ ರಾತ್ರಿ ಪೊಲೀಸರ ಗಸ್ತನ್ನು ಹೆಚ್ಚಿಸಬೇಕು. ಅಮ್ಮತ್ತಿಯ ಪಂದ್ಯಂಡ ಬೆಳ್ಯಯಪ್ಪ ರಸ್ತೆಯಿಂದ ಗೋಣಿಕೊಪ್ಪಲಿಗೆ ತೆರಳುವ ರಸ್ತೆ, ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದ್ದು ಇದರಿಂದ ಅನೇಕ ವಾಹನ ಅಪಘಾತಗಳು ನಡೆಯುತ್ತಿವೆ. ಇಲಾಖೆಗೆ ಅನೇಕ ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ, 30ದಿನಗಳ ಗಡುವು ನೀಡಿ ನಂತರ ಇಲಾಖೆಗಳ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಬಿಜೆಪಿಯ ಜೆಪ್ಪು ಅಚ್ಚಪ್ಪ,

(ಮೊದಲ ಪುಟದಿಂದ) ಕಾವಡಿಚಂಡ ಗಣಪತಿ, ಕುಟ್ಟಂಡ ಪ್ರಿನ್ಸ್, ಕೆ.ಸಿ. ನಾಣಯ್ಯ ಅಮ್ಮತ್ತಿ ಜನತೆ ಅನುಭವಿಸುತ್ತಿರುವ ದೈನಂದಿನ ಸಂಕಷ್ಟ ಕುರಿತು ಮಾತನಾಡಿದರು. ಅಮ್ಮತ್ತಿ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಪರಿಹಾರವನ್ನು ಸೂಚಿಸು ವಂತಾಗಬೇಕು ಅಮ್ಮತ್ತಿಯಲ್ಲಿ ಎರಡು ಚಕ್ರಗಳ ವಾಹನದಲ್ಲಿ ತ್ರಿಬಲ್ ರೈಡಿಂಗ್ ಹಾಗೂ ಪಟ್ಟಣದಲ್ಲಿ ಗಾಂಜಾ ಅಕ್ರಮವನ್ನು ಪೊಲೀಸರು ಪತ್ತೆ ಹಚ್ಚಿ ತಕ್ಷಣ ನಿಷೇಧಿಸಬೇಕು ಎಂದರು. ಪ್ರತಿಭಟನೆಕಾರರು ಸರ್ಕಲ್ ಇನ್ಸ್ ಪೆಕ್ಟರ್ ಕುಮಾರ್ ಆರಾಧ್ಯ ಅವರಿಗೆ ನೀಡಿದ ಮನವಿಗೆ ಸ್ಪಂದಿಸಿದ ಅವರು ಉನ್ನತಾಧಿಕಾರಿಗಳೊಂದಿಗೆ ವ್ಯವಹರಿಸಿ ಅಮ್ಮತ್ತಿ ನಿವಾಸಿಗಳ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುವ ದಾಗಿ ತಿಳಿಸಿದರು. ಅಮ್ಮತ್ತಿ ರಸ್ತೆ ತಡೆ ಪ್ರತಿಭಟನೆಯ ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಸುರೇಶ್ ಮಾತನಾಡಿ ಅಮ್ಮತ್ತಿ ಗೋಣಿಕೊಪ್ಪ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿರುವದರಿಂದ ಅದನ್ನು ರಾಷ್ಟ್ರೀಯ ಹೆದ್ದಾರಿ ವಿಭಾಗ ಕಾಮಗಾರಿ ಆರಂಭಿಸಲಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಕಾಮಗಾರಿಗಳನ್ನು ಮುಂದಿನ 15ದಿನಗಳೊಳಗೆ ಕೈಗೊಳ್ಳುವದಾಗಿ ಭರವಸೆ ನೀಡಿದರು.