ಮಡಿಕೇರಿ, ಜ. 10: ವಿಶ್ವದ ‘ಅತ್ಯಂತ ಕಿರಿಯ ಮುಖ್ಯೋಪಾಧ್ಯಾಯ’ ಖ್ಯಾತಿಯಯ ಪಶ್ಚಿಮ ಬಂಗಾಳ ಮುರ್ಷಿದಾಬಾದ್‍ನ ಶಿಕ್ಷವಿಕೇತನ ಸಂಸ್ಥೆಯ ಮುಖ್ಯಸ್ಥ ಬಾಬರ್ ಆಲಿ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಕುರಿತು ಪ್ರವಚನ ನೀಡಲಿದ್ದಾರೆ.
ಜನವರಿ 12ರಂದು ಬೆಳಿಗ್ಗೆ 10.30 ಗಂಟೆಗೆ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ನಡೆಯಲಿದೆ ಎಂದು ರಾಮಕೃಷ್ಣ ಆಶ್ರಮದ ಮುಖ್ಯಸ್ಥರಾದ ಬೋಧಸ್ವರೂಪಾನಂದ ಸ್ವಾಮೀಜಿ ತಿಳಿಸಿದ್ದು, ಸ್ವಾಮಿ ವಿವೇಕಾನಂದರ ತತ್ವ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಂಡು, ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಪ್ರಚಾರ ಮಾಡುತ್ತಿರುವ ಬಾಬರ್ ಆಲಿ ಹಾಗೂ ಬಾಲ ಪ್ರತಿಭೆ ಶರ್ವರಿ ಅತಿಥಿಗಳಾಗಿ ಬರುತ್ತಿರುವದಾಗಿ ಹೇಳಿದ್ದಾರೆ.
ಬೆಳಿಗ್ಗೆ 9.30 ಗಂಟೆಗೆ ಪೊನ್ನಂಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ, ರಾಮಕೃಷ್ಣ ಆಶ್ರಮದವರೆಗೆ ಮೆರವಣಿಗೆ ನಡೆಯಲಿದೆ. ಸುಮಾರು 2 ಸಾವಿರ ವಿದ್ಯಾರ್ಥಿಗಳು ಹಾಗೂ ಯುವ ಜನರು ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಡ್ರಾಮ ಜೂನಿಯರ್ಸ್‍ನಲ್ಲಿ ಖ್ಯಾತಿಯಾಗಿರುವ ನರ್ಸರಿ ಶಾಲಾ ಪ್ರತಿಭೆ ನಿವೇದಿತಾ ಅವರಿಂದ ನೃತ್ಯ ಪ್ರದರ್ಶನ ನಡೆಯಲಿದೆ.
ಬಾಬರ್ ಆಲಿ ಅವರು ತನ್ನ ಒಂಭತ್ತನೇ ವಯಸ್ಸಿನಲ್ಲೇ ಮಕ್ಕಳಿಗೆ ಪಾಠ ಆರಂಭಿಸಿದ್ದು, ಹದಿನಾರನೇ ವಯಸ್ಸಿನಲ್ಲೇ ಸ್ವಂತ ಶಾಲೆ ಆರಂಭಿಸಿದ್ದಾರೆ. ಶಾಲೆಗಳೇ ಇಲ್ಲದ ಮುರ್ಷಿದಾಬಾದ್‍ನಲ್ಲಿ ಸಂಸ್ಥೆ ಹುಟ್ಟುಹಾಕಿ, ವಿಶೇಷ ರೀತಿ ಪಾಠ- ಪ್ರವಚನ ಬೋಧಿಸುತ್ತಿದ್ದು, ಬಿ.ಬಿ.ಸಿ. ಸಂಸ್ಥೆ ಇವರನ್ನು ವಿಶ್ವದ ಅತ್ಯಂತ ಕಿರಿಯ ಮುಖ್ಯಾಪಾಧ್ಯಾಯ ಎಂದು ಘೋಷಿಸಿದೆ.
ಸಿ.ಎನ್.ಎನ್. ಮತ್ತು ಐ.ಬಿ.ಎನ್. ಟೀವಿಗಳು ಇವರನ್ನು ‘ರಿಯಲ್ ಹೀರೋ’ ಎಂದು ಘೋಷಿಸಿವೆ. ರೋಟರಿ ಸಂಸ್ಥೆ, ಫೋಬ್ರ್ಸ್ ಸಂಸ್ಥೆಗಳು ರಾಷ್ಟ್ರೀಯ ಪುರಸ್ಕಾರ ನೀಡಿವೆ. ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಾನ್ಯತೆಗಳು ಹಲವು ದೊರೆತಿವೆ.
ಕರ್ನಾಟಕದ ಪ್ರಥಮ ಪಿಯುಸಿ ಇಂಗ್ಲೀಷ್ ಪುಸ್ತಕದಲ್ಲಿ ಹಾಗೂ ಹತ್ತನೇ ತರಗತಿಯ ಇಂಗ್ಲೀಷ್ ಪುಸ್ತಕದಲ್ಲಿ ಬಾಬರ್ ಆಲಿ ಅವರ ಕುರಿತೇ ಪಠ್ಯವಿರುವದು ವಿಶೇಷ.
ಬಾಲ ಪ್ರತಿಭೆ ಶರ್ವರಿ ಅತೀ ಚಿಕ್ಕ ವಯಸ್ಸಿನಲ್ಲೇ ಹಾಡು, ಶ್ಲೋಕಗಳನ್ನು ಅತ್ಯಂತ ಸ್ಪಷ್ಟವಾಗಿ ಪಠಿಸುತ್ತಾಳೆ. ನಟನೆ- ನೃತ್ಯಗಳಲ್ಲಿ ವಿರಾಜಿಸುತ್ತಾಳೆ. ಆಧ್ಯಾತ್ಮಿಕ, ಸಾಮಾಜಿಕ ಮತ್ತು ರಾಷ್ಟ್ರ ಜಾಗೃತಿ ಮೂಡಿಸುವ ಅನೇಕ ಜಿಲ್ಲಾ ಮತ್ತು ರಾಜ್ಯಮಟ್ಟದ ವೇದಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದ್ದಾಳೆ.