ಕುಶಾಲನಗರ, ಜ. 10: ಮುಖ್ಯಮಂತ್ರಿಗಳ ಭರವಸೆಯ ಬೆನ್ನಲ್ಲೇ ಕಾವೇರಿ ತಾಲೂಕು ರಚನೆ ಹೋರಾಟ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಕಳೆದ 4 ತಿಂಗಳುಗಳ ಅವಧಿಯಲ್ಲಿ ನೂತನ ತಾಲೂಕು ರಚನೆಗಾಗಿ ಸರಕಾರಕ್ಕೆ ಆಗ್ರಹಿಸಿ ವಿವಿಧ ಹಂತಗಳ ಹೋರಾಟ ನಡೆದಿತ್ತು. ಪ್ರಥಮ ಹಂತದಲ್ಲಿ ಜನಾಂದೋಲನ ಸೇರಿದಂತೆ ನಿರಂತರ ಧರಣಿ ಕಾರ್ಯಕ್ರಮಗಳು, ಪಟ್ಟಣ ಬಂದ್, ಆಮರಣಾಂತ ಉಪವಾಸ ಕಾರ್ಯಕ್ರಮ ನಡೆದು ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದ ನಂತರ ಉಪವಾಸ ಅಂತ್ಯಗೊಳಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವದರೊಂದಿಗೆ ಕಾವೇರಿ ತಾಲೂಕು ಹೋರಾಟದ ಕಿಚ್ಚನ್ನು ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿಗಳ ಗಮನಕ್ಕೆ ತರುವಲ್ಲಿ ಹೋರಾಟ ಸಮಿತಿ ಯಶಸ್ವಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.