ಮಡಿಕೇರಿ, ಜ. 10: ಮಹಾಭಾರತದಲ್ಲಿ ದುರ್ಯೋಧನ ಧರ್ಮದ ಅರಿವಿದ್ದರೂ, ಶ್ರೀಕೃಷ್ಣನ ಮಾತು ಮೀರಿ ಅಧರ್ಮ ಮಾರ್ಗದಲ್ಲಿ ಸಾಗಿ ಅವನತಿ ಹೊಂದಿದಂತೆ, ನಮ್ಮ ಜನರಿಗೆ ಒಳ್ಳೆಯದು ಮತ್ತು ಕೆಟ್ಟದರ ಬಗ್ಗೆ ತಿಳಿದಿದ್ದರೂ, ಅದನ್ನು ಒಪ್ಪಿಕೊಳ್ಳುವ ಮನಸ್ಸಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ ಎಂದು ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ವಿಷಾದಿಸಿದರು. ಎಲ್ಲರು ಕೂಡ ಒಳ್ಳೆಯದ್ದನ್ನು ಒಪ್ಪಿಕೊಳ್ಳುವದರಿಂದ ಒಳಿತು ಸಾಧ್ಯವೆಂದು ಅವರು ಮಾರ್ನುಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸ್ವಸಹಾಯ ಸಂಘಗಳಿಂದ ಏರ್ಪಡಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡು ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಸತ್ಯ, ಧರ್ಮ ಪ್ರತಿಯೊಬ್ಬರಿಗೆ ಒಳ್ಳೆಯದ್ದನ್ನೇ ಕಲಿಸುತ್ತದೆಯಾದರೂ, ಅಧರ್ಮ ಕುಡುಕುತನ, ದುಶ್ಚಟಗಳಿಗೆ ಒಳಗಾಗಿ ದುರ್ಯೋಧನನಂತೆ ಸಂಸಾರ, ಸಮಾಜ, ಮಡದಿ, ಮಕ್ಕಳಿಗೆ ತೊಂದರೆಯಲ್ಲಿ ಸಿಲುಕಿಸುತ್ತೇವೆ ಎಂದು ಕಳವಳ ವ್ಯಕ್ತಪಡಿಸಿದರು. ಇಂಥ ಸನ್ನಿವೇಶದಲ್ಲಿ ನಾವು ಒಳ್ಳೆಯ ಜೀವನದೊಂದಿಗೆ ಬೇರೆಯವರಿಗೂ ತೊಂದರೆ ಕೊಡದೆ ಬದುಕುವದು ನಿಜವಾದ ಧರ್ಮವೆಂದು ಅವರು ತಿಳಿ ಹೇಳಿದರು.
ಕೊಡಗು ಜಾನಪದ ಪರಿಷತ್ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್ ಮಾತನಾಡುತ್ತಾ, ಬಹು ಸಂಸ್ಕøತಿಯ ಭಾರತ ದೇಶದಲ್ಲಿ ಎಲ್ಲರು ಒಗ್ಗಟ್ಟಿನೊಂದಿಗೆ ವಿವಿಧತೆಯಲ್ಲಿ ಏಕತೆಯಿಂದ ಬಾಳುವದು ವಿಶೇಷವೆಂದು ಅಭಿಪ್ರಾಯಪಟ್ಟರು. ಆಧುನಿಕ ಜೀವನದಲ್ಲಿ ವಿಶ್ವವೊಂದು ಪುಟ್ಟ ಗ್ರಾಮದಂತೆ ಗೋಚರಿಸುತ್ತಿದ್ದು, ಇಂಥ ವ್ಯವಸ್ಥೆಯಲ್ಲಿ ಮಾನವೀಯ ಬದುಕು ಅವಶ್ಯಕವೆಂದು ನೆನಪಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖರಾದ ಸದಾಶಿವ, ಗಾಳಿಬೀಡು ಗ್ರಾ.ಪಂ. ಸದಸ್ಯ ಅಗೋಳಿಕಜೆ ಧನಂಜಯ, ಬಾನಂಗಡ ಕರುಣ್, ಜಾನಪದ ಕಲಾವಿದೆ ರಾಣಿ ಮಾಚಯ್ಯ ಮೊದಲಾದವರು ಮಾತನಾಡಿದರು. ಚಿ.ನಾ. ಸೊಮೇಶ್ ಉಪಸ್ಥಿತರಿದ್ದರು.
ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷೆ ಲೀಲಾ ಶೇಷಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರ್ಚಕ ಸತೀಶ್ ಭಟ್ ತಂಡ ಪೂಜೆ ನೆರವೇರಿಸಿದರೆ, ಮೇಲ್ವಿಚಾರಕ ಮುಕುಂದ್ ಸ್ವಾಗತಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಸಂಘ-ಸಂಸ್ಥೆ ಪ್ರಮುಖರು ಸಾಮೂಹಿಕ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಪ್ರಸಾದ, ಸಹಭೋಜನದೊಂದಿಗೆ ವಿವಿಧತೆಯಲ್ಲಿ ಏಕತೆ ಮೆರೆದರು.