ಮಡಿಕೇರಿ, ಜ. 10: ವಿದ್ಯಾರ್ಥಿ ದಿಸೆಯಿಂದಲೇ ಕನ್ನಡದಲ್ಲೇ ಕಲಿತು, ಸಾಧನೆ ಮಾಡುವಂತೆ ಕ.ಸಾ.ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ಸಭಾಂಗಣದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ‘ಶುದ್ಧಬರಹ’ ಹೋಬಳಿ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ತಾಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ ಮಕ್ಕಳು ವಿದ್ಯಾರ್ಥಿ ದಿಸೆಯಿಂದಲೇ ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಕಲಿಕೆಯೊಂದಿಗೆ ಜ್ಞಾನವನ್ನು ವೃದ್ಧಿಸಿಕೊಳ್ಳಲಿ ಎಂಬ ಉದ್ದೇಶದೊಂದಿಗೆ ಈ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಧ್ಯವಾದಷ್ಟು ಸಾಹಿತ್ಯ ಓದುವದು ಹಾಗೂ ರಚನೆಯಲ್ಲಿ ತೊಡಗಿಸಿ ಕೊಂಡರೆ ಮನಸು ಪರಿಪಕ್ವವಾಗುವದ ರೊಂದಿಗೆ ದಾರ್ಶನಿಕ ಗುಣಗಳು ಮೈಗೂಡುವದಲ್ಲದೆ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದು ಹೇಳಿದರು. ಸಂಪಾದನೆಗೆ ಹುದ್ದೆಯಿರ ಬೇಕೇ ವಿನಃ ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಸಮಾಜಸೇವೆ, ಸಾಹಿತ್ಯ ಸೇವೆಯೊಂದಿಗೆ ಸಾಧನೆ ಮಾಡಬೇಕೆಂದು ಉದಾಹರಣೆ ಸಹಿತ ವಿವರಿಸಿದರು.

ಮುಖ್ಯ ಅತಿಥಿಯಾಗಿದ್ದ ಪ್ರೌಢಶಾಲೆ ಉಪ ಪ್ರಾಂಶುಪಾಲ ಕೋಡಿ ಗುರುರಾಜ್ ಮಾತನಾಡಿ ಪ್ರಸ್ತುತ ಕಲಿಕಾ ಮಟ್ಟವು ಆಂಗ್ಲ ಭಾಷೆಯಲ್ಲೇ ಹೆಚ್ಚಾಗಿರುವದರಿಂದ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೇಮ, ಆಸಕ್ತಿ ತೋರುವ ಸಲುವಾಗಿ ಕ.ಸಾ.ಪ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕೆಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ದೈಹಿಕ ಪರಿವೀಕ್ಷಕ ಮೃತ್ಯುಂಜಯ ಅವರು ಮಾತನಾಡಿ ಕನ್ನಡ ನಮ್ಮ ಉಸಿರಾಗಿರಬೇಕು, ಬಾಲ್ಯದಿಂದಲೇ ಕನ್ನಡದ ಬಗ್ಗೆ ಒಲವು ಹೊಂದಿರಬೇಕು. ಕನ್ನಡ ಶಾಲೆಯಲ್ಲಿ ಕಲಿತವರೇ ಇಂದು ದೊಡ್ಡ ದೊಡ್ಡ ಸಾಧನೆ ಮಾಡಿದ್ದು, ನೀವುಗಳು ಕೂಡ ಕನ್ನಡಿಗರಾಗಿ ಸಾಧನೆ ಮಾಡಬೇಕೆಂದು ಕರೆ ನೀಡಿದರು.

ಮದೆ ಮಹೇಶ್ವರ ಪ.ಪೂ. ಕಾಲೇಜು ಉಪನ್ಯಾಸಕ ಸಿದ್ದರಾಜು ಬೆಳ್ಳಯ್ಯ ಮಾತನಾಡಿ ಪ್ರತಿಯೊಂದು ಮಗುವಿನಲ್ಲಿಯೂ ಕನ್ನಡತನ ಪ್ರತಿಭೆ ಇದ್ದೇ ಇರುತ್ತದೆ. ಎಲ್ಲರೂ ಕೂಡ ಕನ್ನಡ ಕಲಿತುಕೊಂಡು ಕುವೆಂಪು, ಪಂಜೆ ಮಂಗೇಶರಾಯರು, ಕೊಡಗಿನ ಗೌರಮ್ಮನಂತೆ ಆಗಬೇಕು. ಸ್ಪರ್ಧೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕ.ಸಾ.ಪ ನಿರ್ದೇಶಕಿ, ಶಿಕ್ಷಕಿ ಡಿ.ಹೆಚ್. ಪುಷ್ಪ, ಜ. ತಿಮ್ಮಯ್ಯ ಶಾಲಾ ಚಿತ್ರಕಲಾ ಶಿಕ್ಷಕ ಕೋಡಿ ಭರತ್ ಇದ್ದರು. ಕ.ಸಾ.ಪ ನಿರ್ದೇಶಕಿ, ಶಿಕ್ಷಕಿ ಚೋಕಿರ ಅನಿತಾದೇವಯ್ಯ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.