ಸಿದ್ದಾಪುರ, ಜ. 9: ಕಾಡಾನೆಗಳ ಹಾವಳಿಯಿಂದಾಗಿ ತತ್ತರಿಸಿ ಹೋಗಿರುವ ಕಾಫಿ ಬೆಳೆಗಾರರು ಇದೀಗ ಹೋರಾಟದ ಹಾದಿ ಹಿಡಿಯುವ ಬಗ್ಗೆ ಸಭೆ ನಡೆಸಿ ನಿರ್ಣಯವನ್ನು ಕೈಗೊಂಡಿದ್ದಾರೆ.

ಸಿದ್ದಾಪುರ ವ್ಯಾಪ್ತಿಯ ಮಾಲ್ದಾರೆ, ಇಂಜಿಲಗೆರೆ, ಕರಡಿಗೋಡು, ಗುಹ್ಯ, ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ಉಪಟಳದಿಂದಾಗಿ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಇಂದು ಸಿದ್ದಾಪುರದ ಕೊಡವ ಕಲ್ಚರಲ್ ಕ್ಲಬ್‍ನ ಸಭಾಂಗಣದಲ್ಲಿ ಕಾಫಿ ಬೆಳೆಗಾರರು ಸೇರಿ ಸಭೆ ನಡೆಸಿದರು.

ನಂತರ ಕಾಡಾನೆ ಹಾವಳಿ ತಡೆಯಲು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಸಿದ್ದಾಪುರದ ಕೊಡಗು ಜಿಲ್ಲೆ ಸಣ್ಣ ಬೆಳೆಗಾರರ ಸಂಘದ ನೇತೃತ್ವದಲ್ಲಿ ಜಿಲ್ಲಾದ್ಯಂತ ಕಾಫಿ ಬೆಳೆಗಾರರನ್ನು ಕೃಷಿಕರನ್ನು ಹಾಗೂ ಕಾರ್ಮಿಕ ಸಂಘಟನೆಗಳ ಹಾಗೂ ವಿವಿಧ ಸಂಘ ಸಂಸ್ಥೆಗಳನ್ನು ಆಹ್ವಾನಿಸಿ ಸಿದ್ದಾಪುರದಲ್ಲಿ ಸಭೆ ಕರೆದು ಚರ್ಚಿಸಲು ನಿರ್ಧರಿಸಲಾಯಿತು. ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸÀಕ್ತಿ ದಾವೆಯನ್ನು ಹೂಡಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಸಣ್ಣ ಬೆಳೆಗಾರರ ಸಂಘದ ಉಪಾಧ್ಯಕ್ಷ ಸಿ.ಎ. ನಂದಾಸುಬ್ಬಯ್ಯ, ಕಾಡಾನೆಗಳ ಉಪಟಳವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರದ ಹಾಗೂ ಅರಣ್ಯ ಇಲಾಖಾಧಿಕಾರಿಗಳ ಗಮನ ಸೆಳೆಯಲು ಸಮಿತಿ ರಚಿಸಲಾಗುವದು ಹಾಗೂ ಸದ್ಯದಲ್ಲೇ ಸಿದ್ದಾಪುರದಲ್ಲಿ ಸಭೆ ನಡೆಸಲಾಗುವದೆಂದರು. ಕಾಡಾನೆಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆಯು ಅರಣ್ಯದಲ್ಲಿ ಕಾಡಾನೆಗಳಿಗೆ ಬೇಕಾದ ಆಹಾರ, ನೀರು ಒದಗಿಸದ ಹಿನ್ನೆಲೆಯಲ್ಲಿ ಕಾಡಾನೆಗಳು ಆಹಾರವನ್ನು ಅರಿಸಿಕೊಂಡು ನಾಡಿಗೆ ಬಂದು ಕಾಫಿ ತೋಟಗಳಿಗೆ ಲಗ್ಗೆಯಿಟ್ಟು ತೊಂದರೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಹಾಗೂ ಕಾಫಿ ಬೆಳೆಗಾರರು ತೋಟಗಳಿಗೆ ತೆರಳಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಸಭೆಯಲ್ಲಿ ನಡಿಕೇರಿಯಂಡ ಮಾಚಯ್ಯ, ಕೆ.ಪಿ. ಪ್ರಭಾಕರ್, ಮಂಡೇಪಂಡ ಬೋಪಣ್ಣ, ಕೆ.ಪಿ. ಗಣಪತಿ, ನೆಲ್ಲಮಕ್ಕಡ ಅಶೋಕ್, ಬಿ.ಕೆ. ಹರಿ, ನವೀನ್, ವಜ್ರ, ಕುಶಿ ಭೀಮಯ್ಯ, ಎಂ.ಕೆ. ಕುಶಾಲಪ್ಪ ಎಂ.ಡಿ. ಬೋಪಣ್ಣ ಇತರರು ಹಾಜರಿದ್ದರು.

-ವಾಸು