ಮಡಿಕೇರಿ, ಜ. 9: ಮಂಗಳವಾರ ಮಡಿಕೇರಿ ಜನರಿಗೆ ಏನೋ ಖುಷಿ; ವಾಹನ ಚಾಲಕರಿಗಂತೂ ಡಬಲ್ ಖುಷಿ. ಅದೂ ಮುಖ್ಯಮಂತ್ರಿಗಳ ವಾಹನ ಓಡಾಡುವ ಜಾಗದಲ್ಲಿ ವಾಹನ ಚಾಲಿಸುವದೆಂದರೆ ಮತ್ತಷ್ಟು ಖುಷಿ...ಗುಂಡಿ ಬಿದ್ದ, ಹಳ್ಳ ಬಿದ್ದ ರಸ್ತೆಗಳೆಲ್ಲವೂ ಡಾಂಬರ್ ಮೆತ್ತಿಕೊಂಡು ಸಿಂಗಾರಗೊಂಡಿದ್ದವು. ಮುಖ್ಯಮಂತ್ರಿಗಳಿಗೆ ಸ್ವಲ್ಪವೂ ಸೊಂಟ ನೋವಾಗದಂತೆ ಆಡಳಿತ ರಸ್ತೆಗಳ ರಿಪೇರಿ ಬಗ್ಗೆ ಗಮನಹರಿಸಿತ್ತು.ನಗರಸಭೆಯಲ್ಲಿ ಕೂಗಾಟ, ಸಾರ್ವಜನಿಕರ ಪ್ರತಿಭಟನೆ, ಮಾಧ್ಯಮಗಳ ವರದಿ ಇದಾವದಕ್ಕೂ ಕಿವಿ ಇಲ್ಲದಂತಿದ್ದ ಆಡಳಿತ ಸಿದ್ರಾಮಣ್ಣನ ಸಂಚಾರಕ್ಕೆ ಮಾತ್ರ ಸುಗಮ ದಾರಿ ಕಲ್ಪಿಸಿತ್ತು. ತೆರಿಗೆ ಕಟ್ಟುವ ಜನರಿಗೆ ಕೇಳುವ ಹಕ್ಕಿಲ್ಲದಿದ್ದರೂ, ರಾಜ್ಯದ ದೊರೆ ಬಂದ ಲೆಕ್ಕದಲ್ಲಿ ಅಲ್ಲಲ್ಲಿ ರಸ್ತೆ ರಿಪೇರಿ ಆಗಿ, ಗಿಡಗಂಟಿಗಳು ಕಡಿಯಲ್ಪಟ್ಟು ಮಡಿಕೇರಿಯ ಕೆಲವು ಪ್ರದೇಶ ಸುಂದರವಾಗಿದ್ದು ಮಾತ್ರ ಸತ್ಯ.
ಮುಂದೆ ಚುನಾವಣೆ ಬರಲಿದೆ; ದೊರೆಯಂತೂ ಖಂಡಿತಾ ಬರುತ್ತಾರೆ; ಆ ಸಂದರ್ಭ ಅವರು ಸಂಚರಿಸುವ ಮಾರ್ಗ, ಸಭೆ ನಡೆಸುವ ಸ್ಥಳ ಬದಲು ಮಾಡಲು ಪ್ರಜೆಗಳು ಮನವಿ ಮಾಡಿಕೊಳ್ಳೋಣ. ಆಗ ಇತರ ರಸ್ತೆ ಹಾಗೂ ವಿಭಾಗ ಈಗಿನಂತೇ ದುರಸ್ತಿಗೊಳ್ಳುತ್ತದೆ; ತೆರಿಗೆದಾರ ಸಂತೃಪ್ತನಾಗುತ್ತಾನೆ.
11.30 ಗಂಟೆಗೆ ಬಂದಿಳಿದ ಸಿ.ಎಂ.
ಸಿಎಂ ಆಗಮನದ ಹಿನ್ನೆಲೆಯಲ್ಲಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮುಖ್ಯಮಂತ್ರಿಗಳು ಸಾಗುವ ಮುಖ್ಯ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಸಿ.ಎಂ. ಆಗಮನಕ್ಕೂ ಮುನ್ನ ಹೆಲಿಪ್ಯಾಡ್‍ನಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ರಾಜ್ಯ ಗುಪ್ತ ವಾರ್ತೆ ವಿಭಾಗದ ಕೊಡಗು ಉಸ್ತುವಾರಿ ಸ್ನೇಹಾ, ಐಜಿಪಿ ವಿಪುಲ್ ಕುಮಾರ್ ಇವರುಗಳು ಹೆಲಿಪ್ಯಾಡ್‍ನಲ್ಲಿ ಪೂರ್ವ ತಯಾರಿಯ ಬಗ್ಗೆ ಪರಿಶೀಲನೆ ಮಾಡಿದರು. ಸುಮಾರು 11.30 ಗಂಟೆ ವೇಳೆಗೆ ಗಾಲ್ಫ್ ಮೈದಾನದ ಹೆಲಿಪ್ಯಾಡ್‍ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿಳಿದರು.ಕಾಂಗ್ರೆಸ್ ಸಮಾವೇಶದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಳೆಯ ಸ್ನೇಹಿತ ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರ ಮನೆಗೆ ಭೇಟಿ ಕೊಟ್ಟು ಯೋಗ ಕ್ಷೇಮ ವಿಚಾರಿಸಿದರು.ರಾಜ್ಯದಲ್ಲಿ ಹಿಂದೂ ಯುವಕರ ನಿರಂತರ ಹತ್ಯೆಯಾಗುತ್ತಿದ್ದು ಈ ಬಗ್ಗೆ ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಮಡಿಕೇರಿ ಸುದರ್ಶನ ಅತಿಥಿಗೃಹಕ್ಕೆ ಆಗಮಿಸಿದ್ದ ಹಿಂದುಪರ ಸಂಘಟನೆಯ 8 ಮಂದಿ ಕಾರ್ಯಕರ್ತರನ್ನು ಮಡಿಕೇರಿ ಪೊಲೀಸರು ಬಂಧಿಸಿ ವಶಕ್ಕೆ ಪಡೆದುಕೊಂಡರು.
ಮುಖ್ಯಮಂತ್ರಿಗಳು ಸುದರ್ಶನ ಅತಿಥಿಗೃಹದಲ್ಲಿ ಇದ್ದ ಸಂದರ್ಭ ಕುಶಾಲನಗರದ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು, ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಮಂಜುನಾಥ್ ನೇತೃತ್ವದಲ್ಲಿ 10 ಕ್ಕೂ ಅಧಿಕ ಯುವಕರು ಮುತ್ತಿಗೆ ಹಾಕುವ ಬಗ್ಗೆ ಮಾಹಿತಿ ದೊರೆತ ಪೊಲೀಸ್ ಅಧಿಕಾರಿಗಳು ಅವರನ್ನು ಸ್ಥಳದಿಂದ ಹೊರಕ್ಕೆ ತೆರಳುವಂತೆ ಸೂಚಿಸಿದರು.
ಈ ಸಂದರ್ಭ ಅಸಮಾಧಾನಗೊಂಡ ಕಾರ್ಯಕರ್ತರು ಸುದರ್ಶನ ವೃತ್ತದ ಬಳಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆ ಅಡಿಯಲ್ಲಿ ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೌನ ಪ್ರತಿಭಟನೆ ಪ್ರಾರಂಭಿಸಿದರು. ತಕ್ಷಣ ಕಾರ್ಯೋನ್ಮುಖರಾದ ಮಡಿಕೇರಿ ಪೊಲೀಸ್ ಅಧಿಕಾರಿ ಮಹೇಶ್, ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೇಗೌಡ ಮತ್ತಿತರ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ 8 ಮಂದಿಯನ್ನು ವಶಕ್ಕೆ ತೆಗೆದುಕೊಂಡರು.
ಹಿಂದುಪರ ಸಂಘಟನೆಯ ಪ್ರಮುಖರಾದ ಕೆ.ಜಿ. ಮನು, ಭಾಸ್ಕರ್ ನಾಯಕ್, ಮಂಜುನಾಥ್, ಕೃಷ್ಣಪ್ಪ, ನಿಡ್ಯಮಲೆ ದಿನೇಶ್, ಮಧು, ನಂದೀಶ್‍ಕುಮಾರ್, ಗಣೇಶ್, ಕುಮಾರ್ ಮತ್ತು ಮಹೇಶ್ ಎಂಬವರುಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಜಿಲ್ಲಾ ಪೊಲೀಸ್ ಸಶಸ್ತ್ರದಳದ ಕಛೇರಿಯಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಮುಗಿಯುವ ತನಕ ಬಂಧನದಲ್ಲಿ ಇರಿಸಿ ವಿಚಾರಣೆಗೆ ಒಳಪಡಿಸಿದರು.
ರಾಜ್ಯ ಸರಕಾರದ ಸಾಧನಾ ಸಮಾವೇಶಕ್ಕೆ ಕುಶಾಲನಗರ ಸುತ್ತಮುತ್ತಲ ವ್ಯಾಪ್ತಿಯಿಂದ 50ಕ್ಕೂ ಅಧಿಕ ಬಸ್‍ಗಳಲ್ಲಿ ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದ ದೃಶ್ಯ ಕಂಡುಬಂತು. ಕುಶಾಲನಗರದ ಸಮೀಪ ದಿಡ್ಡಳ್ಳಿ ನಿರಾಶ್ರಿತರನ್ನು ಕೊಂಡೊಯ್ಯಲು 35 ಸರಕಾರಿ ಬಸ್‍ಗಳನ್ನು ನಿಯೋಜಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಜಿಲ್ಲೆಯ ಕುಶಾಲನಗರ ಸೇರಿದಂತೆ ಹಲವು ಭಾಗಗಳಿಂದ ದಿನನಿತ್ಯ ಓಡಾಡುವ ಪ್ರಯಾಣಿಕರಿಗೆ ಸಮಸ್ಯೆ ಕಂಡುಬಂತು.
ಪ್ರಚಾರ ಫಲಕಗಳ ತೆರವು
ರಾಷ್ಟ್ರೀಯ ಹೆದ್ದಾರಿ ಮಡಿಕೇರಿ-ಕುಶಾಲನಗರ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ವಾಹನ ಪ್ರಯಾಣಿಕರ ಸೂಚನಾ ಫಲಕಗಳ ಮೇಲೆ ಅಳವಡಿಸಲಾಗಿದ್ದ ಪ್ರಚಾರ ಫಲಕಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಕುಶಾಲನಗರದಿಂದ ಮಡಿಕೇರಿ ತನಕ ನೂರಾರು ಬ್ಯಾನರ್ ಫಲಕಗಳನ್ನು ರಸ್ತೆ ಬದಿಯ ಸೂಚನಾ ಫಲಕಗಳಲ್ಲಿ ಅಳವಡಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತಗೊಂಡಿತ್ತು.
ಈ ಸಂಬಂಧ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿದ್ದಾರೆ ಎಂದು ಕುಶಾಲನಗರ ಕಂದಾಯ ಅಧಿಕಾರಿಗಳಾದ ನಂದಕುಮಾರ್ ತಿಳಿಸಿದ್ದಾರೆ.(ಮೊದಲ ಪುಟದಿಂದ) ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡಗು ಪ್ರವಾಸ ಹಿನ್ನೆಲೆ ಅಲ್ಲಲ್ಲಿ ಕಾಂಗ್ರೆಸ್ ಮುಖಂಡರ ಭಾವಚಿತ್ರವಿರುವ ಫ್ಲೆಕ್ಸ್‍ಗಳೊಂದಿಗೆ, ಪಕ್ಷದ ಧ್ವಜ, ಬ್ಯಾನರ್‍ಗಳನ್ನು ಪ್ರದರ್ಶಿಸಲಾಗಿತ್ತು.
ಅನೇಕ ಕಡೆ ಹೆದ್ದಾರಿ ಬದಿ ಸೂಚನಾ ಫಲಕಗಳನ್ನು ಮುಚ್ಚಿ ರಾಜಕಾರಣಿಗಳ ಭಾವಚಿತ್ರ ರಾರಾಜಿಸುತ್ತಿದ್ದದ್ದು ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗಿತ್ತು. ಈ ನಡುವೆ ವೀರ ಸೇನಾನಿ ಫೀ.ಮಾ. ಕಾರ್ಯಪ್ಪ, ಗುಡ್ಡೆಮನೆ ಅಪ್ಪಯ್ಯ ಗೌಡ, ಜನರಲ್ ಕೆ.ಎಸ್. ತಿಮ್ಮಯ್ಯ ಪ್ರತಿಮೆ ಸುತ್ತಲೂ ಪಕ್ಷದ ಧ್ವಜ ಹಾಕಿದ್ದು ನಾಗರಿಕ ವಲಯದಲ್ಲಿ ಅಸಮಾಧಾನ ಉಂಟು ಮಾಡಿತ್ತು. ಆ ಬೆನ್ನಲ್ಲೇ ಇಂದು ಮುಂಜಾನೆ ಮುಖ್ಯಮಂತ್ರಿಗಳ ಆಗಮನಕ್ಕೆ ಮುಂಚಿತವಾಗಿ ನಗರಸಭಾ ಸಿಬ್ಬಂದಿ ಧ್ವಜಗಳನ್ನು ತೆರವುಗೊಳಿಸಿ ನಾಗರಿಕರಲ್ಲಿ ಕಿರಿಕಿರಿ ಉಂಟಾಗಲಿದ್ದದ್ದನ್ನು ತಪ್ಪಿಸಿದ ದೃಶ್ಯ ಎದುರಾಯಿತು.
- ಟಿ.ಜಿ.ಎಸ್.
ಪತ್ರಕರ್ತರೊಂದಿಗೆ ಮುಖ್ಯಮಂತ್ರಿ
ಪ್ರಶ್ನೆ : ಸ್ವಕ್ಷೇತ್ರ ಬಿಟ್ಟು ಬೇರೆ ಕಡೆ ಸ್ಪರ್ಧಿಸುತ್ತೀರಾ ?
ಮುಖ್ಯಮಂತ್ರಿ : ಸ್ವಕ್ಷೇತ್ರ ಬಿಟ್ಟು ನಾನು ಎಲ್ಲಿ ಹೋಗಲಿ. ಅಂತಹ ಅಭಿಪ್ರಾಯ ಇಲ್ವಲ್ಲ ಅಥ್ವ ಇದ್ಯ ? ಊಹಾಪೋಹವಷ್ಟೆ, ಎಲ್ಲಿ ಹೋಗ್ಲಿ ನಾನು ?
ಪ್ರಶ್ನೆ : ಮಡಿಕೇರಿಯ ರಸ್ತೆ ಹಾಳಾಗ್ಹೋಗಿದೆ.
ನೀವು ಬರುತ್ತೀರೀಂತ ಪ್ಯಾಚ್ ಮಾಡಿದ್ದಾರೆ.
ಮುಖ್ಯಮಂತ್ರಿ : ಮುಖ್ಯಮಂತ್ರಿ, ಪ್ರಧಾನಮಂತ್ರಿ ಬಂದಾಗ ಇದೆಲ್ಲ ಸಾಮಾನ್ಯ. ಇದು ಅಪರಾಧ ಏನ್ರಿ ?
ಪ್ರಶ್ನೆ : ಅಮಿತ್ ಶಾ ಮತ್ತೆ ಬರುತ್ತಿದ್ದಾರಂತೆ ?
ಮುಖ್ಯಮಂತ್ರಿ : ಬರಲಿ ಬಿಡಿ ಬರ್‍ಬೇಡೀಂತ ಹೇಳ್ಳಿಕ್ಕಾಗುತ್ತಾ ಅವರು ಪಕ್ಷದ ಅಧ್ಯಕ್ಷರು ಬರುತ್ತಾರೆ, ಬರ್ಲಿ.
* ರಾಜ್ಯ ಸರಕಾರ ಹಾಗೂ ಕೊಡಗಿನ ಉಸ್ತುವಾರಿ ಸಚಿವರಾಗಿ ಯಾವದೇ ಕಾರಣಕ್ಕೂ ಕುಶಾಲನಗರಕ್ಕೆ ರೈಲ್ವೇ ಯೋಜನೆಗೆ ಬಿಡಲಾರೆ ಎಂದು ಇತ್ತೀಚೆಗೆ ಎಂ.ಆರ್. ಸೀತಾರಾಂ ಹೇಳಿಕೆ ನೀಡಿದ್ದರು. ಇಂದು ಅವರ ಸಮ್ಮುಖದಲ್ಲೇ ಮಾಜೀ ಕೇಂದ್ರ ರೈಲ್ವೇ ಸಚಿವ ಕೆ.ಹೆಚ್. ಮುನಿಯಪ್ಪ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕುಶಾಲನಗರಕ್ಕೆ ರೈಲ್ವೇ ಯೋಜನೆ ಪೂರ್ಣಗೊಳಿಸುವದಾಗಿ ಘೋಷಿಸಿದರು.
* ಕಾಂಗ್ರೆಸ್ ಸಮಾವೇಶಕ್ಕೆ ಜನರನ್ನು ಕರೆತರಲು ರಾಜ್ಯ ಸಾರಿಗೆ ಸಂಸ್ಥೆಯಿಂದ ಒಂದು ನೂರು ಬಸ್‍ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆರ್‍ಎಂಸಿ ಆವರಣ, ಮ್ಯಾನ್ಸ್ ಕಾಂಪೌಂಡ್ ಬಳಿ ಜನರಲ್ ತಿಮ್ಮಯ್ಯ ಕ್ರೀಡಾಂಗಣ ತುಂಬಾ ಈ ಬಸ್‍ಗಳ ನಿಲುಗಡೆ ಕಂಡುಬಂತು.
* ದಿಡ್ಡಳ್ಳಿ ನಿರಾಶ್ರಿತರ ಕುಟುಂಬಗಳ ಸಹಿತ ಜಿಲ್ಲೆಯ ವಿವಿಧ ಹಾಡಿಗಳಿಂದ ಮತ್ತು ತೋಟ ಕಾರ್ಮಿಕರನ್ನು ಸಾವಿರಾರು ಸಂಖ್ಯೆಯಲ್ಲಿ ಬಸ್‍ಗಳಲ್ಲಿ ಕರೆತರಲಾಗಿತ್ತು. ಎಳೆಯ ಮಕ್ಕಳು ಕೂಡ ಕಂಕುಳಲ್ಲಿ ಹಿಡಿದುಕೊಂಡು ದಿಡ್ಡಳ್ಳಿ ಬೋಜ, ಕೂಡಿಗೆ ಮಾರ, ಗುಡ್ಡೆಹೊಸೂರು ಸುಶೀಲ, ಪ್ರಶಾಂತ್ ಮೊದಲಾದವರು ಗೋಚರಿಸಿದರು. ವಿಶೇಷ ಚೇತನ ಚೆಟ್ಟಳ್ಳಿ ಖಾಲೀದ್ ಊರುಗೋಲಿನೊಂದಿಗೆ ಬಂದು ಪಕ್ಷನಿಷ್ಠೆ ಮೆರೆದಂತಿತ್ತು.
* ಮೈಸೂರಿನ ಕೆಎಸ್‍ಎಂ ವತಿಯಿಂದ ಸುಮಾರು 10 ಸಾವಿರ ಮಂದಿಗೆ ತರಕಾರಿ ಪಲಾವ್, ಮೊಸರನ್ನ, ಪಕೋಡ, ಉಪ್ಪಿನಕಾಯಿ, ಕುಡಿಯುವ ನೀರಿನ ವ್ಯವಸ್ಥೆ ರೂಪಿಸಲಾಗಿತ್ತು.
* ಆರೆಂಟು ವಾಹನಗಳಲ್ಲಿ ಕರ್ನಾಟಕ ಸರಕಾರದ ಸಾಧನೆಗಳನ್ನು ಬೃಹತ್ ಪರದೆಯೊಂದಿಗೆ ಅಲ್ಲಲ್ಲಿ ಬಿತ್ತರಿಸುವ ವ್ಯವಸ್ಥೆ ಕಲ್ಪಿಸಿದ್ದು, ಕರುನಾಡಿನಲ್ಲಿ ಕೋಟಿಗೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಹಿನ್ನೆಲೆ ಸಂದೇಶ ಆಗಿಂದಾಗ್ಗೆ ಕೇಳಿ ಬರುತ್ತಿತ್ತು.
* ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ಮಡಿಕೇರಿಯ ಸಮಾವೇಶ ಮೈದಾನದತ್ತ ಸಾಲುಗಟ್ಟಲೆ ಜನ ಬರುತ್ತಿದ್ದ ದೃಶ್ಯ ಗೋಚರಿಸಿದರೆ, ಐಎನ್‍ಟಿಯುಸಿ ಕಾರ್ಯಕರ್ತರು ಧ್ವಜಗಳನ್ನು ಹಿಡಿದು ತಮ್ಮ ನಾಯಕರಿಗೆ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದರು.
* ಮುಖ್ಯಮಂತ್ರಿ ಸಹಿತ ತಮ್ಮ ನಾಯಕರಿಗೆ ಪಕ್ಷದ ಕಾರ್ಯಕರ್ತರು ಭಾರೀ ಗಾತ್ರದ ಹಾರಗಳಿಂದ ವೇದಿಕೆಯಲ್ಲಿ ಸ್ವಾಗತಿಸುತ್ತಾ, ಛಾಯಾಚಿತ್ರ ತೆಗೆಸಿಕೊಂಡರೆ, ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಮತ್ತು ತಂಡ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೆಳ್ಳಿಯ ಪೀಚೆಕತ್ತಿ ಕೊಡುಗೆ ನೀಡಿದರು.
* ಪ್ರತ್ಯೇಕ ತಾಲೂಕು ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಕಾಂಗ್ರೆಸ್ ನಾಯಕರು ನೀಡಿದ್ದ ಆಶ್ವಾಸನೆಯನ್ನೇ ಪುನರುಚ್ಚರಿಸಿದ್ದು ಕಂಡು ಬಂತು.
ಕಾಂಗ್ರೆಸ್ ಸಮಾವೇಶಕ್ಕೆ ಹರಿದು ಬಂದ ಜನಸಾಗರ ನಿಯಂತ್ರಿಸುವಲ್ಲಿ ಯಾವದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಪೊಲೀಸ್ ಇಲಾಖೆ ವ್ಯಾಪಕ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಗೋಚರಿಸಿತು.
ಗಣ್ಯರ ಗೈರು...
ಸರಕಾರಿ ಕಾರ್ಯಕ್ರಮ, ಅದರಲ್ಲೂ ಮುಖ್ಯಮಂತ್ರಿಗಳ ಕಾರ್ಯಕ್ರಮ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮವಾಗಿದ್ದು, ಶಿಷ್ಟಾಚಾರದಂತೆ ಸರಕಾರದ ಸಚಿವರುಗಳು, ಶಾಸಕರು, ಸ್ಥಳೀಯ ಪ್ರತಿನಿಧಿಗಳ ಹೆಸರುಗಳನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ಆದರೆ, ಎಲ್ಲರೂ ಗೈರಾಗಿದ್ದರು. ಪ್ರಮುಖವಾಗಿ ಅಧ್ಯಕ್ಷತೆ ವಹಿಸಬೇಕಾಗಿದ್ದ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ಸಂಸ ಪ್ರತಾಪ್ ಸಿಂಹ ಅವರುಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಇದ್ದರು. ಆದರೆ ಸರಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸಚಿವೆ ಸುಮಾವಸಂತ್, ಮಾಜಿ ಶಾಸಕ ಅರುಣ್ ಮಾಚಯ್ಯ ಅವರುಗಳು ಅಸೀನರಾಗಿದ್ದು, ಅಚ್ಚರಿ ಮೂಡಿದಿತ್ತು.