ಸೋಮವಾರಪೇಟೆ, ಜ. 9: ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ರಾಷ್ಟ್ರೀಯ ಪಕ್ಷಗಳಿಂದ ಜನಸಾಮಾನ್ಯರ ಸಂಕಷ್ಟಗಳು ಬಗೆಹರಿದಿಲ್ಲ. ಕರ್ನಾಟಕ ರಾಜ್ಯ ಮತ್ತು ಕೊಡಗು ಜಿಲ್ಲೆ ಅಭಿವೃದ್ಧಿ ಹೊಂದಬೇಕಾದರೆ ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕಾಗಿದೆ ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಹೇಳಿದರು.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹತ್ತು ಹಲವು ಸವiಸ್ಯೆಗಳು ಇದ್ದರೂ ಸಹ ಹಾಲಿ ಶಾಸಕರುಗಳು ಪರಿಹರಿಸಲು ಮುಂದಾಗಿಲ್ಲ್ಲ. ರಾಜ್ಯ ಸರ್ಕಾರದ ಭಾಗ್ಯಗಳು ಫಲಾನು ಭವಿಗಳ ಮನೆಬಾಗಿಲನ್ನು ತಲಪುತ್ತಿಲ್ಲ. ಯಾವದೇ ಸರ್ಕಾರಿ ಕೆಲಸವಾಗ ಬೇಕಿದ್ದರೂ ಲಂಚ ನೀಡಬೇಕಿದೆ ಎಂದರು.

ಜೆಡಿಎಸ್‍ನ ಜಿಲ್ಲಾ ಘಟಕದ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ರಾಷ್ಟ್ರೀಯ ಪಕ್ಷಗಳು ಪೈಪೋಟಿಗಿಳಿದು ಮತವನ್ನು ಮೈಲಿಗೆ ಮಾಡುತ್ತಿವೆ. ಕಳೆದ ಮೂರು ಬಾರಿ ಕ್ಷೇತ್ರದ ಶಾಸಕರಾಗಿ ಹಾಗೂ ಸಚಿವರಾಗಿ ಆಯ್ಕೆಯಾಗಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದು, ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಜನರು ಸ್ಮರಿಸುತ್ತಿದ್ದಾರೆ. ಕ್ಷೇತ್ರದ ಮತದಾರರಿಗೆ ಜೀವಿಜಯ ಅವರನ್ನು ಗೆಲ್ಲಿಸುವ ಭಾವನೆ ಇದೆ ಎಂದರು. ರೈತರ ಕಣ್ಣೊರೆಸುವ ಶಕ್ತಿ ಕೇವಲ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮಾತ್ರ ಇದ್ದು, ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ವೇದಿಕೆಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ರಾಜ್ಯ ಸಮತಿಯ ಉಪಾಧ್ಯಕ್ಷ ಮನೋಜ್ ಬೋಪಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಸ್. ಚಂಗಪ್ಪ, ಜಿಲ್ಲಾ ವಕ್ತಾರ ಕಾಟ್ನಮನೆ ವಿಠಲ್ ಗೌಡ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ, ತಾಲೂಕು ಘಟಕದ ಅಧ್ಯಕ್ಷ ಪ್ರವೀಣ್, ವಿವಿಧ ಸಮಿತಿಯ ಅಧ್ಯಕ್ಷರುಗಳಾದ ಇಸಾಕ್, ಶಿವದಾಸ್, ಚನ್ನಬಸಪ್ಪ, ಜಾನಕಿ ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಹಲವು ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ತೊಂದರೆಯಿಲ್ಲ

ಪಕ್ಷದಲ್ಲಿ ಯುವ ಕಾರ್ಯಕರ್ತರ ಪಡೆಯೇ ಇದ್ದು, ಪಕ್ಷದಿಂದ ಯಾರೇ ಹೋದರೂ ಪಕ್ಷದ ಮೇಲೆ ಪರಿಣಾಮ ಬೀರುವದಿಲ್ಲ. ಬೂತ್ ಮಟ್ಟದಿಂದ ಕಾರ್ಯಕರ್ತರು ಪಕ್ಷವನ್ನು ಸಂಘಟಿಸುವ ಮೂಲಕ ಜಿಲ್ಲೆಯ ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಜೀವಿಜಯ ಸಭೆಯಲ್ಲಿ ಹೇಳಿದರು.

ಐಗೂರು ಗ್ರಾ.ಪಂ.ನಲ್ಲಿ 11 ಸ್ಥಾನಗಳ ಪೈಕಿ 10ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದರು. ಓರ್ವ ಸದಸ್ಯ ಈಗಾಗಲೇ ಕಾಂಗ್ರೆಸ್ ಸೇರಿದ್ದು, ಉಳಿದ 9ರಲ್ಲಿ 3 ಮಂದಿ ಸದಸ್ಯರು ಜೆಡಿಎಸ್ ಸಭೆಗೆ ಗೈರಾಗಿದ್ದರು. ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಜೀಶ್ ಕುಮಾರ್ ಸಹಿತ ಪ್ರಮುಖರು ಗೈರಾಗಿದ್ದರು. ಎಸ್.ಬಿ. ಭರತ್ ಕುಮಾರ್, ವಿ.ಎಂ. ವಿಜಯ ಸೇರಿದಂತೆ ಇವರೆಲ್ಲರೂ ಬಿಜೆಪಿ ಸೇರುತ್ತಾರೆಂಬ ಮಾತುಗಳು ಕೇಳಿಬರುತ್ತಿರುವ ನಡುವೆಯೇ ಜೀವಿಜಯ ಅವರು ‘ಯಾರೇ ಹೋದರೂ ಪಕ್ಷದ ಮೇಲೆ ಪರಿಣಾಮ ಬೀರುವದಿಲ್ಲ’ ಎಂದು ಸಭೆಯಲ್ಲಿ ಸಮರ್ಥಿಸಿಕೊಂಡರು.

ಮಡಿಕೇರಿ: ಮಡಿಕೇರಿಯ ಚೇಂಬರ್ ಆಫ್ ಕಾಮರ್ಸ್ ಹಾಲ್‍ನಲ್ಲಿ ಕೊಡಗು ಜಿಲ್ಲಾ ಯುವ ಜನತಾದಳದ ಸಭೆ ನಡೆಯಿತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಯುವ ಜನತಾದಳದ ರಾಜ್ಯ ಕಾರ್ಯಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮೈಸೂರು ವಿಭಾಗಿಯ ಕಾರ್ಯಾಧ್ಯಕ್ಷ ನರಸಿಂಹಮೂರ್ತಿ, ರಾಜ್ಯ ಉಪಾಧ್ಯಕ್ಷ ಮತ್ತು ಜಿಲ್ಲಾ ಉಸ್ತುವಾರಿ ಡಾ. ಯಾಲದಾಳು ಮನೋಜ್ ಬೋಪಯ್ಯ, ಜಿಲ್ಲಾ ಮುಖಂಡರು ಮತ್ತು ಮಾಜಿ ಸಚಿವ ಜಿ. ವಿಜಯ, ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಕೊಡಗು ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ವಿಶ್ವ ಹಾಜರಿದ್ದರು.

ಸಭೆಯಲ್ಲಿ ನಗರ ಯುವ ಜನತಾದಳದ ಅಧ್ಯಕ್ಷ ರವಿಕಿರಣ್ ರೈ ಮತ್ತು ನಗರ ಯುವ ಜನತಾದಳದ ಕಾರ್ಯದರ್ಶಿ ಕೊಟ್ಟಗೆರೆನ ಅಜಿತ್ ಮತ್ತು ಜಿಲ್ಲಾ ಯುವ ಜನತಾದಳದ ಕಾರ್ಯದರ್ಶಿ ಜಶೀರ್ ಪಾಲ್ಗೊಂಡಿದ್ದರು.

ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಜೀವಿಜಯ ಕೊಡಗಿನ ಅಭಿವೃದ್ಧಿ ಆಗಬೇಕಿದ್ದರೆ ಜನತಾದಳ ಸರಕಾರ ಆಗಬೇಕು, ಕುಮಾರಸ್ವಾಮಿ ಆಡಳಿತ ನಡೆಸಬೇಕು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಕೊಡಗಿನ ಜ್ವಲಂತ ಸಮಸ್ಯೆಗಳು ಬಗೆಹರಿಯಬೇಕೆಂದರೆ ಜಾತ್ಯತೀತ ಜನತಾದಳ ಆಡಳಿತಕ್ಕೆ ಬರಬೇಕು ಎಂದು ಹೇಳಿದರು. ಡಾ. ಯಾಲದಾಳು ಮನೋಜ್ ಬೋಪಯ್ಯ ಮಾತನಾಡಿ, ಯುವ ಶಕ್ತಿಯನ್ನು ಶುದ್ಧ ರಾಜಕಾರಣದತ್ತ ಕೊಂಡೊಯ್ಯಬೇಕು ಎಂದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಅಧ್ಯಕ್ಷ ಶಿವದಾಸ್, ಅಲ್ಪಸಂಖ್ಯಾತರ ಅಧ್ಯಕ್ಷ ಇಸಾಕ್, ಅಲ್ಪಸಂಖ್ಯಾತರ ರಾಜ್ಯ ಕಾರ್ಯದರ್ಶಿ ಮನ್ಸೂರ್ ಅಲಿ, ಜಿಲ್ಲಾ ನಾಯಕ ಹೊಸೂರು ಸತೀಶ್, ಜಿಲ್ಲಾ ವಕ್ತಾರ ಆದಿಲ್ ಪಾಷ, ಪಿ.ಎಸ್. ಭರತ್ ಕುಮಾರ್, ಕಟ್ಟೆಮನೆ ವಿಠ್ಠಲ್‍ಗೌಡ, ಕೆ.ಎಂ.ಬಿ. ಗಣೇಶ್, ರಾಜೇಶ್ ಯಲ್ಲಪ್ಪ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುರೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಂಬುಗೌಡನ ಜಗದೀಪ್, ಮಡಿಕೇರಿ ಹೋಬಳಿ ಅಧ್ಯಕ್ಷ ಕುಂಬುಗೌಡನ ಹೇಮಂತ್, ಜಿಲ್ಲಾ ಮಹಿಳಾ ಸಂಘಟನೆ ಕಾರ್ಯದರ್ಶಿ ಮೇರಿ ಕ್ಲಾರಾ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮತೀನ್, ಭಾಗಮಂಡಲ ಹೋಬಳಿ ಅಧ್ಯಕ್ಷ ಪಾಣತ್ತಲೆ ವಿಶ್ವನಾಥ್ ಹಾಗೂ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.