ಶನಿವಾರಸಂತೆ, ಜ. 9: ಪ್ರತಿ ಗ್ರಾಮದಲ್ಲಿ ದೇವಾಲಯ, ಗುಡಿಗೋಪುರ, ಧಾರ್ಮಿಕ ಕೇಂದ್ರ ಹಾಗೂ ವಿದ್ಯಾಸಂಸ್ಥೆಗಳಿದ್ದರೆ, ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟರು.

ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲುವಾಗಿಲು ಗ್ರಾಮದ ಬಾಲ ತ್ರಿಪುರಸುಂದರಿ ಅಮ್ಮನವರ ಕ್ಷೇತ್ರದ ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇವರು ದೇವಾಲಯಗಳ ಬಗ್ಗೆ ಭಯ ಭಕ್ತಿ ಹಾಗೂ ಆಧ್ಯಾತ್ಮಿಕ ಚಿಂತನೆ ಜನರಲ್ಲಿ ಇರಬೇಕು. ಬಾಲತ್ರಿಪುರಸುಂದರಿ ಅಮ್ಮನವರ ದೇವಾಲಯದ ರಸ್ತೆ ಅಭಿವೃದ್ಧಿ ಮತ್ತಿತರ ಕಾಮಗಾರಿಗಳಿಗೆ ಈಗಾಗಲೇ ರೂ. 1 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ದೇವಾಲಯದ ಅಭಿವೃದ್ಧಿಗೆ ಸಮುದಾಯ ಭವನ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡಲು ಪ್ರಯತ್ನಿಸಲಾಗುವದು ಎಂದು ಶಾಸಕರು ಭರವಸೆ ನೀಡಿದರು.

ಸಮಾರಂಭ ಉದ್ಘಾಟಿಸಿದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ಧರ್ಮದ ಹಾದಿಯಲ್ಲಿ ಸಾಗಿದರೇ ಮಾತ್ರ ಸಮಾಜ ಸಂಸ್ಕಾರಗೊಳ್ಳುತ್ತದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಪಿ. ಪುಟ್ಟರಾಜ್ ಮಾತನಾಡಿ, ಭಕ್ತಿಯ ಮನೋಭಾವನೆಯಿಂದ ಸಾಧನೆ ಸಾಧ್ಯ ಎಂದರು.

ಕಾಂಗ್ರೆಸ್ ಮುಖಂಡ ಚಂದ್ರಮೌಳಿ, ನಿವೃತ್ತ ಐಎಎಸ್ ಅಧಿಕಾರಿ ವಿರೂಪಾಕ್ಷಯ್ಯ, ಗಣೇಶ್, ಮಹದೇವ ಪ್ರಸಾದ್, ಜೆಡಿಎಸ್ ಮುಖಂಡ ಮಲ್ಲೇಶ್ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ ಹಾಗೂ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ರಾಜಶೇಖರ್ ಮಾತನಾಡಿದರು. ದೇವಾಲಯ ಸಮಿತಿ ಅಧ್ಯಕ್ಷ ವರಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಿತಿ ಪದಾಧಿಕಾರಿಗಳಾದ ಶಾಂತೇಶ್, ಧರ್ಮಪ್ಪ, ರಾಜಶೇಖರ್, ರಾಜೇಗೌಡ, ಪ್ರಧಾನ ತಂತ್ರಿ ಸುನಿಲ್, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.