ಮಡಿಕೇರಿ, ಜ. 9: ಪುಣ್ಯ ಕ್ಷೇತ್ರ ತಲಕಾವೇರಿ - ಭಾಗಮಂಡಲದಲ್ಲಿ ಸ್ವಚ್ಛತೆ ಕಾಪಾಡಲು, ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳುವದಾಗಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.ನಗರದ ಹೆಲಿಪ್ಯಾಡ್‍ನಲ್ಲಿ ಜಿಲ್ಲಾಡಳಿತದಿಂದ ಗೌರವ ವಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಲಕಾವೇರಿ-ಭಾಗಮಂಡಲದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಕ್ಷೇತ್ರ ಅಶುಚಿತ್ವಕ್ಕೆ ಒಳಗಾಗುತ್ತಿದೆ ಎಂಬ ಬಗ್ಗೆ ಗಮನ ಸೆಳೆದಾಗ ಈ ಬಗ್ಗೆ ಪರಿಶೀಲಿಸಲಾಗುತ್ತದೆ. ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವದಾಗಿ ಹೇಳಿದರು.ತಾಲೂಕು ರಚನೆ ಕುರಿತು ಪ್ರತಿಕ್ರಿಯೆ

ಪೊನ್ನಂಪೇಟೆ ಹಾಗೂ ಕಾವೇರಿ ತಾಲೂಕು ರಚನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳುಸರ್ಕಾರ ಈ ಹಿಂದೆ ನಾಲ್ಕು ಸಮಿತಿಗಳನ್ನು ರಚಿಸಿ ಹೊಸ ತಾಲೂಕುಗಳ ರಚನೆಗೆ ಕ್ರಮಕೈಗೊಂಡಿತ್ತು. ಆದರೆ ಆ ಸಮಿತಿಗಳು ನೀಡಿದ ವರದಿಯಲ್ಲಿ ಕೊಡಗಿನಲ್ಲಿ ಎರಡು ತಾಲೂಕುಗಳ ರಚನೆ ಬಗ್ಗೆ ಸೇರ್ಪಟೆಗೊಂಡಿರಲಿಲ್ಲ. ಪ್ರಸ್ತುತ ಒತ್ತಾಯ ಹೆಚ್ಚಾಗುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಕೊಡಗಿನಲ್ಲಿ ನೂತನ ಎರಡು ತಾಲೂಕುಗಳ ರಚನೆ ಬಗ್ಗೆ ಕ್ರಮಕೈಗೊಳ್ಳಲಾಗುವದು ಎಂದು ಆಶ್ವಾಸನೆಯಿತ್ತರು.

ಎರಡು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ. ರಾಜ್ಯ ಅಸರ್ಕಾರ ಕೊಡಗಿಗಾಗಿ ವಿಶೇಷ ಅನುದಾನ ಗಳನ್ನು ಒದಗಿಸಿದೆ.

(ಮೊದಲ ಪುಟದಿಂದ) ಆದರೆ ಅವುಗಳನ್ನು ಸದುಪಯೋಗಪಡಿಸಿಕೊಂಡು, ಸರ್ಕಾರದ ಕೆಲಸಗಳನ್ನು ಜನರಿಗೆ ತಲಪಿಸುವಲ್ಲಿ ಇಲ್ಲಿನ ಶಾಸಕದ್ವಯರು ವಿಫಲರಾಗಿದ್ದಾರೆ. ಆದ್ದರಿಂದ ಜನತೆ ಬಿಜೆಪಿಯವರಿಗೆ ಮತ ಹಾಕುವದಿಲ್ಲ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು. ಯಾವತ್ತಿನ ಜಿಲ್ಲಾ ಯೋಜನೆಗಳೊಂದಿಗೆ ವಿಶೇಷವಾಗಿ ರೂ. 200 ಕೋಟಿ ವಿಶೇಷ ಪ್ಯಾಕೇಜನ್ನು ಕೊಡಗು ಜಿಲ್ಲೆಗೆ ಕಲ್ಪಿಸಲಾಗಿದೆ ಎಂದು ಅವರು ಈ ಸಂದರ್ಭ ಮಾಹಿತಿಯಿತ್ತರು.

ಆಹಾರ ಅವರವರಿಷ್ಟ

ಯಾವದೇ ವ್ಯಕ್ತಿಗಳಿಂದರೂ ಆಹಾರ - ಬಟ್ಟೆಯನ್ನು ಅವರಿಷ್ಟದಂತೆ ಬಳಸುತ್ತಾರೆ. ಅದಕ್ಕೆ ನಿಯಂತ್ರಣ ಹೇರುವದು ಸರಿಯಲ್ಲ. ತಮ್ಮ ಆರೋಗ್ಯಕ್ಕೆ ಯಾವ ಆಹಾರ ಪದಾರ್ಥ ಅನುಕೂಲವೋ ತಮಗೆ ಯಾವದು ಇಷ್ಟವೋ ಅವುಗಳನ್ನು ಉಪಯೋಗಿಸುತ್ತಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋ ಹತ್ಯೆ ನಿಷೇಧಿಸುವಂತೆ ಮಾಡಿದ್ದ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದರು. ಅಮಿತ್ ಷಾ ಒಂದು ಪಕ್ಷದ ಅಧ್ಯಕ್ಷರಾಗಿ ರಾಜ್ಯಕ್ಕೆ ಬರುತ್ತಿರುತ್ತಾರೆ. ಅವರನ್ನು ಇಲ್ಲಿಗೆ ಬರಬೇಡಿ ಎನ್ನಲು ಸಾಧ್ಯವಿಲ್ಲ. ಅವರು ಬಂದರೆಂದೂ ತಲೆಕಡಿಸಿಕೊಳ್ಳವದಿಲ್ಲ ಎಂದು ಸಿದ್ದರಾಮಯ್ಯ ನುಡಿದರು.

ಕುಮಾರಸ್ವಾಮಿ ಮಾಹಿತಿ ಕೊಡಲಿ

ಮಂಗಳೂರಿನ ಬಿಜೆಪಿ ಕಾರ್ಯಕರ್ತ ದೀಪಕ್ ಹತ್ಯೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪದಂತೆ ದೀಪಕ್ ಹತ್ಯೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಕೈವಾಡದ ಬಗ್ಗೆ ಅವರ ಬಳಿ ಮಾಹಿತಿಯಿದ್ದರೆ ಕುಮಾರಸ್ವಾಮಿಯವರೆ ಪೊಲೀಸ್ ಇಲಾಖೆಗೆ ನೀಡಲಿ ಎಂದು ಹೇಳಿದ ಮುಖ್ಯಮಂತ್ರಿಗಳು ದೀಪಕ್ ಹತ್ಯೆ ಸಂಬಂಧ ಯಾರ ಕೈವಾಡ ಇದೆ ಎಂಬ ಬಗ್ಗೆ ತನ್ನ ಬಳಿ ಮಾಹಿತಿ ಇಲ್ಲ ಎಂದರು.

ಮೈತ್ರಿ ಪ್ರಶ್ನೆಯೆ ಇಲ್ಲ

ವಿಧಾನಸಭಾ ಚುನಾವಣೆಯಲ್ಲಿ ಯಾವದೇ ಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳವದಿಲ್ಲ. ರಾಜ್ಯದೆಲ್ಲೆಡೆ ತಾನು ಪ್ರವಾಸ ಮಾಡುತ್ತಿದ್ದು, ತನ್ನ ನಿರೀಕ್ಷೆಗೂ ಮೀರಿ ಜನರ ಒಲವು ಕಾಂಗ್ರೆಸ್ ಮೇಲಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಖಡಾಖಂಡಿತವಾಗಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಬೇರೆ ಬೇರೆ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಲು ಬೇಡಿಕೆ ಬರುತ್ತಿದೆ. ಎಲ್ಲರೂ ಕರೆಯುವಲ್ಲಿಗೆ ಹೋಗಿ ಸ್ಪರ್ಧಿಸಲು ಸಾಧ್ಯವಿಲ್ಲ. ತಾನು ಚಾಮುಂಡೇಶ್ವರಿ ಕ್ಷೇತ್ರದಿಂದ 5 ಬಾರಿ ಗೆದ್ದಿದ್ದು, ಆ ಕ್ಷೇತ್ರದಲ್ಲಿಯೆ ಈ ಬಾರಿಯೂ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಯಡಿಯೂರಪ್ಪ ಅವರ ಮಿಷನ್ 150 ಈಗಾಗಲೇ ಠುಸ್ ಆಗಿದೆ ಎಂದು ಟೀಕಿಸಿದರು.

ಕೋಮುವಾದಿಗಳ ಕುಮ್ಮಕ್ಕಿನಿಂದ ಸಮಸ್ಯೆ

ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕೋಮುವಾದಿಗಳ ಕುಮ್ಮಕ್ಕೆ ಕಾರಣವಾಗಿದ್ದು, ಅದರಿಂದಲೇ ನಮಗೆ ಸಮಸ್ಯೆ ಆಗಿದೆ. ಕೋಮುವಾದ ಮಾಡುವವರು, ಕೋಮು ಪ್ರಚೋದನೆ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಎಚ್ಚರಿಕೆಯಿತ್ತರು.

ಸ್ಮಶಾನಕ್ಕೆ ಜಾಗ ನೀಡಲಾಗಿದೆ

ಪಾಲೆಮಾಡು ಕ್ರಿಕೆಟ್ ಸ್ಟೇಡಿಯಂ ವಿವಾದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉಸ್ತುವಾರಿ ಸಚಿವ ಸೀತಾರಾಂ ಅವರೊಂದಿಗೆ ವಿಮರ್ಷಿಸಿದ ಬಳಿಕ ಉತ್ತರಿಸಿದ ಮುಖ್ಯಮಂತ್ರಿಯವರು 2 ಎಕರೆ ಜಾಗವನ್ನು ಈಗಾಗಲೇ ಸ್ಮಶಾನಕ್ಕೆಂದು ಬಿಟ್ಟು ಕೊಡಲಾಗಿದೆ. ಹೆಚ್ಚಿನ ಬೇಡಿಕೆಯಿದ್ದಲ್ಲಿ ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವದು ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ, ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಮಾಜಿ ಸಚಿವೆ ಸುಮಾವಸಂತ್, ಬೆಳೆಗಾರರಾದ ವಿನೋದ್ ಶಿವಪ್ಪ, ಹಿರಿಯ ವಕೀಲ ಚಂದ್ರಮೌಳಿ, ಜಿ.ಪಂ. ಸಿಇಓ ಪ್ರಶಾಂತ್‍ಕುಮಾರ್ ಮಿಶ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಮತ್ತಿತರರು ಇದ್ದರು.