ಮಡಿಕೇರಿ, ಜ. 9: ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿ ದಂತೆ ಯಾವದೇ ಜಿಲ್ಲೆಗಳಿಗೂ ತಾರತಮ್ಯ ಮಾಡಿಲ್ಲವೆಂದು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಇಲ್ಲಿನ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಬೇರೆ ಪಕ್ಷದ ಶಾಸಕರಿದ್ದರೂ ಅಭಿವೃದ್ಧಿ ಕಾರ್ಯದಲ್ಲಿ ಯಾವದೇ ತಾರತಮ್ಯ ಮಾಡಿಲ್ಲ. ಈವರೆಗೆ ರೂ. 2097 ಕೋಟಿ ಅನುದಾನ ಜಿಲ್ಲೆಗೆ ಒದಗಿಸ ಲಾಗಿದೆ. ಅಲ್ಲದೆ ರಸ್ತೆ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್‍ನಡಿ ವಾರ್ಷಿಕ ರೂ. 50 ಕೋಟಿಯಂತೆ 200 ಕೋಟಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ. ಇದೀಗ ಮತ್ತೆ ರೂ. 132 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಗಿದೆ.

ರಾಜ್ಯ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಕೊಡಗು ಕೂಡ ಅಭಿವೃದ್ಧಿಯಾಗಬೇಕೆಂದು ಮುಖ್ಯಮಂತ್ರಿಗಳು ಹೇಳಿದರು.

ಅವಧಿ ಪೂರೈಸಿದ ಸರಕಾರ

ಮುಂಬರುವ ತಾ. 13ಕ್ಕೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 4 ವರ್ಷ 8 ತಿಂಗಳು ಪೂರೈಸಲಿದೆ. ದೇವರಾಜ ಅರಸು ಬಳಿಕ ಮುಖ್ಯಮಂತ್ರಿಗಯಾಗಿ 5 ವರ್ಷ ಪೂರೈಸಿದ ಸರಕಾರ ಇದಾಗಿದ್ದು, ಆ ಅವಕಾಶ ನನಗೆ ಸಿಕ್ಕಿದೆ. 2013ರಲ್ಲಿ ಚುನಾವಣೆ ಸಂದರ್ಭ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿನ ಭರವಸೆ ಗಳನ್ನು ಶೇ. 100ರಷ್ಟು ಈಡೇರಿಸಿ ದಂತಾಗಿದೆ ರಾಜ್ಯದ ಇತಿಹಾಸದಲ್ಲೇ ನೀಡಿದ ಭರವಸೆ ಈಡೇರಿಸಿದ ಸರಕಾರ ನಮ್ಮದು ಎಂದು ಮುಖ್ಯಮಂತ್ರಿಗಳು ಹೇಳಿದರು.

(ಮೊದಲ ಪುಟದಿಂದ) ಇದನ್ನು ಪ್ರಚಾರಕ್ಕಾಗಿ ಹೇಳುತ್ತಿಲ್ಲ. ಯಾರು ಬೇಕಾದರೂ ಪರಿಶೀಲಿಸ ಬಹುದಾಗಿದೆ. ನಮ್ಮ ಕಾರ್ಯಕರ್ತರು ಕೂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಎಲ್ಲಿಯೂ ಸುಳ್ಳು ಹೇಳಬೇಡಿ, ತಪ್ಪು ಮಾಹಿತಿ ನೀಡಬಾರದೆಂದು ಹೇಳಿದರು.

ಸರಕಾರಿ ಕೆಲಸ ದೇವರ ಕೆಲಸ

ಜನತೆ ನಮಗೆ ಅಧಿಕಾರ ಕೊಟ್ಟಿದ್ದು, ಮಜಾ ಮಾಡಲು, ಅನುಭವಿಸಲು ಅಲ್ಲ; ಜನರ ಸೇವೆ ಮಾಡಲು ಈ ಜವಾಬ್ದಾರಿ ನೀಡಲಾಗಿದೆ. ‘ಸರಕಾರದ ಕೆಲಸ ದೇವರ ಕೆಲಸ’ ಎಂಬ ಮಾತಿನ ಮೇಲೆ ನಂಬಿಕೆ ಇಟ್ಟವನು ನಾನು. ನಮ್ಮ ಪ್ರಣಾಳಿಕೆ ಯಲ್ಲಿ ಇಲ್ಲದ ಯೋಜನೆಗಳನ್ನು ಕೂಡ ನಾವು ಜಾರಿ ಮಾಡಿದ್ದೇವೆ. ರೈತರ ಸಾಲ ಮನ್ನ, ಅನಿಲ ಭಾಗ್ಯ, ಶೂ ಭಾಗ್ಯ, ಪಶುಭಾಗ್ಯ ಸೇರಿದಂತೆ ಇತರ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಅನ್ನಭಾಗ್ಯ ಜಾರಿ ಆದ ಮೇಲೆ ಪ್ರತಿ ಬಡವರು ಎರಡು ಹೊತ್ತು ಊಟ ಮಾಡುತ್ತಿ ದ್ದಾರೆಂದು ಮುಖ್ಯಮಂತ್ರಿಗಳು ಹೇಳಿದರು.

ಹುಟ್ಟಿದ ಪ್ರತಿಯೊಬ್ಬರೂ ಕಾಯಕ ಮಾಡಬೇಕು. ಕಾಯಕದಿಂದ ಉತ್ಪಾದಿಸಿದ ಉತ್ಪಾದನೆ ಹಂಚಿಕೆ ಯಾಗಬೇಕು. ಹಾಗಾದಾಗ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ದೊರೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕಾಯಕ ಮತ್ತು ದಾಸೋಹವನ್ನು ಅರಿತುಕೊಳ್ಳಬೇಕು ಉತ್ಪಾದನೆ ಹಂಚಿಕೆಯಾಗಬೇಕು. ಜೊತೆಗೆ ಅಧಿಕಾರ ಮತ್ತು ಸಂಪತ್ತು ಸಹ ಹಂಚಿಕೆಯಾಗಬೇಕು ಎಂದು ಬಸವಣ್ಣ, ಅಂಬೇಡ್ಕರ್, ಮಹಾತ್ಮ ಗಾಂಧಿ ಇವರೆಲ್ಲರೂ ಪ್ರತಿಪಾದನೆ ಮಾಡಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಸ್ಮರಿಸಿದರು.

ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸಮಾನತೆ ತರಲು ಸಾಧ್ಯ, ಸಂವಿಧಾನದ ಆಶಯವೂ ಅದೇ ಆಗಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ‘ಭಾರತೀಯರಾದ ನಾವು’ ಎಂಬದನ್ನು ಮರೆಯಬಾರದು ಎಂದರು.

ರಾಷ್ಟ್ರದಲ್ಲಿ ಹಿಂದೂ, ಮುಸ್ಲಿಂ, ಜೈನ, ಕ್ರಿಶ್ಚಿಯನ್, ಪಾರ್ಸಿ, ಬೌದ್ದ ಹೀಗೆ ಹಲವು ಧರ್ಮದವರು ವಾಸ ಮಾಡುತ್ತಿದ್ದಾರೆ. ಒಬ್ಬರು ಮತ್ತೊಬ್ಬ ರನ್ನು ಗೌರವಿಸಬೇಕು. ಸಮಾಜದ ಅಭಿವೃದ್ಧಿಗೆ ಪ್ರತಿ ಯೊಬ್ಬರೂ ಕೈಜೋಡಿಸಬೇಕು. ರಾಷ್ಟ್ರಕವಿ ಕುವೆಂಪು ಹೇಳಿರುವಂತೆ ರಾಜ್ಯ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬುದನ್ನು ಮರೆಯ ಬಾರದು. ಇದರಲ್ಲಿ ನಂಬಿಕೆ ಇಟ್ಟುಕೊಳಬೇಕು ಎಂದು ಅವರು ಹೇಳಿದರು.

ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಹೊಡೆಯಲು ಹೋಗ ಬಾರದು, ಸಾಮರಸ್ಯ, ಸೌಹಾರ್ದತೆ ಕಾಪಾಡಬೇಕು, ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಮುಖ್ಯಮಂತ್ರಿಯವರು ಪ್ರತಿಪಾದಿಸಿ ದರು.

ಅನ್ನ, ನೀರು, ವಸತಿ, ವಿದ್ಯೆ ಪ್ರತಿಯೊಬ್ಬರಿಗೂ ಸಿಗಬೇಕು. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಮನಸ್ವಿನಿ, ಮೈತ್ರಿ, ವಿದ್ಯಾಸಿರಿ, ಕ್ಷೀರಧಾರೆ ಹೀಗೆ ನಾನಾ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೊಳಿಸಿದೆ ಎಂದರು.

ಕ್ಷೀರಧಾರೆ ಯೋಜನೆಯಡಿ 1 ಲೀಟರ್ ಹಾಲಿಗೆ 5 ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ರಾಜ್ಯದಲ್ಲಿ 75 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ರೂ. 1200 ಕೋಟಿ ಸಹಾಯಧನ ಹಾಲು ಉತ್ಪಾದಕರಿಗೆ ದೊರೆಯುತ್ತಿದೆ. ಇದು ಎಲ್ಲಾ ರೈತರಿಗೆ ಒಳಿತಾಗಲಿಲ್ಲವೇ ಎಂದು ಮುಖ್ಯಮಂತ್ರಿಯವರು ಪ್ರಶ್ನಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಹಿಂದಿನ ಅವಧಿಯಲ್ಲಿ ಕೇವಲ ರೂ. 29 ಸಾವಿರ ಕೋಟಿ ಖರ್ಚು ಮಾಡಲಾಗಿತ್ತು, ಪ್ರಸ್ತುತ ಸರ್ಕಾರದಲ್ಲಿ ಎಸ್‍ಸಿಪಿ, ಟಿಎಸ್‍ಪಿ ಬಳಕೆ ಸಂಬಂಧ ಕಾಯ್ದೆ ಜಾರಿಗೊಳಿಸುವ ಮೂಲಕ ರೂ. 86 ಸಾವಿರ ಕೋಟಿ ಖರ್ಚು ಮಾಡಲಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು.

ಪರಿಶಿಷ್ಟರಿಗೆ ಗುತ್ತಿಗೆ ಪದ್ಧತಿಯಲ್ಲಿ ಮೀಸಲು, ಹಾಡಿ, ಹಟ್ಟಿ, ತಾಂಡಗಳಲ್ಲಿ ವಾಸಿಸುವವರಿಗೆ ಮನೆಯೊಡೆತನ, ಮಾತೃಪೂರ್ಣ ಯೋಜನೆ, ಕೃಷಿಹೊಂಡ ನಿರ್ಮಾಣ. ಜೊತೆಗೆ ಕೊಡಗು ಜಿಲ್ಲೆಯಲ್ಲಿ 34 ಸಾವಿರ ಜನರಿಗೆ ಸಾಲಮನ್ನಾ, ಭಾಗಮಂಡಲದಲ್ಲಿ ಮೇಲ್ಸೇತುವೆ. ಹೀಗೆ ಪ್ರಸ್ತುತ ಸರ್ಕಾರ ನುಡಿದಂತೆ ನಡೆದಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಹಿಂದೆ ರಾಜ್ಯ ಕೈಗಾರಿಕಾ ಕ್ಷೇತ್ರದಲ್ಲಿ 11 ನೇ ಸ್ಥಾನದಲ್ಲಿತ್ತು, ಈಗ ಕೈಗಾರಿಕಾ ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಪ್ರಥಮ ಸ್ಥಾನ ಪಡೆದಿದೆ. ತೆರಿಗೆ ಸಂಗ್ರಹದಲ್ಲಿ ಉತ್ತಮವಾಗಿದೆ. ಆ ದಿಸೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಮಾತನಾಡಿ, ಸರ್ಕಾರ ಕಳೆದ ನಾಲ್ಕುವರೆ ವರ್ಷದಲ್ಲಿ ಹಾರಂಗಿ ಜಲಾಶಯ ಹಿನ್ನೀರಿನ ಪ್ರದೇಶದಲ್ಲಿ ಮನೆ ಮತ್ತು ಭೂಮಿ ಕಳೆದುಕೊಂಡ ಜನರ ಹಲವು ದಶಕಗಳ ಬೇಡಿಕೆಯಾದ ಸೋಮವಾರಪೇಟೆ ತಾಲೂಕಿನ ಅತ್ತೂರು ಮತ್ತು ಯಡವನಾಡನ್ನು ಕಂದಾಯ ಗ್ರಾಮವನ್ನಾಗಿ ಪ್ರಕಟಿಸಿ ಅಲ್ಲಿನ ಜನರಿಗೆ ಆರ್‍ಟಿಸಿ ವಿತರಣೆ, ಅಕ್ರಮ-ಸಕ್ರಮ ಯೋಜನೆ 94 ಸಿ ಮತ್ತು 94 ಸಿಸಿ ರಡಿ ಸುಮಾರು 9 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ನಗರದ ಹೊರ ವಲಯದಲ್ಲಿ 5 ಎಕರೆ ಪ್ರದೇಶದಲ್ಲಿ ಸುಮಾರು 21 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ಭವನ ನಿರ್ಮಾಣಕ್ಕೆ ಚಾಲನೆ, ನಗರೋತ್ಥಾನ ಯೋಜನೆಯಡಿ ಕೊಡಗು ಜಿಲ್ಲೆಯ ಒಂದು ನಗರಸಭೆ ಮತ್ತು ಮೂರು ಪಟ್ಟಣ ಪಂಚಾಯತ್‍ಗಳಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸುಮಾರು ರೂ. 131 ಕೋಟಿ ಬಿಡುಗಡೆ, ಹಲವು ವರ್ಷಗಳ ಬೇಡಿಕೆಯಾದ ಜಿಲ್ಲೆಯ 528 ಆದಿವಾಸಿ ಕುಟುಂಬಗಳಿಗೆ ಜಿಲ್ಲೆಯ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟದಲ್ಲಿ ನಿವೇಶನ ಹಂಚಿಕೆ ಜೊತೆಗೆ ಮನೆ ನಿರ್ಮಾಣ ಪ್ರಗತಿಯಲ್ಲಿವೆ. ಹೀಗೆ ಸರ್ಕಾರ ಹಲವು ಮಹತ್ತರ ಕಾರ್ಯಗಳನ್ನು ಜಿಲ್ಲೆಯಲ್ಲಿ ಕೈಗೊಂಡಿದೆ ಎಂದು ವಿವರಿಸಿದರು. ಇದೇ ಸಂದರ್ಭ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಸರಕಾರೀ ಸವಲತ್ತು ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್, ನಿವೇಶನ ರಹಿತರಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ ಟಿ.ಪಿ.ರಮೇಶ್, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧಕ್ಷೆ ಪದ್ಮಿನಿ ಪೊನ್ನಪ್ಪ, ಜಿ.ಪಂ.ಅಧ್ಯಕ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಾಜಿ ಸಚಿವೆ ಸುಮಾವಸಂತ್, ಅರುಣ್ ಮಾಚಯ್ಯ ಇದ್ದರು.

ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಆದಿವಾಸಿ ಜನರು ಮುಖ್ಯಮಂತ್ರಿಯವರಿಗೆ ಬಿಲ್ಲು-ಬಾಣ ನೀಡಿ ಅಭಿನಂದಿಸಿದರು. ಜಿಲ್ಲಾಡಳಿತ ವತಿಯಿಂದ ಮುಖ್ಯಮಂತ್ರಿಯವರನ್ನು ಗೌರವಿಸಲಾಯಿತು.

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸ್ವಾಗತಿಸಿದರು, ಮಾದೇಟೀರ ಬೆಳ್ಯಪ್ಪ ನಿರೂಪಿಸಿದರು, ಭಾರತಿ ಮತ್ತು ತಂಡದವರು ನಾಡಗೀತೆ ಹಾಡಿದರು, ಕೆ.ವಿ.ಸುರೇಶ್ ವಂದಿಸಿದರು.