ಮಡಿಕೇರಿ, ಜ. 9: ಕರ್ನಾಟಕದ ಇತಿಹಾಸ ಗೊತ್ತಿಲ್ಲ ದವರಿಂದ ಟಿಪ್ಪು ಸುಲ್ತಾನ್ ಜಯಂತಿಗೆ ವಿರೋಧ ವ್ಯಕ್ತವಾಗುತ್ತಿದ್ದು, ಆತನೊಬ್ಬ ದೇಶಭಕ್ತನಾದ್ದರಿಂದ ಇತರ 25 ಮಂದಿ ಮಹಾಪುರುಷರ ಜಯಂತಿಯೊಂದಿಗೆ ಸರಕಾರವು, ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥನೆ ನೀಡಿದರು. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹುಬ್ಬಳ್ಳಿ ಭೇಟಿ ಸಂದರ್ಭ ಟಿಪ್ಪು ಜಯಂತಿಗೆ ಆಕ್ಷೇಪಿಸಿರುವದನ್ನು ಸಮಾವೇಶದಲ್ಲಿ ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಬ್ರಿಟಿಷರ ವಿರುದ್ಧ ಸತತ ಮೂರು ಬಾರಿ ಹೋರಾಟ ನಡೆಸಿದ್ದ ಟಿಪ್ಪು ದೇಶಭಕ್ತನಲ್ಲವೆ? ಎಂದು ಪ್ರಶ್ನಿಸಿದರು. ತನ್ನ ಮಕ್ಕಳನ್ನೇ ಬಲಿಕೊಟ್ಟು ಸ್ವಾಭಿಮಾನದಿಂದ ಯುದ್ಧದಲ್ಲಿ ಹೋರಾಡಿ ಮಡಿದ ಆತನ ಜಯಂತಿ ಆಚರಣೆ ದೇಶಭಕ್ತಿಯ ಪ್ರತೀಕವೆಂದು ಸಿದ್ದರಾಮಯ್ಯ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
ಇತಿಹಾಸವನ್ನು ಅಧ್ಯಯನ ಮಾಡದೆ ಆದಿತ್ಯನಾಥ್ ಆರೋಪಿಸುತ್ತಿದ್ದಾರೆ ಎಂದ ಅವರು, ಉತ್ತರ ಪ್ರದೇಶದಲ್ಲಿ ನೂರಾರು ಮಕ್ಕಳು ಆಸ್ಪತ್ರೆಯಲ್ಲಿ ಸಾವಿಗೀಡಾದ ಆಡಳಿತ ವೈಖರಿ ಕುರಿತು ವಿಷಾದಿಸಿದರು.
ಕರ್ನಾಟಕ ರಾಜ್ಯ ಸರಕಾರ ಟಿಪ್ಪು ಜಯಂತಿ ಮಾತ್ರವಲ್ಲದೆ ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ, ರಾಣಿ ಅಬ್ಬಕ್ಕ, ವಾಲ್ಮಿಕಿ, ಮಹಾವೀರ, ಅಕ್ಕಮಹಾದೇವಿ, ಶ್ರೀಕೃಷ್ಣ ಜಯಂತಿ ಯಂತಹ ಒಟ್ಟು 26 ಕಾರ್ಯಕ್ರಮ ಗಳನ್ನು ಆಚರಿಸುತ್ತಿದೆ ಎಂಬ ಅರಿವು ಟೀಕಾಕಾರರಿಗೆ ಇರ ಬೇಕೆಂದು ಅವರು ಬೊಟ್ಟುಮಾಡಿದರು.
ಎರಡು ನಾಲಿಗೆ: ಹಿಂದೆ ಕೆಜೆಪಿ ಪಕ್ಷ ಕಟ್ಟಿಕೊಂಡು ಟಿಪ್ಪುವನ್ನು ದೇಶಭಕ್ತನೆಂದು ಕೊಂಡಾಡುತ್ತಾ ಜಯಂತಿ ಆಚರಿಸಿದ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಹಾಗೂ ಇತರ ಮುಖಂಡರು, ಬಳಿಕ ಆತನನ್ನು ಮತಾಂಧನೆಂದು ಹೀಗೆಳೆಯುವದಾಗಿ ಟೀಕಿಸಿದ ಸಿದ್ದರಾಮಯ್ಯ; ಈ ಮಂದಿಗೆ ಎರಡು ನಾಲಿಗೆಯೆಂದು ಹರಿಹಾಯ್ದರು.
ಹಿಂದುತ್ವ ಗುತ್ತಿಗೆಯಲ್ಲ
ಹಿಂದುತ್ವದ ಬಗ್ಗೆ ತನಗೆ ಈಗಷ್ಟೇ ತನಗೆ ಒಲವು ಉಂಟಾಗಿದೆ ಎಂದು ಆದಿತ್ಯನಾಥ್ ಆರೋಪಿಸಿದ್ದಾರೆ. ನಾನು ಹಿಂದು, ಹಿಂದುಗಳು ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ. ಆದರೆ, ಬಿಜೆಪಿಯಲ್ಲಿ ಮನುಷ್ಯತ್ವವಿಲ್ಲದ ಹಿಂದುತ್ವವಿದ್ದರೆ, ಇತರ ಪಕ್ಷಗಳು ಮನುಷ್ಯತ್ವದ ಹಿಂದುತ್ವ ಉಳಿಸಿ ಕೊಂಡಿವೆ. ಹಿಂದುತ್ವ ಬಿಜೆಪಿಯ ಅಪ್ಪನ ಆಸ್ತಿಯಲ್ಲ ಎಂದು ಮುಖ್ಯಮಂತ್ರಿ ಕುಟುಕಿದರು. ಅವರಿಗೆ ಗುತ್ತಿಗೆ ಕೊಟ್ಟಿಲ್ಲವೆಂದು ಮುಖ್ಯಮಂತ್ರಿಗಳು ಹೇಳಿದರು. ದೇಶದಲ್ಲಿ 133 ವರ್ಷಗಳ ಇತಿಹಾಸ ದೊಂದಿಗೆ ಎಲ್ಲರನ್ನು ಸಮಾನತೆ ಯಿಂದ ಕಾಣುವ ಕಾಂಗ್ರೆಸ್‍ನಿಂದ ಮಾತ್ರ ದೇಶದ ಸಾಮರಸ್ಯವನ್ನು ಕಾಪಾಡಲು ಸಾಧ್ಯವೆಂದು ಅವರು ನುಡಿದರು.
ಸುಳ್ಳು-ಡೋಂಗಿಗಳ ಕೂಟ
ದೇಶದ ಪ್ರಧಾನಿ ಮೋದಿ ತಮ್ಮ ಅಧಿಕಾರದ ಅವಧಿಯಲ್ಲಿ ಯಾವ ಭರವಸೆಯನ್ನೂ ಈಡೇರಿಸದೆ ಜನರಿಗೆ ವಂಚಿಸಿದ್ದು, ಗುಜರಾತ್ ಗೃಹಮಂತ್ರಿ ಯಾಗಿದ್ದ ವೇಳೆ ಕೊಲೆ ಆರೋ¥ Àದೊಂದಿಗೆ ಜೈಲು ಸೇರಿದ್ದ ಆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ತಂಡ ಕಾಂಗ್ರೆಸ್ಸಿಗೆ ಬುದ್ಧಿ ಹೇಳುವ ನೈತಿಕತೆ ಹೊಂದಿಲ್ಲವೆಂದು ತೀಕ್ಷ್ಣ ನುಡಿಯಾಡಿದರು. ಜನತೆ ನೀಡಿದ ಅಧಿಕಾರ ಸಂದರ್ಭ ಚೆಕ್ ಮೂಲಕ ಲಂಚ ಪಡೆದು ಜೈಲು ಸೇರಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ತಂಡ ಭ್ರಷ್ಟಾಚಾರದೊಂದಿಗೆ ಕೋಮು ಗಲಭೆಗೆ ಬೆಂಕಿ ಹಚ್ಚುತ್ತಿರುವ ಸುಳ್ಳುಗಾರರು
(ಮೊದಲ ಪುಟದಿಂದ) ಮತ್ತು ಡೋಂಗಿ ಗಳೆಂದು ಸಿದ್ದರಾಮಯ್ಯ ಕುಟುಕಿದರು. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸತ್ತ ವ್ಯಕ್ತಿಯ ಶವದ ಮೇಲೆ ರಾಜಕೀಯ ಮಾಡುತ್ತಾ, ಕರ್ನಾಟಕದಲ್ಲಿ ಮತೀಯ ವೈಷಮ್ಯಕ್ಕೆ ಕಿಚ್ಚು ಹಚ್ಚುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಇಂಧನ ಸಚಿವ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಸಂಸದ ಕೆ.ಹೆಚ್. ಮುನಿಯಪ್ಪ ಅವರುಗಳು ಈ ಸಂದರ್ಭ ಸಮಾವೇಶದಲ್ಲಿ ಉದ್ದೇಶಿಸಿ ಮಾತನಾಡಿದರು.