ವೀರಾಜಪೇಟೆ: ಸಂತ ಅನ್ನಮ್ಮ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಘಟಕದ ವಾರ್ಷಿಕ ವಿಶೇಷ ಶಿಬಿರ ಇತ್ತೀಚೆಗೆ ಪಾಲಿಬೆಟ್ಟದ ಸಮೀಪ ಚೆನ್ನಂಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಸಂತ ಅನ್ನಮ್ಮ ವಿದ್ಯಾ ಸಂಸ್ಥೆಗಳ ಪ್ರಧಾನ ವ್ಯವಸ್ಥಾಪಕರಾದ ರೆ||. ಫಾ||. ಮದುಲೈ ಮುತ್ತು ನೆರವೇರಿಸಿದರು. ಕೊಡಗು ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ಚೆನ್ನಯ್ಯನಕೋಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ.ಕೆ.ಸಿ.ಗೀತಾ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ. ಎನ್. ಗೌತಮಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ವೈ. ಆರ್. ಕಾವೇರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಜಗನ್ನಾಥ್, “ಔದ್ಯೋಗಿಕ ಪ್ರಪಂಚ ಮತ್ತು ಪೂರ್ವ ಸಿದ್ಧತೆಗಳು” ಎಂಬ ವಿಚಾರವಾಗಿ, ಜಿಲ್ಲಾ ಕೃಷಿ ವಿಸ್ತರಣಾ ಘಟಕದ ಮುಖ್ಯಸ್ಥರಾದ ಡಾ|| ಕೆಂಚರೆಡ್ಡಿ “ಭೂಮಿ” ಎಂಬ ವಿಚಾರವಾಗಿ ಹಿರಿಯ ಪತ್ರಕರ್ತ ಪಿ. ಕೆ. ಅಬುಲ್ ರೆಹೆಮಾನ್ “ವ್ಯಕ್ತಿತ್ವ ವಿಕಸನ ಮತ್ತು ಸಮೂಹ ಮಾಧ್ಯಮ” ಎಂಬ ವಿಚಾರವಾಗಿ ಉಪನ್ಯಾಸ ನೀಡಿ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಶಿಬಿರದ ಅಂಗವಾಗಿ “ಸಮುದಾಯದತ್ತ ಆರೋಗ್ಯ ಚಿತ್ತ” ಎಂಬ ಧ್ಯೇಯದಡಿಯಲ್ಲಿ ಸ್ವಚ್ಛತಾ ಅರಿವು ಜಾಧಾ ನಡೆಯಿತು. ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ಮಹಾ ವಿದ್ಯಾಲಯದ ವತಿಯಿಂದ ಉಚಿತ ದಂತ ಪರೀಕ್ಷೆ ಹಾಗೂ ಅತ್ತೂರಿನ ಲೋಪಾಮುದ್ರ ಆಸ್ಪತ್ರೆಯ ವತಿಯಿಂದ ಉಚಿತ ಕಣ್ಣಿನ ಪರೀಕ್ಷೆ ನಡೆಯಿತು. ಗೋಣಿಕೊಪ್ಪ ಕಾವೇರಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಡಾ|| ಎ. ಸಿ. ಗಣಪತಿ “ಪ್ರಾಥಮಿಕ ಚಿಕಿತ್ಸೆ” ಕುರಿತು ಉಪನ್ಯಾಸ ನೀಡಿದರು. “ಸಮುದಾಯದ ಚಿತ್ತ ಶಾಲೆಯತ್ತ” ಎಂಬ ವಿಷಯದಲ್ಲಿ ಶಿಬಿರಾರ್ಥಿಗಳ ಮಧ್ಯೆ ಚಿಂತನ ಸಂವಾದ ನಡೆಯಿತು. “ಬುಡಕಟ್ಟು ಜನರ ಅಭಿವೃದ್ಧಿ ಮತ್ತು ಸವಾಲುಗಳು” ಎಂಬ ವಿಷಯದಲ್ಲಿ ಸಂವಾದ ಹಾಗೂ ಬುಡಕಟ್ಟು ಜನರ ಆಚಾರ,ವಿಚಾರ, ಬದುಕು, ಸಂಸ್ಕøತಿ ಪರಂಪರೆ ಮತ್ತು ಬವಣೆ ಕುರಿತು ವಿಶೇಷ ಕಾರ್ಯಕ್ರಮ ನಡೆಯಿತು.

ಶಿಬಿರದ ಸಮಾರೋಪ ಸಮಾರಂಭದಲ್ಲಿ ಚೆನ್ನಂಗಿ ಗ್ರಾಮ ಪಂಚಾಯ್ತಿ ಸದಸ್ಯ ಕೆ.ಎಸ್.ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಬೆನೆಡಿಕ್ಟ್ ಸಲ್ಡಾನಾರವರು ಪಾಲ್ಗೊಂಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ.ಲೋಕೇಶ್, ಶಿಬಿರ ನಿರ್ದೇಶಕರಾದ ಪ್ರಾಂಶುಪಾಲ ರೆ||ಫಾ||.ಐಸಕ್ ರತ್ನಾಕರ್, ರಾಷ್ಟ್ರೀಯ ಸೇವಾ ಯೋಜನಾಧಿ ಕಾರಿ ಅರ್ಜುನ್ ಹೆಚ್.ಆರ್ ಹಾಜರಿದ್ದರು.