ಭಾಗಮಂಡಲ, ಜ. 8: ರಕ್ತದಾನ ಮಹಾದಾನ ಯಾವದೇ ವ್ಯಕ್ತಿ ಇನ್ನೊಬ್ಬರ ಜೀವವನ್ನು ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಯಾವದೇ ಪ್ರತಿಫಲಾಪೇಕ್ಷೆ ಇಲ್ಲದೆ ನೀಡಿದರೆ ಹಲವರಿಗೆ ಪ್ರಯೋಜನವಾಗಬಲ್ಲದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾಪ್ರಭಾಕರ್ ಹೇಳಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಭಾಗಮಂಡಲ ಗ್ರಾಮ ಪಂಚಾಯಿತಿ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ವತಿಯಿಂದ ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಕಾವೇರಿ ನೀರು ಜೀವಜಲವಾಗಿದ್ದು ಕಾವೇರಿ ಕ್ಷೇತ್ರದಲ್ಲಿ ನೀರಿನ ಮಾಲಿನ್ಯವನ್ನು ತಡೆಗಟ್ಟಬೇಕಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕಸಗಳನ್ನು ಹಾಕುವದನ್ನು ನಿಷೇದಿಸಬೇಕು ಭಾಗಮಂಡಲ ಪ್ರದೇಶವನ್ನು ಮಾಲಿನ್ಯ ಮುಕ್ತ ಪ್ರದೇಶವನ್ನಾಗಿ ಮಾಡಬೇಕು ಎಂದರು. ರಕ್ತದಾನ ಶಿಬಿರದಲ್ಲಿ 38ಮಂದಿ ಸ್ವಯಂಪ್ರೇರಿತ ರಕ್ತದಾನ ಮಾಡಿದರು. ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾಗಮಂಡಲ ಗ್ರಾಮಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ, ಅರಣ್ಯ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಿ. ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸೊರಗಿಹಳ್ಳಿ, ಜಿಲ್ಲ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಶಿವಕುಮಾರ್ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಪಾರ್ವತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೊನ್ನಮ್ಮ ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷ ಭಾಸ್ಕರ್ ಪಾಲ್ಗೊಂಡಿದ್ದರು.