ಇದು ಕಳೆದು ಕೊಂಡವರ ನೋವಿನ ಕತೆ. ಕಸಿದುಕೊಂಡವರ ದಬ್ಬಾಳಿಕೆಯ ಪ್ರಹಸನವೂ ಹೌದು! ಹೊರನೋಟಕ್ಕೆ, ಹೊರಜಗತ್ತಿಗೆ ಕೊಡಗು ಒಂದು ಸುಂದರ, ಸಂಪತ್ತು ತುಂಬಿದ ಸುಖ ನೆಮ್ಮದಿಯ ತಾಣ. ಆದರೆ ಒಳಗೆ ಬೇಗುದಿಗಳು, ನೋವು-ಹತಾಶೆಗಳು, ಮುಂದೊಂದು ದಿನ ‘ಕೊಡಗು’ ಎಂಬ ಪ್ರದೇಶ ಕಣ್ಮರೆಯಾಗುವ ಎಲ್ಲಾ ಭೀತಿಗಳ ಮುಂದೆ ತಮ್ಮ ‘ಶಿಸ್ತು’ ಎಂಬ ಕವಚ ತೊಟ್ಟು ಮುದುಡಿ ಕುಳಿತಿದೆ.

ಹೇಗಿತ್ತು ಕೊಡಗು ? ಏನಿತ್ತು ಇದರ ಪರಂಪರೆ-ಇತಿಹಾಸ? ಕೊಡಗು ಒಂದು ದೇಶವೇ ಆಗಿತ್ತು. ಎಲ್ಲೂ ಕಾಣಿಸಿಕೊಳ್ಳದ ವಿಭಿನ್ನ ಸಂಸ್ಕøತಿಯ ವಿಶಿಷ್ಟ ಜನಾಂಗದ ಪ್ರದೇಶ. ವೀರ ಪರಂಪರೆಯನ್ನು ದೇಶಭಕ್ತಿಗೆ ಸಮರ್ಪಿಸಿಕೊಳ್ಳುವ ಅಪರೂಪದ ಪ್ರದೇಶ. ಅನೇಕ ರಾಜರು ಆಳಿದರು, ದಬ್ಬಾಳಿಕೆಯಲ್ಲಿ ಮೆರೆದರು. ಗಂಗರು, ಚೋಳರು, ಚಾಲುಕ್ಯರು, ವಿಜಯನಗರದ ಅರಸರು, ಇಕ್ಕೇರಿ ದೊರೆಗಳು, ಹೈದರಾಲಿ, ಟಿಪ್ಪು ಮತ್ತು ಬ್ರಿಟಿಷರು ಹೀಗೆ... ದಾಳಿಗಳು ನಡೆದವು, ಲೂಟಿ-ಮತಾಂತರಗಳು ನಡೆದವು. ಆದರೆ ಕೊಡಗಿನ ಸಂಸ್ಕøತಿ ಬದಲಾಗಲಿಲ್ಲ. ಭಾಷೆಯನ್ನು ಬಿಟ್ಟುಕೊಡಲಿಲ್ಲ. ಕೊಡಗೆಂಬ ಪ್ರೀತಿಯ ಅಕ್ಕರೆಯನ್ನು ಎಂದೂ ಬಿಡಲಿಲ್ಲ. ಇದು ನಮ್ಮ ನಾಡು, ‘ಕೊಡಗೆಂದರೆ ನಮ್ಮ ರಕ್ತ-ನಮ್ಮ ಹೃದಯ’ ಎಂದು, ಕೊಡಗೆಂದರೆ ಕಾವೇರಿ ಮಾತೆಯ ಒಡಲು ಎಂದು ಪೂಜಿಸಿಕೊಂಡು ಬಂದವರು.

ಇಂತಹ ನಾಡು, ದೇಶದ ಹೆಮ್ಮೆಯನ್ನು ಕೊಂದವರು ಯಾರು? ಕೊಡಗನ್ನು ದರೋಡೆ ಮಾಡಿದವರು ಯಾರು? ಕೊಡಗಿನವರು ಕಳೆದುಕೊಂಡು ಅನಾಥ ಪ್ರಜ್ಞೆಯಿಂದ ಮುದುಡಿ ಕುಳಿತದ್ದು ಎಲ್ಲಿ? ಇದೇ ಕಳೆದುಕೊಂಡವರ ನೋವಿನ ಕತೆ.

ಕೊಡಗಿಗೆ ಅಲ್ಪವಾದರು ಮರ್ಯಾದೆಯನ್ನು ಕೊಟ್ಟವರು ಬ್ರಿಟಿಷರು ಎಂದೇ ಹೇಳಬೇಕು. ಕೊಡಗಿನಲ್ಲಿ ಪ್ರಥಮಬಾರಿಗೆ ವಿದ್ಯಾಕೇಂದ್ರಗಳನ್ನು ತೆರೆದು ಜನತೆಯನ್ನು ಶಿಕ್ಷಣದತ್ತ ಮುಖಾಮುಖಿಗೊಳಿಸಿದರು. ಕಾಫಿ ತಂದು ಬಿತ್ತಿ ಕೊಡಗಿನ ಆರ್ಥಿಕತೆಯನ್ನು ಸುಧಾರಿಸಿದರು. ಗೋಹತ್ಯೆ ನಿಷೇಧ ತಂದು, ಬಂದೂಕು ಪಡೆಯಲು ಪರವಾನಗಿ ವಿನಾಯಿತಿ ಕೊಟ್ಟು ಸಂಸ್ಕøತಿ ಉಳಿಸಿದರು. ಯೋಧ ಪರಂಪರೆಯ ವಿಶೇಷವಾಗಿ ಕೊಡವರಿಗಾಗಿ ‘ಕೂರ್ಗ್ ರಿಜಿಮೆಂಟ್’ ಎಂಬ ಪಡೆಯನ್ನು ಭಾರತೀಯ ಸೇನೆಯಲ್ಲಿ ಸ್ಥಾಪಿಸಿದರು.

ಕೊಡಗು ಮೊದಲು ಕಳೆದುಕೊಳ್ಳಲು ಆರಂಭಿಸಿದ್ದು 1924ರಿಂದ. ಕೊಡಗಿನಲ್ಲಿದ್ದ 6 ತಾಲೂಕುಗಳು 3 ತಾಲ್ಲಕಿಗೆ ಇಳಿಯಿತು. ಹಿಂದೆ ಇದ್ದ ಎರೆಡೆರಡು ತಾಲೂಕನ್ನು ಸೇರಿಸಿ ಒಂದೊಂದು ಮಾಡಿ, ಹಿಂದೆ ಇದ್ದ ತಾಲ್ಲೂಕಿಗೆ ಪಾರುಪತ್ಯೆಗಾರರನ್ನು ನೇಮಿಸಿದರು. ಅಂದರೆ ಈಗಿನ ಉಪತಹಶೀಲ್ದಾರ್. ಏನೇ ಆದರೂ ಕೊಡಗಿನ 6 ತಾಲೂಕು ಮೂರಾಯಿತು. ಹಿಂದಿನ ಹೆಸರುಗಳು ಮಾಯವಾಗಿ ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ಎಂಬ ತಾಲೂಕು ಹೆಸರುಗಳಾದವು. ಕೊಡಗು ಪ್ರಾಂತ್ಯದಲ್ಲಿ ಹೀಗೆ ಮೂರು ತಾಲೂಕುಗಳಾದರು ‘ಕೂರ್ಗ್ ಲೆಜಿಸ್ಲೇಟಿವ್ ಕೌನ್ಸಿಲ್’ ಎಂಬ ಆಡಳಿತ ವ್ಯವಸ್ಥೆಯನ್ನು ಆರಂಭಿಸಲಾಯಿತು.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 1951ರಲ್ಲಿ ರಾಜ್ಯ ವಿಂಗಡನೆ ಕಾನೂನಿನಂತೆ ಕೊಡಗನ್ನು ‘ಸಿ’ ರಾಜ್ಯ ಎಂದು ಗುರುತಿಸಲಾಯಿತು. ನಾಡುಗಳ ಆಧಾರದಲ್ಲಿ 24 ಸದಸ್ಯರ ವಿಧಾನಸಭೆ ರಚನೆಯಾಯಿತು. 1952ರಲ್ಲಿ ಕೊಡಗು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದು 17-03-1952ರಂದು ಸಿ.ಎಂ ಪೂಣಚ್ಚ ಮುಖ್ಯಮಂತ್ರಿಯಾದರು. ಕೆ. ಮಲ್ಲಪ್ಪ ಗೃಹಮಂತ್ರಿಯಾಗಿ, ಬಿ.ಎಸ್ ಕುಶಾಲಪ್ಪ ವಿಧಾನಸಭೆಯ ಅಧ್ಯಕ್ಷರಾದರು. ತನ್ನದೇ ಆದ ಸ್ವತಂತ್ರ ಆಡಳಿತ ವ್ಯವಸ್ಥೆಯ ಆ ಕಾಲ ಕೊಡಗಿನ ಸುವರ್ಣಯುಗ ಎಂದು ಕೊಡಗಿನ ಹಿರಿಯರು ನೆನೆಸಿಕೊಳ್ಳುತ್ತಾರೆ.

‘ಸಿ’ ರಾಜ್ಯ ಎಂಬ ಸುಂದರ ಕಲ್ಪನೆಯ ಸಣ್ಣ ರಾಜ್ಯ, ಇದಕ್ಕೊಂದು ವಿಧಾನಸಭೆ ಕೇವಲ ನಾಲ್ಕು ವರ್ಷಗಳ ಕನಸಾಯಿತು. ಆದರೆ ಭಾರತದ ಒಕ್ಕೂಟದಲ್ಲಿ ಇಂತಹ ಸಣ್ಣ ರಾಜ್ಯಗಳು ಇಂದಿಗೂ ಇದೆ. ಆದರೆ ಕೊಡಗು ಮಾತ್ರ 1956 ನವೆಂಬರ್ 1 ರಂದು ಕಳೆದು ಹೋಯಿತು. ಮೈಸೂರೆಂಬ ವಿಶಾಲ ರಾಜ್ಯದಲ್ಲಿ ಕರಗಿ ಹೋಯಿತು. ದೇಶ, ಪ್ರಾಂತ್ಯ, ರಾಜ್ಯ ಎಂದೆಲ್ಲಾ ಕರೆಸಿಕೊಂಡು ಮೆರೆದ ನಾಡು ಕೇವಲ ಮೂರು ತಾಲೂಕಿನ ಮೈಸೂರು ರಾಜ್ಯದ ಅತ್ಯಂತ ಸಣ್ಣ ‘ಜಿಲ್ಲೆ’ ಯಾಗಿ 24 ಶಾಸಕರನ್ನು ಕಳೆದುಕೊಂಡು ಕೇವಲ 3 ಶಾಸಕರಿಗೆ ಇಳಿದು ಹೋಯಿತು. ಕೇವಲ ಮೂವರು ತಹಶೀಲ್ದಾರರು, ಮೂವರು ಡಿ.ವೈ.ಎಸ್.ಪಿಗಳು ನಿಭಾಯಿಸಬಲ್ಲ ಜಿಲ್ಲೆಯಾಯಿತು. ರಾಜಕೀಯವಾಗಿ ‘ಲಾಭಿ’ ಮಾಡಲಾಗದ, ಯಾರು ಗಂಭೀರವಾಗಿ ಪರಿಗಣಿಸದ ರಾಜಕೀಯ ಶಕ್ತಿ ಇಲ್ಲದ ಒಂದು ಪ್ರದೇಶವಾಯಿತು. 224 ವಿಧಾನಸಭಾ ಶಾಸಕರಲ್ಲಿ ಕೊಡಗಿನ (3) ಶಾಸಕರ ಸಂಖ್ಯೆ ಯಾವುದೇ ಪರಿಣಾಮ ಬೀರದೆ ಹೋಯಿತು. ಲೆಕ್ಕಕುಂಟು ಆಟಕ್ಕಿಲ್ಲ ಎಂಬಂತಾಯಿತು. ಕೊಡಗು ಕಳೆದುಕೊಳ್ಳುವ ಪರಂಪರೆ ಇಲ್ಲಿಗೆ ಮುಗಿಯಲಿಲ್ಲ, ಮತ್ತು ಮುಂದುವರೆಯಿತು. ಜನಸಂಖ್ಯಾ ಆಧಾರದಲ್ಲಿ ಶಾಸನಸಭೆಯ ವಿಧಾನಸಭಾ ಕ್ಷೇತ್ರ ಪುನರ್ ವಿಂಗಡಣೆ ನಡೆಯಿತು. ಕೊಡಗಿನ ಜನ ಈಗ ಇರುವ ಮೂರು ವಿಧಾನಸಭಾ ಕ್ಷೇತ್ರಗಳನ್ನಾದರೂ ಉಳಿಸಿಕೊಡಿ, ಕಾಪಾಡಿ ಎಂದು ಗೋಗರೆದರು. ರಾಜಕೀಯ ಇಚ್ಚಾಶಕ್ತಿಯ ಕೊರತೆಯ ಫಲ ಕೊಡಗಿನ ಕೂಗನ್ನು ಯಾರೂ ಕೇಳಲಿಲ್ಲ. ಮೂರಿದ್ದ ವಿಧಾನಸಭಾ ಕ್ಷೇತ್ರ ಎರಡಾಯಿತು. ಸೋಮವಾರಪೇಟೆ ವಿಧಾನಸಭಾ ಕ್ಷೇತ್ರವೇ ಕಣ್ಮರೆಯಾಗಿ ಹೋಯಿತು. ಅತ್ತ ಲೋಕಸಭಾ ಕ್ಷೇತ್ರವು ಮೈಸೂರಿನೊಂದಿಗೆ ಸೇರಿಹೋಯಿತು. ಎಂತಹ ಹೀನ ಸ್ಥಿತಿ!

ಹೀಗೆ ಎಲ್ಲವನ್ನು ಕಳೆದುಕೊಳ್ಳುತ್ತಿರುವುದರಿಂದಲೇ ಕೊಡಗಿನ ಜನ ಒಮ್ಮೊಮ್ಮೆ ನಮಗೆ ಹಿಂದೆ ಇದ್ದ ರಾಜ್ಯವನ್ನು ಮರಳಿಕೊಡಿ ಎಂದು ಬೀದಿಗಿಳಿಯುತ್ತಾರೆ. ಈಗಾಗಲೇ ಕೊಡಗಿಗೆ ಬರೆಯ ಮೇಲೆ ಬರೆ ಎಳೆಯಲಾಗುತ್ತಿದೆ. ಹಾರಂಗಿ ಅಣೆಕಟ್ಟು ಯೋಜನೆಯಿಂದ ಸಾಕಷ್ಟು ಪ್ರದೇಶ ಮುಳುಗಡೆಯಾಯಿತು. ಕೇರಳಕ್ಕೆ ವಿದ್ಯುತ್ ಎಂದು ಕೊಡಗಿನ ಮಧ್ಯಕ್ಕಾಗಿ ಹೈಟೆನ್ಷನ್ ವಿದ್ಯುತ್ ತಂತಿ ಎಳೆದು ಬೆಲೆ ಕಟ್ಟಲಾಗದ ಅರಣ್ಯ ನಾಶವಾಯಿತು. ಇದೀಗ ಅದೇ ಕೇರಳಕ್ಕೆ ರೈಲು ಮಾರ್ಗ ಬರುತ್ತಿದೆ. ಅರಣ್ಯದ ಸಾಲು ಸಾಲು ಮರಗಳು ಧರೆಗುರುಳಲಿದೆ. ಇನ್ನು ಬರಪೊಳೆ ಯೋಜನೆ ಬಂದರೆ ಕೊಡಗೇ ಕಣ್ಮರೆ.

ಮೈಸೂರು ರಾಜ್ಯ ಕರ್ನಾಟಕವಾದ ನಂತರ ಎಲ್ಲೆಲ್ಲಿ ರಾಜಕೀಯ ಶಕ್ತಿಗಳು ಹೆಚ್ಚಿದೆಯೋ ಅಲ್ಲೆಲ್ಲ ರಾಜಕೀಯದ ಆಟ ನಡೆಯುತ್ತಾ ಹೋಯಿತು. 1973ರಿಂದ ಹೊಸ ತಾಲೂಕುಗಳ ರಚನೆಗೆ ಕಸರತ್ತು ನಡೆದವು. 1973ರಲ್ಲಿ ವಾಸುದೇವ ಆಯೋಗ, 1984ರಲ್ಲಿ ಟಿ.ಎಂ ಹುಂಡೇಕರ್ ಸಮಿತಿ, 1986ರಲ್ಲಿ ಪಿ.ಸಿ ಗದ್ದಿಗೌಡರ್ ಸಮಿತಿ, 2007ರಲ್ಲಿ ಎಂ.ಬಿ ಪ್ರಕಾಶರ ಸಮಿತಿ ಆಯಾ ಕಾಲಕ್ಕೆ ರಾಜ್ಯದಲ್ಲಿ ಹೊಸ ತಾಲೂಕುಗಳ ಪಟ್ಟಿಯನ್ನು ಕೊಡುತ್ತಾ ಹೋದವು. ಹೀಗೆ ರಾಜ್ಯದಲ್ಲಿ ರಚಿಸಬೇಕಾದ ಹೊಸ ತಾಲೂಕುಗಳು 40 ಎಂದು ಶಿಫಾರಸ್ಸು ಮಾಡಲಾಯಿತು. ತುಂಬಾ ಆಶ್ಚರ್ಯ ಮತ್ತು ತಮಾಶೆ ಎಂದರೆ ಮೇಲಿನ ಯಾವ ಸಮಿತಿಯೂ ಶಿಫಾರಸ್ಸು ಮಾಡದ, ಆಡಳಿತರೂಡ ಪಕ್ಷದ ಮೂಗಿನ ನೇರಕ್ಕೆ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾವುದೇ ಮಾನದಂಡವಿಲ್ಲದ 9 ಪ್ರದೇಶಗಳನ್ನು ಹೊಸ ತಾಲೂಕುಗಳೆಂದು ಹೀಗೆ ಒಟ್ಟು 49 ತಾಲೂಕುಗಳೆಂದು (ಸರ್ಕಾರದ ಆದೇಶ ಸಂಖ್ಯೆ ಕ0ಇ 35 ಭೂದಾಪು 2017 ದಿನಾಂಕ 06-09-2017) ಆದೇಶ ಹೊರಡಿಸಿದೆ. ಇದರ ಜೊತೆಗೆ ಮಂತ್ರಿಯೊಬ್ಬರ ಒತ್ತಡದಿಂದ ಮೂಡಲಗಿ ಪಟ್ಟಣವನ್ನು ನೂತನ ತಾಲೂಕು ಪಟ್ಟಿಗೆ ಸೇರಿಸಿ ಒಟ್ಟು 50 ನೂತನ ತಾಲೂಕು ಎಂದು ಆದೇಶ ಹೊರಡಿಸಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ, ಕುಶಾಲನಗರ, ನಾಪೋಕ್ಲು ತಾಲ್ಲೂಕು ರಚನೆಗೆ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಆದರೆ ಈ ಬೇಡಿಕೆಯನ್ನು ಎಂ.ಬಿ ಹತ್ತಿರದಲ್ಲಿದೆ. ಜನಸಂಖ್ಯೆ ಕಡಿಮೆ ಇರುವ ಚಿಕ್ಕ ತಾಲೂಕು ಆಗುತ್ತದೆ, ಈಗಾಗಲೇ ತಾಲೂಕಿಗಿರುವ ವಿವಿಧ ಇಲಾಖೆಗಳು ಇದೆ, ಅರಣ್ಯ ಪ್ರದೇಶ ಹೆಚ್ಚಿದೆ. ಇತ್ಯಾದಿ ಕಾರಣ ಕೊಟ್ಟು ಕೊಡಗಿನಲ್ಲಿ ಹೊಸ ತಾಲೂಕಿನ ಅವಶ್ಯಕತೆ ಇಲ್ಲ ಎಂದು ಮನವಿಯನ್ನು ತಿರಸ್ಕರಿಸಿದೆ.

ಆದರೆ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿರುವ ತಾಲೂಕುಗಳಲ್ಲಿ ತಾಲೂಕು ಆಗಲು ಯಾವ ಅರ್ಹತೆಯನ್ನು ಪಡೆಯದವು ಸೇರಿವೆ. ಕೇವಲ 40 ಸಾವಿರ ಜನಸಂಖ್ಯೆಯಿರುವ ಪ್ರದೇಶವನ್ನು ತಾಲೂಕು ಮಾಡಿದೆ. ಪ್ರಸಕ್ತ ತಾಲ್ಲೂಕಿನಿಂದ ಕೇವಲ 25 ಕಿ.ಮೀ ದೂರ ಇರುವ ಪ್ರದೇಶವನ್ನು ತಾಲೂಕು ಮಾಡಿದೆ. ಯಾವ ಸಮಿತಿಯು ಶಿಫಾರಸ್ಸು ಮಾಡದ ಪ್ರದೇಶಗಳನ್ನು ತಾಲೂಕನ್ನಾಗಿ ಘೋಷಿಸಿದೆ. ತಮ್ಮ ವಾದ ಸಮರ್ಥಿಸಿ ಕೊಳ್ಳಲು ಜನಸಂಖ್ಯೆ ಕಡಿಮೆ ಇರುವುದನ್ನು ಅರಣ್ಯ ಪ್ರದೇಶ ಹೆಚ್ಚಾಗಿರುವುದರಿಂದ ಎಂದು ಕಾರಣ ನೀಡಿದೆ. ಯಾವ ಯಾವ ಪ್ರಭಾವಿ ಮಂತ್ರಿ, ಶಾಸಕ ಕೇಳಿದ್ದಾರೋ ಅದೆಲ್ಲವೂ ತಾಲೂಕು ಆಗಿಬಿಟ್ಟಿದೆ. ಚುನಾವಣೆಗೆ ‘ ಗಿಫ್ಟ್’ ಎಂದು ಕೆಲವು ಹೊಸ ತಾಲೂಕು ಕೊಡಲಾಗಿದೆ.

ಪೊನ್ನಂಪೇಟೆ ತಾಲೂಕಿಗೆ 1,01388 ಜನಸಂಖ್ಯೆ ಇದೆ. ಬಿರುನಾಣಿ ತೆರಾಲಿನಿಂದ ವಿರಾಜಪೇಟೆಗೆ 40 ಕ್ಕಿಂತಲೂ ಹೆಚ್ಚು ಕಿ.ಮೀ ದೂರವಿದೆ. ಪೊನ್ನಂಪೇಟೆ ವಿಸ್ತೀರ್ಣ 1065 ಚ. ಕಿ.ಮೀ ಇದ್ದು 21 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದೆ. ವಿರಾಜಪೇಟೆ ತಾಲೂಕಿನಲ್ಲಿ ಉಳಿವ ಜನಸಂಖ್ಯೆ 1 ಲಕ್ಷಕ್ಕೂ ಮೀರುತ್ತದೆ. ಆ ತಾಲೂಕಿನ ವಿಸ್ತೀರ್ಣ 621.55 ಚ. ಕಿ.ಮೀ ಆಗಿದ್ದು 16 ಗ್ರಾಮ ಪಂಚಾಯಿತಿಯನ್ನು ಒಳಗೊಳ್ಳುತ್ತದೆ. ಕುಶಾಲನಗರ ತಾಲೂಕಿನಲ್ಲಿ 1,11,882 ಜನಸಂಖ್ಯೆ ಇದ್ದು ದೂರದಿಂದ ಅಂದರೆ 30 ಕಿ.ಮೀ ದುರದಿಂದ ಬರಬೇಕಾಗುತ್ತದೆ. ಕುಶಾಲನಗರದ ವಿಸ್ತೀರ್ಣ 467.31 ಚ. ಕಿ.ಮೀ ಇದ್ದು 20 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದೆ. ಉಳಿದ ಸೋಮವಾರಪೇಟೆ 527.61 ಚ. ಕಿ.ಮೀ ಇದ್ದು 22 ಗ್ರಾಮ ಪಂಚಾಯಿತಿಯನ್ನು ಒಳಗೊಂಡಿದೆ. ನಾಪೋಕ್ಲು ತಾಲ್ಲೂಕಿಗೆ 51,506 ಜನಸಂಖ್ಯೆ ಇದ್ದು 30 ಕಿ.ಮೀ ದೂರ ಮಡಿಕೇರಿಗೆ ಬರಬೇಕಾಗುತ್ತದೆ. ಈ ಎಲ್ಲಾ ಪ್ರದೇಶದಲ್ಲೂ ದೊಡ್ಡ ವಿಸ್ತೀರ್ಣದ ಅರಣ್ಯ ಪ್ರದೇಶವಿದೆ.

ಹೆಚ್ಚು ಅರಣ್ಯ ಪ್ರದೇಶ ವ್ಯಾಪಿಸಿಕೊಂಡಿದ್ದರೂ ಜನಸಂಖ್ಯೆ ಕಡಿಮೆಯಿಲ್ಲ. ಇದು ಬೆಟ್ಟಗುಡ್ಡಗಳ ಪ್ರದೇಶ. ದೂರವನ್ನು ಕಿ.ಮೀ ಲೆಕ್ಕದಲ್ಲಿ ಅಳೆಯುವುದು ಅವೈಜ್ಞಾನಿಕವಾಗುತ್ತದೆ. ಎಲ್ಲಾ ಅರ್ಹ ಮಾನದಂಡವಿದ್ದರು ಕೊಡಗು ಜಿಲ್ಲೆಗೆ ಅನ್ಯಾಯ ಮಾಡಲಾಗುತ್ತಿದೆ. ಇನ್ನು ಒಂದು ಪ್ರಶ್ನೆ ಕೊಡಗು ಜಿಲ್ಲೆಯಲ್ಲಿ ಹಿಂದೆ 6 ತಾಲೂಕು ಇತ್ತು, ಅದನ್ನೇ ಕೇಳುತ್ತಿದ್ದಾರೆ ವಿನಃ ಹೊಸ ತಾಲೂಕುಗಳನ್ನು ಅಲ್ಲ. ಯಾರೂ ಕೇಳದೇ, ಯಾವ ಮಾನದಂಡವೂ ಇಲ್ಲದೆ ತಾಲೂಕುಗಳನ್ನು ‘ಗಿಫ್ಟ್’ ಆಗಿ ಸರ್ಕಾರ ಕೊಟ್ಟಿದೆ. ಹೀಗಿರುವಾಗ ಕೊಡಗಿಗೇಕೆ ಅನ್ಯಾಯ ಮಾಡುತ್ತಿದೆ. ಕೊಡಗಿನ ಪೊನ್ನಂಪೇಟೆ ಮತ್ತು ಕುಶಾಲನಗರದಲ್ಲಿ ಹಲವು ವರ್ಷಗಳಿಂದ ‘ಮಹದಾಯಿ’ ಯಂತೆ ನಿತ್ಯ ಹೋರಾಟ, ಧರಣಿ ಮುಷ್ಕರ ನಡೆಯುತ್ತಿದೆ. ಅದು ಶಾಂತ ರೀತಿಯಿಂದ, ಕಾನೂನುಭಂಗವಾದ ಒಂದೇ ಒಂದು ಪ್ರಕರಣ ನಡೆದಿಲ್ಲ.

ರಾಜ್ಯದ ಘನತೆವೆತ್ತ ಮುಖ್ಯಮಂತ್ರಿಗಳೇ ಕೊಡಗಿನವರ ಕೂಗು ನಿಮಗೇಕೆ ಕೇಳಿಸುತ್ತಿಲ್ಲ. ಕೊಡಗಿಗೆ ಕಾನೂನುಬದ್ಧವಾಗಿ ತಾಲೂಕುಗಳನ್ನು ಕೊಡಿ. ಕನಿಷ್ಟ ಶಿಸ್ತು, ಶಾಂತಿಪ್ರಿಯ ಕೊಡಗಿನವರ ಸಜ್ಜನಿಕೆಯ ನೋವಿಗಾದರೂ ಸ್ಪಂದಿಸಿ. ಕೊಡಗಿನವರ ನೋವಿಗೆ ಸ್ಪಂದಿಸಿ. ಕಳೆದುಕೊಂಡಿರುವವರ ನೋವಿನ ಕತೆಗೆ ಇತಿಶ್ರೀ ಹಾಡಿರಿ.

?ಅಡ್ಡಂಡ ಸಿ. ಕಾರ್ಯಪ್ಪ

ಇತಿಹಾಸಕಾರರು, ಕೊಡಗು