ಆತ್ಮವಿಶ್ವಾಸವೆಂಬುದು ಜೀವಿಸಲು ಬೇಕಾದ ಅತೀ ದೊಡ್ಡ ಶಕ್ತಿ ಈ ಶಕ್ತಿ ಹೊರಗೆಲ್ಲಿಯು ಸಿಗುವಂತಹದ್ದಲ್ಲ. ಈ ಶಕ್ತಿಯನ್ನು ನಮ್ಮೊಳಗೆ ನಾವೇ ತುಂಬಿಸಿಕೊಳ್ಳಬೇಕು. ಆತ್ಮವಿಶ್ವಾಸವನ್ನು ತುಂಬಿಕೊಳ್ಳಲು ಸಕಾರಾತ್ಮಕ ಚಿಂತನೆಗಳು ಸಹಕಾರಿಯಾಗಿವೆ. ಸೃಷ್ಟಿಕರ್ತನು ಎಲ್ಲರನ್ನೂ ವಿಭಿನ್ನವಾಗಿ ಸೃಷ್ಟಿಸಿರುವನು. ಸರ್ವರೂ ಒಂದೊಂದು ರೀತಿಯ ವ್ಯಕ್ತಿತ್ವವನ್ನು ಹೊಂದಿದವರಾಗಿರುವರು. ಎಲ್ಲರೂ ಅವರಿಗಿರುವ ಬುದ್ಧಿವಂತಿಕೆಯನ್ನು, ಅವಕಾಶವನ್ನು ಅವರದೇ ಆದ ರೀತಿಯಲ್ಲಿ ಉಪಯೋಗಿಸುತ್ತಾ ಬದುಕುವರು ಮತ್ತು ಸಾಧಿಸುವರು. ಹೀಗಿರುವಾಗ ಪರಸ್ಪರ ಹೋಲಿಕೆ ಮಾಡಿಕೊಂಡು ಕೀಳರಿಮೆ ಬೆಳೆಸಿಕೊಳ್ಳುವುದು ಅಥವಾ ಅಹಂಕಾರ ಪಡುವುದು ಸರಿಯಲ್ಲ.
ನಮ್ಮ ವ್ಯಕ್ತಿತ್ವದ ಬಗ್ಗೆ ಯಾರಾದರು ಧನಾತ್ಮಕವಾಗಿ ಪ್ರತಿಕ್ರಿಯಿಸಿದರೆ ಆತ್ಮವಿಶ್ವಾಸ ಹೆಚ್ಚಾಗುವುದು. ಕೆಟ್ಟ ಗುಣಗಳನ್ನು, ಕೆಟ್ಟ ಕೆಲಸಗಳನ್ನು ಯಾರೂ ಪ್ರೋತ್ಸಾಹಿಸುವದಿಲ್ಲವಾದ್ದರಿಂದ, ಆದಷ್ಟು ಒಳ್ಳೆಯ ಕೆಲಸ ಕಾರ್ಯಗಳನ್ನು ಒಳ್ಳೆಯ ಮನಸ್ಸಿನಿಂದ ಮಾಡಿದರೆ ಅದಕ್ಕೆ ಪ್ರೋತ್ಸಾಹ ಗಿಟ್ಟಿಸಿಕೊಳ್ಳಬಹುದು. ನಮ್ಮ ಸಹಪಾಟಿಗಳಿಗೆ ಅಥವಾ ನಮ್ಮೊಂದಿಗೆ ಜೀವಿಸುತ್ತಿರುವವರಿಗೆ ಸಹಾಯಹಸ್ತವನ್ನು ಚಾಚುವಂತಹ ಮನೋಭಾವನೆ ಹೊಂದಿರಬೇಕು. ನಮ್ಮಿಂದ ಸಹಾಯ ಪಡೆದವರು ನಮ್ಮನ್ನು ಪ್ರಶಂಸಿಸುವಾಗ ನಮ್ಮ ಆತ್ಮವಿಶ್ವಾಸವು ಹೆಚ್ಚಾಗುವುದು. ಸಮಾಜ ಕಲ್ಯಾಣ ಕೆಲಸಗಳಲ್ಲಿ ಭಾಗವಹಿಸಿ ಉತ್ತಮ ವ್ಯಕ್ತಿತ್ವ ಹೊಂದಿದವರೆನಿಸಿಕೊಂಡರೆ ಆತ್ಮವಿಶ್ವಾಸ ಹೆಚ್ಚಾಗಿ ಮುಂದಿನ ಹೆಜ್ಜೆ ಇಡಲು ಆತ್ಮಸ್ಥೈರ್ಯ ತುಂಬುತ್ತದೆ. ಆದಷ್ಟು ಹೊಸ ವಿಷಯಗಳನ್ನು ಕಲಿಯಲು, ತಿಳಿಯಲು ಪ್ರಯತ್ನಿಸಬೇಕು. ಜಗತ್ತಿನಲ್ಲಿ ಅಗಾದವಾಗಿ ತುಂಬಿರುವ ವಿಸ್ಮಯಗಳನ್ನು, ವಿಚಾರಗಳನ್ನು ಅರಿತುಕೊಳ್ಳುತ್ತಾ ಹೋದಂತೆ, ನಮ್ಮ ಜ್ಞಾನ ಭಂಡಾರದ ಜೊತೆಗೆ ಆತ್ಮವಿಶ್ವಾಸವೂ ತುಂಬಿಕೊಳ್ಳುತ್ತಾ ಹೋಗುವುದು.
ನಾವು ಮಾನಸಿಕ ಅಥವಾ ದೈಹಿಕ ಒತ್ತಡಗಳಿಂದ ಹೊರಬರಲು ಪ್ರಯತ್ನಿಸಬೇಕು. ಏಕೆಂದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿದ್ದಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ಒತ್ತಡಗಳನ್ನು ಆತ್ಮೀಯರೊಂದಿಗೆ ಚರ್ಚಿಸಿ ಹೊರಹಾಕಲು ಪ್ರಯತ್ನಿಸಬೇಕು. ಜೀವನವೊಂದು ಸಂತೋಷದ ಪಯಣವೆಂದು ಭಾವಿಸಿಕೊಳ್ಳಬೇಕು. ಮತ್ತು ಈ ಸಂತೋಷವನ್ನು ಕಾಪಾಡಿಕೊಳ್ಳುವುದೂ ನಮ್ಮ ಕೈಯಲ್ಲೇ ಇದೆಯೆಂಬುದನ್ನು ಅರಿತಿರಬೇಕು. ಈ ಪಯಣದಲ್ಲಿ ತಪ್ಪುಗಳಾದಾಗ ಅದನ್ನು ಗುರುತಿಸಿ ಮುಂದೆ ಅಂಥಹ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ನಮ್ಮಲ್ಲಿರುವ ಶಕ್ತಿಯನ್ನು, ಪ್ರತಿಭೆಯನ್ನು, ದೌರ್ಬಲ್ಯವನ್ನು ನಾವೇ ಮೊದಲು ತಿಳಿದುಕೊಳ್ಳಬೇಕು ಮತ್ತು ಗುರುತಿಸಿಕೊಳ್ಳಬೇಕು. ಸಕಾರಾತ್ಮಕ ಕಲ್ಪನೆಗಳು, ಯೋಚನೆಗಳು ಆತ್ಮವಿಶ್ವಾಸ ಹೆಚ್ಚಿಸುವುವು. ನಮ್ಮ ಶಕ್ತಿ ಸಾಮಥ್ರ್ಯಗಳ ಮೇಲೆ ನಾವು ಮೊದಲು ನಂಬಿಕೆಯಿಟ್ಟು ಮುನ್ನುಗ್ಗಿದರೆ ಉಳಿದವರು ನಮ್ಮನ್ನು ಪ್ರೋತ್ಸಾಹಿಸುವಂತಾಗುವುದು. ಎಡವಿದಾಗ, ಹಳ್ಳಕ್ಕೆ ಬಿದ್ದಾಗ ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಮುಂದೆ ಸರಿದಾರಿ ಸಿಗುವ ಭರವಸೆ ಹೊತ್ತು ಹಳ್ಳದಿಂದೆದ್ದು ಬರಲು ಪ್ರಯತ್ನಿಸಿದಾಗ ಆತ್ಮವಿಶ್ವಾಸವು ಮತ್ತೆ ತುಂಬಿಕೊಳ್ಳುವುದು.
ಹುಟ್ಟಿನಿಂದಲೇ ಯಾರೂ ಬುದ್ಧಿವಂತರಾಗಿರುವುದಿಲ್ಲ. ದೇಹ ಬೆಳೆದಂತೆ ಬುದ್ಧಿವಂತಿಕೆಯನ್ನು ಬೆಳೆಸಿಕೊಳ್ಳಬೇಕಾಗುವುದು. ಅತಿಯಾದ ಚಿಂತೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ನೋವು ಮನುಷ್ಯನಿಗೆ ಪ್ರಬುದ್ದತೆಯನ್ನು ಕಲಿಸುತ್ತದೆ. ಜಗತ್ತನ್ನು ಸುಂದರ, ಉನ್ನತ ಮತ್ತು ಆರೋಗ್ಯಪೂರ್ಣ ಸ್ಥಳವನ್ನಾಗಿಸುವತ್ತ ಗಮನಹರಿಸಬೇಕು. ಬದುಕನ್ನು ಉಜ್ವಲಗೊಳಿಸುವ ಅನುಭವದ ತೈಲ ನಮ್ಮೊಳಗೆ ಇದೆ. ಉಜ್ವಲವಾಗಿ ಹೊತ್ತಿ ಉರಿಯಲು ಅದಕ್ಕೆ ಬೆಂಕಿಯ ಸಣ್ಣ ಕಿಡಿಯನ್ನು ತಾಗಿಸುವ ಕೆಲಸವನ್ನು ಮಾಡಬೇಕಷ್ಟೆ.
ನಡತೆ ಎಂಬುದು ವ್ಯಕ್ತಿಯ ಒಟ್ಟು ಸ್ವಭಾವದ ಮೊತ್ತ. ಬಡವ-ಬಲ್ಲಿದ, ಅಜ್ಞಾನಿ-ಜ್ಞಾನಿ ಯಾರೇ ಆಗಿದ್ದರೂ ಅವರದ್ದೇ ಆದ ವ್ಯಕ್ತಿತ್ವ ಇದ್ದೇ ಇರುತ್ತದೆ. ಸನ್ನಡತೆ ಹೊಂದಿದವರು ಉತ್ತಮ ಕಾರ್ಯದಿಂದ, ಅಪ್ರತಿಮ ಸಾಧನೆಯಿಂದ ಒಳ್ಳೆಯ ಹೆಸರು ಪಡೆದು ಕೀರ್ತಿವಂತರಾಗುವರು. ಸ್ವಸಾಮಥ್ರ್ಯದಿಂದ ಗಳಿಸಿದ ಹೆಸರು, ಸನ್ಮಾನಗಳು ಜೀವನಾದ್ಯಂತ ಹಾಗೂ ಜೀವನದ ನಂತರವೂ ನಮ್ಮನ್ನು ನೆನಪಿಸಿಕೊಳ್ಳುವಂತೆ ಮಾಡುವುದು. ಸುಖದ ಅಪೇಕ್ಷೆ ಇಲ್ಲದ ಮನಗಳು ಅಪರೂಪ. ಮನೋವಿಕಾಸದ ಹಂತದಲ್ಲಿ ರೂಪುಗೊಳ್ಳುವ ಸಹನೆ, ಸಂಯಮದ ಮನಸ್ಥಿತಿಗಳು ಮನೋಪಕ್ವತೆಯನ್ನು ಉತ್ತಮಗೊಳಿಸಲು ಬೇಕೇ ಬೇಕು. ಆತ್ಮಬಲ ಎಲ್ಲಾ ಬಲಗಳಿಗಿಂತಲೂ ಶಕ್ತಿಯುತವಾದುದು. ವಿದ್ಯೆ, ಐಶ್ವರ್ಯ, ಅಧಿಕಾರ, ಜನಬಲ, ದೇಹಬಲ ಇವೆಲ್ಲವೂ ಆತ್ಮಬಲದ ಮುಂದೆ ನಿಶ್ಶಕ್ತ, ಆತ್ಮಗೌರವ ವೆಂದರೆ ತನ್ನತನದ ಸಂಪಾದನೆ. ಈ ಸಂಪಾದನೆಯ ಸಾಧನೆಯಲ್ಲಿ ಧೈರ್ಯ, ಸ್ಥೈರ್ಯ, ದೃಢÀಸಂಕಲ್ಪ, ಜೊತೆಯಲ್ಲಿ ದೇವರ ಕೃಪೆಯೂ ಇರಬೇಕು. ಆತ್ಮಗೌರವದ ಬೆಲೆ ತಿಳಿಯದ ವ್ಯಕ್ತಿಯು ಆತ್ಮವಿಶ್ವಾಸ ಕಳೆದುಕೊಂಡು ಆತ್ಮನಾಶ ಮಾಡಿಕೊಳ್ಳುತ್ತಾನೆ. ಆತ್ಮಗೌರವವೆಂಬುದು ಆತ್ಮೋನ್ನತಿಯ ಸಾಧನವಾಗಿದೆ. ಆತ್ಮಬಲವೆಂಬದೇ ಆತ್ಮವಿಶ್ವಾಸ. ?ಉಳುವಂಗಡ ಕಾವೇರಿ ಉದಯ
ಟಿ.ಶೆಟ್ಟಿಗೇರಿ.