ಭಾಗಮಂಡಲ, ಜ. 8: ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದಿಂದ ಬೇರ್ಪಟ್ಟು ಕುಂದಚೇರಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸದಸ್ಯರು ಬೇರೆ ಸಂಘ ರಚಿಸುವ ಬಗ್ಗೆ ಬಹುದಿನಗಳ ಬೇಡಿಕೆ ಇರಿಸಿದ್ದರು. ಆದರೆ ಇಂದು ನಡೆದ ವಿಶೇಷ ಮಹಾಸಭೆಯಲ್ಲಿ ಮತ್ತೊಂದು ಸಂಘವನ್ನು ರಚಿಸಲು ಕುಂದಚೇರಿ ಸದಸ್ಯರಿಗೆ ಅನುಮತಿ ನೀಡಲಾಯಿತು.
ಭಾಗಮಂಡಲದ ಗೌಡ ಸಮಾಜದಲ್ಲಿ ವಿಶೇಷ ಮಹಾಸಭೆ ನಡೆಯಿತು. ಸಭೆಯಲ್ಲಿ ಸುಮಾರು 600ಕ್ಕೂ ಅಧಿಕ ಸದಸ್ಯರು ಭಾಗವಹಿಸಿದ್ದರು. ಭಾಗಮಂಡಲ ಕೃಷಿಪತ್ತಿನ ಸಹಕಾರ ಸಂಘದ ವಿಭಜನೆ ಮಾಡುವದಕ್ಕೆ ಸದಸ್ಯರ ವಿರೋಧ ವ್ಯಕ್ತವಾಗಿ ವಿಭಜನೆಗೆ ಸಹಮತ ದೊರೆಯಲಿಲ್ಲ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹೊಸೂರು ಸತೀಶ್‍ಕುಮಾರ್ ಮಾತನಾಡಿ ಸಂಘವು ಹತ್ತು ವರ್ಷಗಳ ಹಿಂದೆ ಶತಮಾನೋತ್ಸವ ಆಚರಿಸಿಕೊಂಡಿದ್ದು 1900 ಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿದ್ದು ನೂರಾರು ವರ್ಷಗಳ ಇತಿಹಾಸವುಳ್ಳ ಈ ಸಂಘದ ವಿಭಜನೆಗೆ ಸದಸ್ಯರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕುಂದಚೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸದಸ್ಯರು ನೂತನವಾಗಿ ಆಗುವ ಸಂಘಕ್ಕೆ ಹೋಗಲು ಯಾವದೇ ಅಡಚಣೆ ಇಲ್ಲ. ಸಂಘದಿಂದ ಹೊರಹೋಗುವ ಆ ಭಾಗದ ಸದಸ್ಯರು ಅರ್ಜಿ ನೀಡಿ ಕಾನೂನು ರೀತಿ ತಾವು ಪಡೆದ ಸಾಲ ಹಾಗೂ ಇತರರಿಗೆ ನೀಡಿದ ಜಾಮೀನು ಸದಸ್ಯರು ಪೂರ್ಣ ರೀತಿಯಲ್ಲಿ ಹಿಂತಿರುಗಿಸಿ ಹೋಗಬೇಕಿದೆ. ಹಾಗೆಯೇ ಉಳಿಯುವ ಸದಸ್ಯರಿಗೆ ಈ ಸಂಘದಲ್ಲಿ ಅವಕಾಶವಿರುತ್ತದೆ ಎಂದರು.
ಸಂಘದ ಕಾರ್ಯ ನಿರ್ವಹಣಾಧಿಕಾರಿ ಕಲಾವತಿ, ಸಹಕಾರ ಸಂಘದ ಅಭವೃದ್ಧಿ ಅಧಿಕಾರಿ ರಘು, ಡಿಸಿಸಿ ಬ್ಯಾಂಕಿನ ಹರೀಶ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.