ಮಡಿಕೇರಿ, ಜ. 7: ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ರಚಿಸಿರುವ “ಕೊಡಗಿನ ಗಾಂಧಿ, ಪಂದ್ಯಂಡ ಬೆಳ್ಯಪ್ಪ’’ ಎಂಬ ಅಧ್ಯಯನ ಕೃತಿ ಕೊಡವ ಮಕ್ಕಡ ಕೂಟ ಹಾಗೂ ಅಮ್ಮತ್ತಿ ಕೊಡವ ಸಮಾಜದ ಸಹಯೋಗದಲ್ಲಿ ತಾ. 15 ರಂದು ಲೋಕಾರ್ಪಣೆಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐತಿಚಂಡ ರಮೇಶ್ ಉತ್ತಪ್ಪ, ಮಹಾತ್ಮ ಗಾಂಧೀಜಿ ಅವರ ಕಟ್ಟಾ ಬೆಂಬಲಿಗರಾಗಿ ಕೊಡಗಿನ ಸ್ವಾತಂತ್ರ್ಯ ಚಳುವಳಿ, ಪತ್ರಿಕೋದ್ಯಮ, ಸಹಕಾರ ಕ್ಷೇತ್ರ ಹಾಗೂ ಸಮಾಜಕ್ಕೆ ಅಮೂಲ್ಯ ಸೇವೆ ನೀಡಿದವರು ಪಂದ್ಯಂಡ ಐ. ಬೆಳ್ಯಪ್ಪ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾ. 15 ರಂದು ಬೆಳಿಗ್ಗೆ 10 ಗಂಟೆಗೆ ಅಮ್ಮತ್ತಿ ಕೊಡವ ಸಮಾಜದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಧಿಕಾರಿ ಶ್ರೀವಿದ್ಯಾ ಕಾರ್ಯ ಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಅರವಿಂದ ಮಾಲಗತ್ತಿ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.

ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಉಪನ್ಯಾಸಕÀ ಆಂಗೀರ ಕುಸುಮ್ ಕೃತಿ ಪರಿಚಯ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಉಳ್ಳಿಯಡ ಎಂ. ಪೂವಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ಪಂದ್ಯಂಡ ಬೆಳ್ಯಪ್ಪ ಅವರ ಪುತ್ರ ಪಂದ್ಯಂಡ ವಿಜಯ್ ಬೆಳ್ಯಪ್ಪ, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು.

ಬೆಳಿಗ್ಗೆ 10 ಗಂಟೆಗೆ ಅಮ್ಮತ್ತಿ ನಗರದಿಂದ ಕೊಡವ ಸಮಾಜದ ತನಕ ಪಂದ್ಯಂಡ ಬೆಳ್ಯಪ್ಪ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಲಿದೆ.

ಖ್ಯಾತ ಕಲಾವಿದರಾದ ಚೇಂದಿರ ನಿರ್ಮಿಲ ಬೋಪಣ್ಣ, ಚಕ್ಕೆರ ಪಂಚಮ್ ತ್ಯಾಗರಾಜ್, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಆಂಗೀರ ಕುಸುಮ್ ಅವರಿಂದ ನಾಡಗೀತೆ ಹಾಗೂ ದೇಶಭಕ್ತಿ ಗೀತೆ ಕಾರ್ಯಕ್ರಮ ನಡೆಯಲಿದೆ. ಎಂದು ರಮೇಶ್ ಉತ್ತಪ್ಪ ಮಾಹಿತಿ ನೀಡಿದರು.

ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷÀ ಮೂಕೋಂಡ ಬೋಸ್ ದೇವಯ್ಯ, ಮಾತನಾಡಿ “ಕೊಡಗಿನ ಗಾಂಧಿ, ಪಂದ್ಯಂಡ ಬೆಳ್ಯಪ್ಪ’’ ಪುಸ್ತಕವನ್ನು ಸರಕಾರಿ ಗ್ರಂಥಾಲಯಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಉಚಿತವಾಗಿ ನೀಡಲಾಗುವದೆಂದರು. ಪಂದ್ಯಂಡ ಬೆಳ್ಯಪ್ಪ ಅವರ ಭಾವಚಿತ್ರ ಅಳವಡಿಸುವ ಬಗ್ಗೆ ಜಿ.ಪಂ. ಹಾಗೂ ತಾ.ಪಂ.ಗಳು ನಿರ್ಣಯ ಕೈಗೊಳ್ಳಬೇಕೆಂದರು.

ಕೊಡವ ಸಮಾಜದ ನಿರ್ದೇಶಕರಾದ ಪಾಲಚಂಡ ಮನು ಮುತ್ತಣ್ಣ, ಉದ್ದಪಂಡ ಎಂ. ಚಂಗಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷರಾದ ಬೊಳ್ಳಜಿರ ಬಿ.ಅಯ್ಯಪ್ಪ, ಹಾಗೂ ಮಡ್ಲಂಡ ಮೋನಿಶಾ ಸುಬ್ಬಯ್ಯ ಉಪಸ್ಥಿತರಿದ್ದರು.