ಮಡಿಕೇರಿ, ಜ. 7: ಕೊಡಗಿನ ಗಡಿ ಗ್ರಾಮಗಳಿಂದ ಕೂಡಿರುವ ಸಂಪಾಜೆ ಗ್ರಾಮ ಪಂಚಾಯಿತಿಗೆ ರಾಷ್ಟ್ರಮಟ್ಟದ ಪುರಸ್ಕಾರ ಲಭಿಸಲು, ಆ ಭಾಗದ ಜನತೆಗೆ ನೈಸರ್ಗಿಕ ಮೂಲದಿಂದ ಶುದ್ಧ ಕುಡಿಯುವ ನೀರು ಪೂರೈಕೆಯಿಂದ ಸಾಧ್ಯವಾಗಿದೆ ಎಂಬದಾಗಿ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ಕಳಗಿ ಅಭಿಪ್ರಾಯಪಟ್ಟಿದ್ದಾರೆ.

ಸಂಪಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚಾಯಿತಿಯಿಂದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕೈಗೊಂಡಿರುವ ಯೋಜನೆಗಳನ್ನು ‘ಶಕ್ತಿ’ಯೊಂದಿಗೆ ಪ್ರಸ್ತಾಪಿಸಿದ ಅವರು, ಗ್ರಾಮೀಣ ಜನತೆಗೆ ಯಾವದೇ ಕೃತಕ ಉಪಕರಣಗಳ ಬಳಕೆಯಿಲ್ಲದೆ ನೀರಿನ ವ್ಯವಸ್ಥೆ ರೂಪಿಸಲು ಸಾಧ್ಯವಾಗಿದ್ದೇ ಗ್ರಾ.ಪಂ.ಗೆ ಪುರಸ್ಕಾರದ ಗರಿ ತಂದುಕೊಟ್ಟಿದ್ದಾಗಿ ಆಶಯ ವ್ಯಕ್ತಪಡಿಸಿದರು.

ಗ್ರಾ.ಪಂ. ವ್ಯಾಪ್ತಿಯಲ್ಲಿ 650ಕ್ಕೂ ಅಧಿಕ ಮನೆಗಳಿಗೆ ಶುದ್ಧ ನೈಸರ್ಗಿಕ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ದಿನದ 24 ಗಂಟೆ ಜನರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ ಅಧ್ಯಕ್ಷರು ಪಂಚಾಯಿತಿ ಉಪಾಧ್ಯಕ್ಷರ ಸಹಿತ ಎಲ್ಲ ಸದಸ್ಯರು ಹಾಗೂ ಉದ್ಯೋಗಿಗಳು ಕ್ರಿಯಾಶೀಲ ರಾಗಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈಗಾಗಲೇ ಸುಸಜ್ಜಿತ ಗ್ರಾ.ಪಂ. ಕಚೇರಿಗಳು ಸ್ವಂತ ಕಟ್ಟಡದೊಂದಿಗೆ ಜನರಿಗೆ ಸ್ಪಂದಿಸುತ್ತಿರುವದಾಗಿ ವಿವರಿಸಿದರು.

ಸ್ಥಳೀಯ ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳ ಅನುದಾನ ದಿಂದ ಇದೀಗ ಗ್ರಾ.ಪಂ. ಕಟ್ಟಡದ ಮೊದಲ ಅಂತಸ್ತಿನಲ್ಲಿ ಉತ್ತಮ ಸಭಾಂಗಣ ನಿರ್ಮಿಸುತ್ತಿರುವದಾಗಿ ತಿಳಿಸಿದರು.

ಈಗಾಗಲೇ ಗ್ರಾ.ಪಂ. ಆದಾಯ ಹೆಚ್ಚಿಸಿಕೊಳ್ಳುವ ಸಲುವಾಗಿ ಭವಿಷ್ಯದಲ್ಲಿ ಕೇಂದ್ರ ಪರಿಸರ ಖಾತೆ ಸಚಿವರನ್ನು ಭೇಟಿಯಾಗಿ ಬ್ರಿಟಿಷರ ಕಾಲದ ರಬ್ಬರ್ ತೋಟಗಳ ನಿರ್ವಹಣೆ ಸಂಬಂಧ ಗಮನ ಸೆಳೆದು ಅಗತ್ಯ ಕ್ರಮಕ್ಕೆ ಕೋರಲಾಗುವದು ಎಂದು ಬಾಲಚಂದ್ರ ಕಳಗಿ ತಿಳಿಸಿದರು.