ಕೂಡಿಗೆ, ಜ. 7: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಆದಿವಾಸಿ ನಿರಾಶ್ರಿತರ ಪುನರ್ ವಸತಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ನೀಡಿ ವಸತಿ ನಿರ್ಮಾಣ, ಮೂಲಭೂತ ಸೌಕರ್ಯಗಳ ಕಾಮಗಾರಿ ವೀಕ್ಷಿಸಿ ಮಾಹಿತಿ ಪಡೆದರು.
ಅಲ್ಲಿ ನಿರ್ಮಾಣಗೊಂಡಿರುವ ಕೆಲವು ಮನೆಗಳ ಒಳಹೊಕ್ಕು ವಾಸಕ್ಕೆ ಯೋಗ್ಯವೇ ಎಂದು ಖುದ್ದು ಪರೀಕ್ಷಿಸಿದರು. ಉತ್ತಮ ಗುಣಮಟ್ಟದ ಉಪಕರಣಗಳನ್ನು ಉಪಯೋಗಿಸಿ ಉಳಿದ ಮನೆಗಳನ್ನು ಆದಷ್ಟು ಬೇಗ ನಿರ್ಮಾಣ ಮಾಡಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.
ನಿರಾಶ್ರಿತ ಕೇಂದ್ರದ ಪ್ರಮುಖರು ಈ ಪ್ರದೇಶದಲ್ಲಿ ಶವ ಸಂಸ್ಕಾರದ ಚಿತಾಗಾರವೊಂದನ್ನು ನಿರ್ಮಿಸಿ ಕೊಡಬೇಕೆಂದು ಮನವಿ ಸಲ್ಲಿಸಿದರು. ಬ್ಯಾಡಗೊಟ್ಟ ಗ್ರಾಮಸ್ಥರು ಬ್ಯಾಡಗೊಟ್ಟ-ಸೀಗೆಹೊಸೂರು ಕಾಂಕ್ರೀಟ್ ರಸ್ತೆ ನಿರ್ಮಿಸಬೇಕೆಂದು ಮನವಿ ಸಲ್ಲಿಸಿದರು
ಈ ಸಂದರ್ಭ ರಾಜ್ಯ ಬುಡಕಟ್ಟು ಜನಾಂಗದ ಸಂಚಾಲಕ ಎಸ್.ಎನ್. ರಾಜಾರಾವ್, ರಾಜ್ಯ ಪರಿಶಿಷ್ಟ ಕಲ್ಯಾಣ ಇಲಖೆಯ ನಿರ್ದೇಶಕ ರೇವಣ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ನಿರ್ಮಿತಿ ಕೇಂದ್ರದ ಯೋಜನಾ ಧಿಕಾರಿ ಸಚಿನ್ ಇದ್ದರು.