ಮಡಿಕೇರಿ, ಜ. 7: ಬ್ರಹ್ಮಗಿರಿ ಬೆಟ್ಟವು, ಪುರಾಣಗಳಲ್ಲಿ ಸಪ್ತ ಋಷಿಗಳು ತಪಸ್ಸು ಮಾಡಿದ ಕ್ಷೇತ್ರವಾಗಿದ್ದು, ಅಲ್ಲಿಗೆ ಭಕ್ತಾದಿಗಳು ತೆರಳಲು ಅವಕಾಶವಿದೆ; ಅದನ್ನು ಮುಚ್ಚಲು ಯಾರಾದರೂ ಯತ್ನಿಸಿದರೆ ಸ್ಥಳೀಯರು ತೆರವುಗೊಳಿಸುತ್ತಾರೆ ಎಂದು ಭಾಗಮಂಡಲ ವಿಭಾಗದ ನಾಗರಿಕ ಪ್ರಮುಖರು ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯ ವಿವಿಧೆಡೆಯ ಸಂಘ ಸಂಸ್ಥೆಗಳು ಬ್ರಹ್ಮಗಿರಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಬೇಕೆಂದು ಹಲವು ದಿನಗಳಿಂದ ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಭಾಗಮಂಡಲ ನಾಗರಿಕ ಮುಖಂಡರಾದ ಕುದುಕುಳಿ ಭರತ್, ಪಿ.ಎಂ. ರಾಜೀವ್, ರಾಜರೈ, ಪುರುಷೋತ್ತ, ಕುಯ್ಯಮುಡಿ ರವಿ, ಮನೋಜ್ ಹಾಗೂ ಭಾಸ್ಕರ್ ಲಿಖಿತ ಹೇಳಿಕೆ ನೀಡಿ ತಲಕಾವೇರಿ ಮೂಲ ಸ್ವರೂಪ ಸಮಿತಿಯಂತಹ ಸಂಘಟನೆಗಳು ಕ್ಷೇತ್ರದ ಬಗ್ಗೆ ಮೂಗು ತೂರಿಸಿ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲವೆಂದು ಪ್ರತಿಪಾದಿಸಿ ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ.

ದೇವಾಲಯಗಳ ಪುನರ್ ಪ್ರತಿಷ್ಠಾಪನೆ ಕಾರ್ಯವು

(ಮೊದಲ ಪುಟದಿಂದ) ನಡೆದು 12 ವರ್ಷಗಳಾಗುತ್ತಾ ಬಂದಿದ್ದು, ಮುಂದಿನ ವರ್ಷ ಬ್ರಹ್ಮಕಲಶ ಕಾರ್ಯಗಳು ನಡೆಯಬೇಕಾಗಿದೆ. ಪುನರ್ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ತಂತ್ರಿಗಳು ಈ ಕ್ಷೇತ್ರಗಳಲ್ಲಿ ಭಕ್ತಾದಿಗಳು ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದ್ದು, ಅದಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಮಾಡಬೇಕಾಗಿರುತ್ತದೆಂದು ತಿಳಿಸಿದ್ದಾರೆ.

ಪುನರ್ ಪ್ರತಿಷ್ಠಾಪನೆಯ ನಂತರ ಜವಾಬ್ದಾರಿಯನ್ನು ವ್ಯವಸ್ಥಾಪಕರಿಗೆ ಮತ್ತು ಅರ್ಚಕ ವರ್ಗದವರಿಗೆ ವಹಿಸಿರುವದು ಅಂದಿನ ದಿನದಲ್ಲಿ ಅಲ್ಲಿದ್ದವರಿಗೆ ತಿಳಿದ ವಿಚಾರವಾಗಿರುತ್ತದೆ.

ರಜಾ ದಿನಗಳಲ್ಲಿ ಲಕ್ಷಾಂತರ ಮಂದಿ ಭಕ್ತಾದಿಗಳು ಮತ್ತು ಪ್ರವಾಸಿಗರು ಕ್ಷೇತ್ರಕ್ಕೆ ಬರುತ್ತಿದ್ದ, ತಲಕಾವೇರಿ ಮತ್ತು ಭಾಗಮಂಡಲದ ವಿಚಾರವಾಗಿರದೆ ಕೊಡಗಿನ ಎಲ್ಲಾ ಪ್ರವಾಸಿ ತಾಣಗಳು ಮತ್ತು ಧಾರ್ಮಿಕ ಕ್ಷೇತ್ರಗಳ ವಿಚಾರವಾಗಿರುತ್ತದೆ.

ತಲಕಾವೇರಿ ಮತ್ತು ಭಾಗಮಂಡಲ ದೇವಾಲಯಗಳಲ್ಲಿ ಈಗ ಹಣದ ಕೊರತೆಯಿರುವದಿಲ್ಲ. ಸುಮಾರು 2 ಕೋಟಿ ರೂಪಾಯಿಗಳನ್ನು ಬ್ಯಾಂಕಿನಲ್ಲಿ ನಿರಖು ಠೇವಣಿಯಾಗಿಟ್ಟಿದ್ದಾರೆ. ಬರುವ ಭಕ್ತಾದಿಗಳಿಗೆ ಮತ್ತು ಯಾತ್ರಿಕರಿಗೆ ಎರಡು ಕ್ಷೇತ್ರಗಳಲ್ಲಿ ಧ್ವನಿವರ್ಧಕ ಅಳವಡಿಸಿ ಮಾಹಿತಿ ನೀಡುವದರೊಂದಿಗೆ ಮಾಹಿತಿ ನೀಡಲು ಗೈಡ್ ಸಿಬ್ಬಂದಿಗಳನ್ನು ನೇಮಿಸಬೇಕಾಗಿರುತ್ತದೆ. ಇದಕ್ಕೆ ತಗಲುವ ವೆಚ್ಚವನ್ನು ಜಿಲ್ಲಾಡಳಿತ ದೇವಸ್ಥಾನದಿಂದಲೇ ಭರಿಸಬೇಕಾಗಿರುತ್ತದೆ.

ಬ್ರಹ್ಮಗಿರಿ ಬೆಟ್ಟವು ಪುರಾಣಗಳಲ್ಲಿ ಸಪ್ತ ಋಷಿಗಳು ತಪಸ್ಸು ಮಾಡಿದ ಕ್ಷೇತ್ರವಾಗಿದ್ದು, ಅಲ್ಲಿಗೆ ಭಕ್ತಾದಿಗಳು ಮತ್ತು ಪ್ರವಾಸಿಗರು ವೀಕ್ಷಿಸಲು ಯಾವದೇ ಅಡೆತಡೆಗಳಾಗಬಾರದು. ಅಲ್ಲಿ ಕೆಳಭಾಗದಿಂದಲೇ ಧ್ವನಿವರ್ಧಕದಿಂದ ಮಾಹಿತಿ ನೀಡಿ ಗೈಡ್‍ಗಳ ಮುಖಾಂತರ ನಿಯಂತ್ರಿಸಬೇಕಾಗಿದೆ. ಬ್ರಹ್ಮಗಿರಿ ಬೆಟ್ಟವನ್ನು ಅರಣ್ಯ ಇಲಾಖೆಯ ಸುಪರ್ದಿಗೆ ಈ ಹಿಂದೆ ನೀಡುವಾಗಲೇ ಕ್ಷೇತ್ರದ ಪಾವಿತ್ರ್ಯತೆಯನ್ನು ಗಮನದಲ್ಲಿಡಬೇಕಾಗಿತ್ತು. ಈಗ ಅದಕ್ಕೆ ಪರಿಸರವಾದಿಗಳ ಕುಮ್ಮಕ್ಕು ಬಂದೊದಗಿದೆ. ಬ್ರಹ್ಮಗಿರಿ ಬೆಟ್ಟಕ್ಕೆ ತಡೆಬೇಲಿ ಮಾಡಿದರೆ ಸ್ಥಳೀಯರು ಅದನ್ನು ತೆರವುಗೊಳಿಸಲು ತಯಾರಾಗಿದ್ದೇವೆ. ಮೂಲ ಸ್ವರೂಪ ಸಮಿತಿ ಇಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾಗಮಂಡಲ ಗ್ರಾಮ ಪಂಚಾಯಿತಿಗೆ ವಾಹನ ಸುಂಕ ಹೊರತುಪಡಿಸಿದರೆ ಯಾವದೇ ಆದಾಯ ಮೂಲಗಳಿರುವದಿಲ್ಲ. ಮಡಿಕೇರಿ ಮತ್ತು ಮೈಸೂರು ದಸರಾಗಳು ನಡೆದಾಗ ರಾಜ್ಯ ಸರಕಾರ ಲಕ್ಷಾಂತ ರೂಪಾಯಿಗಳನ್ನು ಅಲ್ಲಿಗೆ ನೀಡುತ್ತಿರುವದು ಎಲ್ಲರಿಗೂ ತಿಳಿದ ವಿಚಾರವಾಗಿರುತ್ತದೆ. ಹೀಗಿರುವಾಗ ಭಾರತ ದೇಶದಲ್ಲಿಯೇ ಸಪ್ತ ನದಿಗಳಲ್ಲಿ ಒಂದಾಗಿರುವ ದಕ್ಷಿಣ ಭಾರತದ ಕೃಷಿ ಮತ್ತು ಕುಡಿಯುವ ನೀರಿನ ಮೂಲ ಸ್ಥಾನವಾದ ತಲಕಾವೇರಿಯ ದಿನ ನಿತ್ಯದ ವ್ಯವಸ್ಥೆಗೆ ಯಾಕೆ ಗ್ರಾ.ಪಂ.ಗೆ ಸರಕಾರದಿಂದ ಅನುದಾನಗಳನ್ನು ನೀಡಬಾರದು ಎಂದು ಪ್ರಮುಖರು ಪ್ರಶ್ನಿಸಿದ್ದಾರೆ.

ಭಾಗಮಂಡಲ ದೇವಾಲಯದ ಮುಖ್ಯದ್ವಾರ ಮತ್ತು ಹಿಂಬಾಗಿಲುಗಳನ್ನು ಜೀರ್ಣೋದ್ಧಾರ ಕಳೆದು ಹತ್ತು ವರ್ಷವಾದರೂ ಮಾಡಿರುವದಿಲ್ಲ. ಇದಕ್ಕೆ ಬ್ಯಾಂಕಿನಲ್ಲಿರುವ ಹಣ ಖರ್ಚು ಮಾಡಲು ಯಾರ ತಡೆಯಿದೆ ಎಂಬದನ್ನು ಸರಕಾರ ಮತ್ತು ಜಿಲ್ಲಾಡಳಿತ ಜನರ ಮುಂದೆ ತಿಳಿಸಬೇಕಾಗಿದೆ ಎಂದು ಪ್ರತಿಕ್ರಿಯಿಸಿರುವ ಭಾಗಮಂಡಲ ನಾಗರಿಕ ಪ್ರಮುಖರು, ಇಲ್ಲಿಯ ಮೂಲ ಸಮಸ್ಯೆಗಳನ್ನು ತಿಳಿಯದೆ ಯಾವದೇ ಸಂಘಟನೆಗಳು ಅನಾವಶ್ಯಕ ಗೊಂದಲ ಸೃಷ್ಟಿಸಿದರೆ, ಸ್ಥಳೀಯರು ಸುಮ್ಮನಿರಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.