ಶ್ರೀಮಂಗಲ, ಜ. 7: ಪೊನ್ನಂಪೇಟೆಯನ್ನು ಕೇಂದ್ರವನ್ನಾಗಿರಿಸಿ ಈ ವ್ಯಾಪ್ತಿಯ 21 ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ನೂತನ ತಾಲೂಕೆಂದು ಘೋಷಿಸಲು ಒತ್ತಾಯಿಸಿ ನಡೆಯುತ್ತಿರುವ ಹೋರಾಟ 68 ದಿನ ಪೂರೈಸಿದೆ. ಮುಖ್ಯಮಂತ್ರಿಗಳು ತಾ. 9ರಂದು (ನಾಳೆ) ಜಿಲ್ಲೆಗೆ ಭೇಟಿ ನೀಡುತ್ತಿರುವದರಿಂದ ಅವರು ಅಭಿಪ್ರಾಯ ಪ್ರಕಟಿಸಬಹುದೆಂಬದು ಕುತೂಹಲಕಾರಿಯಾಗಿದೆ. ಈ ನಡುವೆ ತಾ. 8ರಂದು (ಇಂದು) ಈ ವ್ಯಾಪ್ತಿಯ 21 ಗ್ರಾಮ ಪಂಚಾಯಿತಿಗಳಲ್ಲಿ ಹೋರಾಟ ಸಮಿತಿ ಪ್ರಮುಖರು ಬಂದ್‍ಗೆ ಕರೆ ನೀಡಿದ್ದಾರೆ.
ಇಂದು ನಡೆದ 68ನೇ ದಿನ ಧರಣಿ ಸತ್ಯಾಗ್ರಹಕ್ಕೆ ಗೋಣಿಕೊಪ್ಪದ ಮಡಿವಾಳರ ಸಂಘ, ಜಿಲ್ಲಾ ರೈತ ಸಂಘ, ಹಿರಿಯ ನಾಗರಿಕಾ ವೇದಿಕೆ, ನಲ್ಲೂರು ಸರಸ್ವತಿ ಯುವಕ ಸಂಘ, ತಾಲೂಕು ಪುನರ್‍ರಚನಾ ಸಮಿತಿ ಬೆಂಬಲ ನೀಡಿ ಭಾಗವಹಿಸಿದ್ದವು.
ಮಡಿವಾಳರ ಸಂಘದ ಅಧ್ಯಕ್ಷ ಹರೀಶ್, ರೈತ ಸಂಘದ ಚಿಮ್ಮಂಗಡ ಗಣೇಶ್, ನಲ್ಲೂರು ಸರಸ್ವತಿ ಯುವಕ ಸಂಘದ ಅಧ್ಯಕ್ಷ ತೀತರಮಾಡ ಕೆ. ರಾಜ, ಕಾರ್ಯದರ್ಶಿ ತೀತರಮಾಡ ಅರುಣ, ಪುಳ್ಳಂಗಡ ಸತೀಶ್, ಮಲ್ಚೀರ ಜಾಕು ಬೋಡಂಗಡ ಸುಗಂಧ, ಕೊಕ್ಕಲೆಮಾಡ ರಾಜ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರಾದ ಪೊಕ್ಕಳಿಚಂಡ ಪೂಣಚ್ಚ, ಚೆಪ್ಪುಡಿರ ಪೊನ್ನಪ್ಪ, ಸೋಮಯ್ಯ, ಕಾಳಿಮಾಡ ಮೋಟಯ್ಯ, ಕಾಟಿಮಾಡ ಅಯ್ಯಣ್ಣ, ಮೂಕಳೇರ ಕುಶಾಲಪ್ಪ, ಮೂಕಳೇರ ಲಕ್ಷ್ಮಣ ಸೇರಿದಂತೆ ಮಡಿವಾಳರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಬಂದ್‍ಗೆ ಪೊನ್ನಂಪೇಟೆ ಚೇಂಬರ್‍ನಿಂದ ಬೆಂಬಲ : ತಾ. 8ರಂದು (ಇಂದು) ಪೊನ್ನಂಪೇಟೆ ಚೇಂಬರ್ ಆಫ್ ಕಾಮರ್ಸ್ ಸಂಪೂರ್ಣ ಬೆಂಬಲ ನೀಡಲಿದೆ. ಚೇಂಬರ್ ಅಧ್ಯಕ್ಷ ಚಿರಿಯಪಂಡ ಉಮೇಶ್ ಉತ್ತಪ್ಪ ತಿಳಿಸಿದ್ದಾರೆ. 21 ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ವರ್ತಕರು, ಚೇಂಬರ್ ಆಫ್ ಕಾಮರ್ಸ್ ಬಂದ್‍ಗೆ ಪೊನ್ನಂಪೇಟೆ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಮನವಿ ಮಾಡಿದ್ದಾರೆ.
ಅಂಗಡಿ ಮುಂಗಟ್ಟು ಬಂದ್, ವಾಹನ
ಬಸ್ ಸಂಚಾರಕ್ಕೆ ತಡೆ ಇಲ್ಲ
4 ಹೋಬಳಿಯ 21 ಗ್ರಾ.ಪಂ.ನಲ್ಲಿ ಇಂದು ಬಂದ್ ನಡೆಯಲಿದೆ. 4 ಹೋಬಳಿಗಳಾದ ಪೊನ್ನಂಪೇಟೆ, ಬಾಳೆಲೆ, ಹುದಿಕೇರಿ ಮತ್ತು ಶ್ರೀಮಂಗಲದ 21 ಗ್ರಾ.ಪಂ.ಗಳಲ್ಲಿ ಬಂದ್ ನಡೆಯಲಿದೆ. ಈ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ತಡೆ ಮಾಡುವದಿಲ್ಲ. ಎಂದಿನಂತೆ ವಾಹನ, ಬಸ್ ಸಂಚಾರ ಇರಲಿದೆ ಎಂದು ಪೊನ್ನಂಪೇಟೆ ತಾಲೂಕು ಹೋರಾಟ ಸಮಿತ ತಿಳಿಸಿದೆ.