ಮಡಿಕೇರಿ, ಜ. 7: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ಇಂದು ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ರಂಗದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಇಲ್ಲಿನ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ನಿಧಿಯ ಅಧ್ಯಕ್ಷ ಎ. ಗೋಪಾಲಕೃಷ್ಣ ವಹಿಸಿದ್ದರು.

ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನ ನೀಡಲಾಯಿತು. ಅಲ್ಲದೆ ಚಿಣ್ಣರಿಗೆ ಕಾಳು ಹೆಕ್ಕುವದು, ದೇವರನಾಮ ಸ್ಪರ್ಧೆ ಏರ್ಪಡಿಸಿದರೆ, ಒಂದರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಹಾಗೂ ಭಾವಗೀತೆ ಹಾಡಿಸಲಾಯಿತು.

5 ರಿಂದ 7ನೇ ತರಗತಿ ವಿದ್ಯಾರ್ಥಿ ಗಳಿಗೆ ರಸಪ್ರಶ್ನೆ, ಜನಪದಗೀತೆ, 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಶುಭಾಷಣ, ರಸಪ್ರಶ್ನೆ ಬರಹ ನಡೆಯಿತು. ಪಿಯುಸಿಯಿಂದ ಪದವಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಯೊಂದಿಗೆ ಮಹಿಳೆಯರಿಗೆ ತಂಬಿಟ್ಟು ತಯಾರಿ, ಪುರುಷರಿಗೆ ಹಾಡುಗಾರಿಕೆ ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಮಾಜದಲ್ಲಿ ಯೋಗ ಕ್ಷೇತ್ರದಲ್ಲಿ ಲಕ್ಷ್ಮೀನಾರಾಯಣ, ಕೃಷಿ ಕೆ.ಕೆ. ವಿಶ್ವನಾಥ್, ಪತ್ರಕರ್ತ ಬಿ.ಆರ್. ನಾರಾಯಣ, ಶಿಕ್ಷಣ ಮಂಜುನಾಥ್, ನೃತ್ಯ ರಮ್ಯಶ್ರೀ, ಧಾರ್ಮಿಕ ಕ.ನ. ಕೃಷ್ಣ ಭಟ್ ಅವರುಗಳು ಸನ್ಮಾನ ಸ್ವೀಕರಿಸಿದರು. ಕಾರ್ಯಕ್ರಮವನ್ನು ಕೇಶವಮೂರ್ತಿ ಉದ್ಘಾಟಿಸಿ, ಗೀತಾ ಗಿರೀಶ್ ನಿರೂಪಿಸಿದರು. ಕಾರ್ಯ ದರ್ಶಿ ಅರುಣ್ ಸೋಮಯಾಜ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಜಯಶೀಲ ಪ್ರಕಾಶ್ ವಂದಿಸಿದರು.