ಕುಶಾಲನಗರ, ಜ.7 : ಕುಶಾಲನಗರವನ್ನು ಕೇಂದ್ರವಾಗಿಸಿ ಕೊಂಡು ನೂತನ ತಾಲೂಕು ರಚನೆಗೆ ಒತ್ತಾಯಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ 7 ದಿನಗಳನ್ನು ಪೂರೈಸಿದ್ದು, ಹೋರಾಟದ ಕಿಚ್ಚು ಕಾವೇರಿದ್ದು, ಓರ್ವ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಹೋರಾಟಗಾರರು ರಸ್ತೆ ಮಧ್ಯೆ ಟಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟ ನಿರಶನ ನಿರತರ ಪೈಕಿ ಎನ್.ಕೆ.ಮೋಹನ್ಕುಮಾರ್ ಸಂಜೆ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಹೋರಾಟಗಾ ರರು ರಸ್ತೆಗಿಳಿದು ಪ್ರತಿಭಟಿಸಿದರು.
ಹೋರಾಟಗಾರರು ನಿರಶನ ನಿರತ ಆರೋಗ್ಯ ತಪಾಸಣೆಗೆ ಸ್ಥಳದಲ್ಲಿ ವೈದ್ಯರನ್ನು ನೇಮಿಸದ ಹಿನ್ನೆಲೆಯಲ್ಲಿ ಸತ್ಯಗ್ರಹ ವೇದಿಕೆಯಿಂದ ತಮ್ಮ ಹೋರಾಟವನ್ನು ರಸ್ತೆಗೆ ಬದಲಾಯಿಸಿದ್ದಾರೆ. ರಾಜ್ಯ ಹೆದ್ದಾರಿ ಮಧ್ಯದಲ್ಲಿ ಕುರ್ಚಿಗಳನ್ನು ಹಾಕಿ ಕುಳಿತು ಹೋರಾಟ ಮುಂದುವರೆಸಿದರು. ರಸ್ತೆಯಲ್ಲಿ ಟಯರ್ಗೆ ಬೆಂಕಿ ಹಚ್ಚಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಮಧ್ಯೆ ಬೆಂಕಿ ಹಚ್ಚಿರುವ ವಿಚಾರದ ಬಗ್ಗೆ ಪೊಲೀಸರು ಹಾಗೂ ಹೋರಾಟಗಾರ ನಡುವೆ ವಾಗ್ವಾದ ಏರ್ಪಟ್ಟ ದೃಶ್ಯವೂ ಕಂಡುಬಂತು.
ವೀಣಾ ಅಚ್ಚಯ್ಯ ಭೇಟಿ : ನೂತನ ತಾಲೂಕು ರಚನೆಗೆ ಒತ್ತಾಯಿಸಿ ಜನವರಿ 1 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ವಿ.ಪಿ. ಶಶಿಧರ್ ಅವರೊಂದಿಗೆ ಮಾತುಕತೆ ನಡೆಸಿದರು. ಹೋರಾಟದ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆ. ಅವರು ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ತಾಲೂಕು ಬೇಡಿಕೆಗೆ ಪೂರಕವಾಗಿ ಸ್ಪಂದಿಸುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಹೋರಾಟವನ್ನು ಅಂತ್ಯಗೊಳಿಸಿ. ನಂತರ ಬೆಳವಣಿಗೆಗಳನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕೆಂದು ಕೋರಿದರು.
ಈ ಸಂದರ್ಭ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್, ಕಾಂಗ್ರೆಸ್ ಪ್ರಮುಖರಾದ ನಾಪಂಡ ಮುತ್ತಪ್ಪ, ಟಿ.ಪಿ. ಹಮೀದ್, ಕುಶಾಲನಗರ ಪಟ್ಟಣ ಪಂಚಾಯ್ತಿ ಸದಸ್ಯ ಹೆಚ್.ಜೆ. ಕರಿಯಪ್ಪ, ಶಿವಶಂಕರ್ ಮತ್ತಿತರರು ಇದ್ದರು.
ಬೈಕ್ ಜಾಥಾ: ಸುಂಟಿಕೊಪ್ಪದ ಯೂತ್ ಫಾರ್ ಜಸ್ಟೀಸ್ ಸಂಘಟನೆ ಪದಾಧಿಕಾರಿಗಳು ಸುಂಟಿಕೊಪ್ಪದಿಂದ ಕುಶಾಲನಗರದವರೆಗೆ ಬೈಕ್ ಜಾಥಾ ನಡೆಸಿ, ಮಾರ್ಗ ಮಧ್ಯೆ ಕೊಡಗರಹಳ್ಳಿ, 7ನೇ ಹೊಸಕೋಟೆ, ಗುಡ್ಡೆಹೊಸೂರು ವೃತ್ತಗಳಲ್ಲಿ ಮಾನವ ಸರಪಳಿ ರಚಿಸಿ ತಾಲೂಕು ರಚನೆಗೆ ಆಗ್ರಹಿಸಿದರು. ಕುಶಾಲನಗರಕ್ಕೆ ಆಗಮಿಸಿದ ಸಂದರ್ಭ ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಬೈಕ್ಗಳನ್ನು ರಸ್ತೆಗೆ ಅಡ್ಡಲಾಗಿಟ್ಟು ರಸ್ತೆ ತಡೆ ನಡೆಸಿದರು. ಕಾವೇರಿ ತಾಲೂಕು ರಚಿಸಿಯೇ ತೀರಬೇಕೆಂದು ಆಗ್ರಹಿಸಿ ಘೋಷಣೆಗಳ ಮೂಲಕ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಈ ಸಂದರ್ಭ ಸಂಘಟನೆಯ ಅಧ್ಯಕ್ಷ ಜಿನಾಶ್, ಪ್ರಮುಖರಾದ ರಿಯಾಜ್, ಹಕೀಂ, ಫಾಜಿಲ್, ಹಂಸ ಸೇರಿದಂತೆ ಹೋರಾಟ ಸಮಿತಿ ಪ್ರಮುಖರು ಇದ್ದರು.
ಸುಂಟಿಕೊಪ್ಪ: ಕಾವೇರಿ ತಾಲೂಕು ರಚಿಸಬೇಕೆಂದು ಆಗ್ರಹಿಸಿ ಗದ್ದೆಹಳ್ಳದಿಂದ ಹೊರಟ ಬೈಕ್ ಜಾಥಾ ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಚಳುವಳಿ ನಡೆಸಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಕಾವೇರಿ ತಾಲೂಕು ಹೋರಾಟ ಸದಸ್ಯ ಎಂ.ಎ. ಉಸ್ಮಾನ್ ಈ ಹೋರಾಟದಲ್ಲಿ ಕೇವಲ ಕೂಲಿ ಕಾರ್ಮಿಕರು ಮಾಧ್ಯಮ ವರ್ಗದವರೇ ಹೆಚ್ಚಾಗಿ ಭಾಗವಹಿಸುತ್ತಾರೆ. ಆದರೆ ಕಾಫಿ ಬೆಳೆಗಾರರು ಶ್ರೀಮಂತರು ಪಾಲ್ಗೊಳ್ಳದಿರುವದು ವಿಷಾದನೀಯ. ತಾ. 9 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿಗೆ ಭೇಟಿ ನೀಡುವಾಗ ಅವರಿಗೆ ಮನವಿ ಆರ್ಪಿಸಿ ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಲಾಗುವದು ಎಂದರು. ಸುಂಟಿಕೊಪ್ಪ ಗ್ರಾ.ಪಂ.ಸದಸ್ಯ ಕೆ.ಇ.ಕರೀಂ, ಸುಂಟಿಕೊಪ್ಪ ಕಾವೇರಿ ತಾಲೂಕು ಸ್ಥಾನೀಯ ಸಮಿತಿ ಅಧ್ಯಕ್ಷ ಪಿ.ಎಫ್.ಸಬಾಸ್ಟೀನ್ ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನಡ ವೃತ್ತದಲ್ಲಿ ಸುಂಟಿಕೊಪ್ಪ ಗ್ರಾ.ಪಂ.ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಪಂಚಾಯಿತಿ ಸದಸ್ಯ ಶಾಹೀದ್, ಕಾವೇರಿ ತಾಲೂಕು ಹೋರಾಟ ಸ್ಥಾನೀಯ ಸಮಿತಿ ಉಪಾಧ್ಯಕ್ಷ ಅಣ್ಣಾಶರೀಫ್ ಕಾರ್ಯದರ್ಶಿ ಪಿ.ಆರ್. ಸುನಿಲ್ ಕುಮಾರ್ ಮತ್ತಿತರರು ಇದ್ದರು.