ಮಡಿಕೇರಿ, ಜ. 6 : ಸಾಂಪ್ರ ದಾಯಿಕವಾಗಿ ವಿವಾಹವಾಗಿದ್ದ ಪತಿ ಅನ್ಯ ಸ್ತ್ರೀಯೊಂದಿಗೆ ಸಂಬಂಧ ಹೊಂದಿರುವದನ್ನು ಸಹಿಸಲಾಗದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ನಿಟ್ಟಿನಲ್ಲಿ ಪತಿ ಹಾಗೂ ಆತನ ತಾಯಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೃತಳ ಸಹೋದರ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.ಕಳೆದ ತಾ. 2ರಂದು ಭಾಗಮಂಡಲದ ಕೂಡಕಂಡಿ ಶಿವಪ್ರಸಾದ್ ಎಂಬವರ ಪತ್ನಿ ಮಮತ (30) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿ ತ್ತಾದರೂ, ವಾಸ್ತವ ತಿಳಿದಿರಲಿಲ್ಲ. ಇದೀಗ ಮೃತೆ ಮಮತ ಬರೆದಿರುವ ಡೈರಿ ಹಾಗೂ ಏಳು ವರ್ಷ ಪ್ರಾಯದ ಮಗನಿಗೂ ಬರೆದಿರುವ ಪತ್ರದಿಂದ ಪತಿ ಶಿವಪ್ರಸಾದನಿಗೆ ನೆರೆಮನೆಯ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿರುವದು ತಿಳಿದುಬಂದಿದೆ. ಈ ಬಗ್ಗೆ ಈ ಹಿಂದೆಯೇ ಕುಟುಂಬದ ನಡುವೆ ಮಾತುಕತೆ ನಡೆದು ತೀರ್ಮಾನವಾಗಿತ್ತಾದರೂ, ನಂತರದಲ್ಲಿ ಅದೇ ಚಾಳಿ ಮುಂದುವರೆದಿದ್ದು, ಇದನ್ನು ಪತ್ತೆ ಹಚ್ಚಿದ ಪತ್ನಿ ಮಮತ ತವರು ಮನೆ ಸೇರಿದ್ದಳು. ತದನಂತರ ಪತಿ ಆಕೆಯನ್ನು ಕಾಡಿ ಬೇಡಿ ತಪ್ಪು ಮಾಡುವದಿಲ್ಲವೆಂದು ಆಕೆಯ ಡೈರಿಯಲ್ಲಿಯೇ ತಪ್ಪೊಪ್ಪಿಗೆ ಸಹಿ ಮಾಡಿದ್ದಾನೆ.

ಆದರೂ ತನ್ನ ಚಾಳಿ ಬಿಡದ ಪತಿ ಆಕೆಯ ಸಂಬಂಧ ಬೆಳೆಸಿರುವ ಬಗ್ಗೆ ತಿಳಿದುಕೊಂಡ ಮಮತ, ಪ್ರತಿಯೊಂದನ್ನು

(ಮೊದಲ ಪುಟದಿಂದ) ಡೈರಿಯಲ್ಲಿ ಬರೆದಿದ್ದಾಳೆ. ಕೊನೆಯದಾಗಿ ಪತಿ ಹಾಗೂ ಮಗನಿಗೆ ಪತ್ರ ಬರೆದು ವಿಷವನ್ನು ತಂದಿಟ್ಟು ಮಕ್ಕಳಿಗೆ, ಅಪ್ಪನಂತೆ ಬೆಳೆಯದೆ ಉತ್ತಮವಾಗಿ ಬಾಳಿ ಬದುಕಿ ಎಂದು ಮಗನ ಸ್ಕೂಲ್ ಕಂಪಾಸ್ ಬಾಕ್ಸ್‍ನಲ್ಲಿಟ್ಟಿದ್ದಾಳೆ. ಮದುವೆ ಸಂದರ್ಭ ತೊಡಿಸಿದ್ದ ಧಾರೆ ಸೀರೆ ತೆಗೆದಿಟ್ಟು, ಹಾಲು, ಬಿಸಿನೀರು ಕಾಯಿಸಿ ಸಾವಿನ ನಂತರದ ಕ್ರಿಯೆಗೆ ತಯಾರು ಮಾಡಿಟ್ಟಿದ್ದಾಳೆ. ಕುಟುಂಬಸ್ಥರಿಗೆ ಎಲ್ಲರಿಗೂ ಕರೆ ಮಾಡಿದ್ದಾಳೆ. ಅಂತಿಮವಾಗಿ ಮಕ್ಕಳನ್ನು ನೋಡಬೇಕೆಂದು ರಸ್ತೆ ಬದಿ ಕಾದಿದ್ದಾಳೆ. ಆದರೆ ಮೊದಲೇ ವಿಷ ಸೇವಿಸಿದ್ದರಿಂದ ತ್ರಾಣವಿಲ್ಲದೆ ಮನೆಗೆ ಬಂದು ಪತಿಗೆ ಕರೆ ಮಾಡಿ ಮಕ್ಕಳನ್ನು ಕರೆ ತರುವಂತೆ ಹೇಳಿದ್ದಾಳೆ. ಸಂಶಯಗೊಂಡ ಪತಿ ಬಂದು ನೋಡುವಷ್ಟರಲ್ಲಿ ಆಕೆ ಆಸ್ವಸ್ಥಳಾಗಿದ್ದಳು. ಆಸ್ಪತ್ರೆಗೆ ಸೇರಿಸಿದರೂ ಫಲಕಾರಿಯಾಗಲಿಲ್ಲ.

ಇದಕ್ಕೂ ಮುನ್ನ ಪತಿಯ ಸಂಬಂಧ ಹೊಂದಿದ್ದ ಸ್ತ್ರೀಯ ಬಳಿ ತೆರಳಿ ನನ್ನ ಗಂಡನ ಬಿಟ್ಟು ಬಿಡು ಎಂದು ಗೋಗರೆದಿದ್ದಾಳೆ. ಆದರೂ ಆಕೆ ಕಿವಿಕೊಡದ ಹಿನ್ನೆಲೆಯಲ್ಲಿ ಈಕೆ ಸಾವನ್ನು ಕರೆದಿದ್ದಾಳೆ. ಒಂದು ದಿನದ ಮುಂದೆ ‘ಒಂದು ಡೈರಿ ಬರೆದಿದ್ದು, ಇದನ್ನು ಪೊಲೀಸರಿಗೆ ಕೊಡುವಂತೆ’ ಮಗನಿಗೆ ಹೇಳಿದ್ದಾಳೆ. ಆದರೆ ಮಕ್ಕಳಿಗೆ ಇದಾವುದೇ ಅರಿವಿರದ ಹಿನ್ನೆಲೆಯಲ್ಲಿ ಸುಮ್ಮನಿದ್ದಾರೆ. ಆದರೆ ಇದೀಗ ಡೈರಿ ಪೊಲೀಸರಿಗೆ ಸಿಕ್ಕಿದ್ದು, ಪೊಲೀಸರು ಪತಿ ಶಿವಪ್ರಸಾದ ಹಾಗೂ ಅತ್ತೆ ದೇವಕಿ ಅವರುಗಳನ್ನು ಬಂಧಿಸಿ ನ್ಯಾಯಾಂಗ ವಶಕೊಪ್ಪಿಸಿದ್ದಾರೆ.