ಎಂ.ಸಿ. ನಾಣಯ್ಯ ಭಾಗಮಂಡಲ, ಜ. 7: ಗ್ರಾಮೀಣ ಪ್ರದೇಶದಲ್ಲಿ ಬಡತನ ನಿವಾರಣೆಗೆ ಸ್ವ-ಸಹಾಯ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿದ್ದು ಉತ್ತಮ ರೀತಿಯ ಜೀವನದತ್ತ ಕೊಂಡೊಯ್ಯಲು ಸಹಕರಿಸುತ್ತಿದೆ ಎಂದು ನಬಾರ್ಡ್ ಬ್ಯಾಂಕಿನ ವ್ಯವಸ್ಥಾಪಕ ಎಂ.ಸಿ. ನಾಣಯ್ಯ ಹೇಳಿದರು. ಭಾಗಮಂಡಲದ ಗೌಡ ಸಮಾಜದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಜಿಲ್ಲಾ ಸಹಕಾರ ಬ್ಯಾಂಕ್ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗದು ರಹಿತ ವ್ಯವಹಾರಕ್ಕೆ ಎಲ್ಲರೂ ಮಾನಸಿಕವಾಗಿ ಸಿದ್ಧರಾಗಬೇಕಾಗಿದೆ. ಪ್ರಧಾನಿಯ ಡಿಜಿಟಲ್ ಇಂಡಿಯಾ ಕನಸು ನನಸಾಗಲು ಗ್ರಾಮೀಣ ಜನತೆಯಿಂದ ಸಾಧ್ಯ ಇದೆ ಎಂದರು.
ಇನ್ನೊರ್ವ ಅತಿಥಿ ನೋಡಲ್ ಅಧಿಕಾರಿ ಟಿ.ಎಸ್. ತುಂಗರಾಜ್ ಮಾತನಾಡಿ, ಸ್ವ-ಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆಯಲು ಷರತ್ತುಗಳ ಅನ್ವಯದಿಂದಾಗಿ ತೊಡಕು ಉಂಟಾಗುತ್ತಿದೆ. ಮುಂದಿನ ವರ್ಷದಲ್ಲಿ ಎಲ್ಲಾ ಗ್ರಾಮೀಣ ಬ್ಯಾಂಕುಗಳು ಆನ್ಲೈನ್ ವ್ಯವಸ್ಥೆ ಮಾಡಿಕೊಳ್ಳಲಿದೆ ಎಂದರು. ಕಾರ್ಯಕ್ರಮವನ್ನು ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಅಯ್ಯಣೀರ ದಿನೇಶ್ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಡಾ. ದೇವಯ್ಯ ಜಿಲ್ಲಾ ಸಹಕಾರ ಬ್ಯಾಂಕಿನ ರಕ್ಷಿತ್ ಹರೀಶ್, ಯೋಗೇಂದ್ರ ನಾಯಕ್, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ನಿರ್ವಹಣಾಧಿಕಾರಿ ಕಲಾವತಿ, ಲಲಿತಾ, ನಿರ್ದೇಶಕರಾದ ಸೋಮಪ್ಪ, ಕುದುಪಜೆ ಹರಿ, ಇನ್ನಿತರರು ಇದ್ದರು.