ಮಡಿಕೇರಿ, ಜ. 6: ಕೊಡಗು ಜಿಲ್ಲೆಗೆ ತಾ. 9 ರಂದು ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಮಂಡಲ ಕ್ಷೇತ್ರಕ್ಕೆ ಮೇಲ್ಸೇತುವೆ ಕಾಮಗಾರಿಗೆ ರೂ. 2962 ಲಕ್ಷ ವೆಚ್ಚದ ಯೋಜನೆಯೊಂದಿಗೆ ಒಟ್ಟು ರೂ. 165.59 ಕೋಟಿಯ ವಿವಿಧ ಕೆಲಸಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಗೊತ್ತಾಗಿದೆ.ಭಾಗಮಂಡಲ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ಸೇರಿದಂತೆ ಆರ್ಜಿ ಗ್ರಾಮದಲ್ಲಿ ರೂ. ಒಂದು ಕೋಟಿ ವೆಚ್ಚದ ವಾಲ್ಮೀಕಿ ಭವನ, ಬಾಳುಗೋಡುವಿನಲ್ಲಿ ರೂ. 99 ಲಕ್ಷದ ಏಕಲವ್ಯ ಮಾದರಿ ವಸತಿ ಶಾಲೆ, ನಿಟ್ಟೂರು ಕಾರ್ಮಾಡುವಿನ ವಿದ್ಯಾರ್ಥಿ ನಿಲಯಗಳನ್ನು ಈ ಸಂದರ್ಭ ಉದ್ಘಾಟಿಸಲಿದ್ದಾರೆ.
ಮಡಿಕೇರಿಯಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ರೂ. 198 ಲಕ್ಷದಲ್ಲಿ ಪೂರ್ಣಗೊಂಡಿದ್ದು, ಇದರೊಂದಿಗೆ ನಾಪೋಕ್ಲುವಿನಿಂದ ಬೇತು ಸಂಪರ್ಕ ರಸ್ತೆಯ ರೂ. 101 ಲಕ್ಷದ ಕಾಮಗಾರಿ, ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ರೂ. 285 ಲಕ್ಷದ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಲಿದ್ದಾರೆ.
ಆಲೂರು ಸಿದ್ದಾಪುರದಲ್ಲಿ ರೂ. 350 ಲಕ್ಷ ವೆಚ್ಚದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ಉದ್ಘಾಟನೆ, ಹಾರಂಗಿ ಅಣೆಕಟ್ಟು ಸಮೀಪದ ಅತ್ತೂರು ಗ್ರಾಮದಲ್ಲಿ ಪೂರ್ಣಗೊಂಡಿರುವ ರೂ. 239 ಲಕ್ಷದ ಕುಡಿಯುವ ನೀರಿನ ಯೋಜನೆ, ರೂ. 249 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಹಾರಂಗಿ ಉದ್ಯಾನವನದ ಸಂಗೀತ ಕಾರಂಜಿಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸುವರು.
ಅಲ್ಲದೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಸಂಬಂಧಿಸಿದಂತೆ ರೂ. 116 ಲಕ್ಷದಲ್ಲಿ ನಿರ್ಮಾಣಗೊಂಡಿರುವ ಅತಿಥಿಗೃಹ, ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ರೂ. 150 ಲಕ್ಷದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ತಲಾ ರೂ. 12 ಲಕ್ಷ ವೆಚ್ಚದಲ್ಲಿ ಸೂರ್ಲಬ್ಬಿ, ಅಯ್ಯಂಗೇರಿ, ಕುಯ್ಯಮುಡಿಗಳಲ್ಲಿ ಅಂಗನವಾಡಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ನಗರೋತ್ಥಾನ ಯೋಜನೆಯಡಿ ರೂ. 35 ಕೋಟಿ ವೆಚ್ಚದಲ್ಲಿ ಮಡಿಕೇರಿ, ರೂ. 2 ಕೋಟಿ ವೆಚ್ಚದಲ್ಲಿ ಕುಶಾಲನಗರ, ರೂ. 20 ಕೋಟಿ ವೆಚ್ಚದಲ್ಲಿ ಸೋಮವಾರಪೇಟೆ ಹಾಗೂ ರೂ. 41 ಕೋಟಿ ವೆಚ್ಚದಲ್ಲಿ ವೀರಾಜಪೇಟೆ ಪಟ್ಟಣದಲ್ಲಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.
ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. 5 ಕೋಟಿ ವೆಚ್ಚದ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಚಾಲನೆಯೊಂದಿಗೆ, ಅಲ್ಲಿನ ಗುಂಡೂರಾವ್ ಬಡಾವಣೆಯಲ್ಲಿ ರೂ. 759 ಲಕ್ಷದ ಅರವತ್ತು ಸಾವಿರ ಮೊತ್ತದ ಅಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು ಇದೇ ಸಂದರ್ಭ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವಾತಾ ಮತ್ತು ಪ್ರಚಾರ ಇಲಾಖೆಯ ವತಿಯಿಂದ ಗಾಂಧಿಭವನ ನಿರ್ಮಾಣಕ್ಕಾಗಿ ರೂ. 3 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ.
ದುಬಾರೆ ರಸ್ತೆ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ದುಬಾರೆ ರಸ್ತೆ ಕಾಮಗಾರಿಗೆ ರೂ. 132 ಲಕ್ಷ ವೆಚ್ಚದಲ್ಲಿ ಭೂಮಿಪೂಜೆ ಮಾಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಲ್ಕಂದೂರು, ಶಾಂತಳ್ಳಿ ರಸ್ತೆ ಕಾಮಗಾರಿಗೆ ರೂ. 90 ಲಕ್ಷ ಮೊತ್ತಕ್ಕೆ ಶಂಕುಸ್ಥಾಪನೆ ನೆರವೇರಿಸುವರು.
ಮಿಟ್ಟು ಚಂಗಪ್ಪ ಹೇಳಿಕೆಭಾಗಮಂಡಲ ಸುತ್ತಮುತ್ತಲಿನ ಪ್ರದೇಶದ ಗ್ರಾಮಸ್ಥರ ಬಹುಕಾಲದ ಬೇಡಿಕೆ ಪೂರ್ಣಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ಮೇಲ್ಸೇತುವೆ ಕಾಮಗಾರಿ ಶೀಘ್ರ
(ಮೊದಲ ಪುಟದಿಂದ) ಆರಂಭಗೊಳ್ಳಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ ತಿಳಿಸಿದ್ದಾರೆ. ಜಿಲ್ಲಾ ಉಸ್ತವಾರಿ ಸಚಿವ ಎಂ.ಆರ್. ಸೀತಾರಾಂ ಅವರ ಪ್ರಯತ್ನದ ಫಲವಾಗಿ ಮುಖ್ಯಮಂತ್ರಿ
ಸಿದ್ಧರಾಮಯ್ಯ ಅವರು ಈ ಮಹತ್ವಾಕಾಂಕ್ಷೆಯ ಯೋಜನೆಗೆ ತಾ. 9 ರಂದು ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2014ರ ಜುಲೈ ತಿಂಗಳಿನಲ್ಲಿ ತ್ರಿವೇಣಿ ಸಂಗಮ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ಸಂದರ್ಭ ತಾವು ಸೇರಿದಂತೆ ಮಾಜಿ ಸಚಿವ ದಿ. ಎಂ.ಎಂ. ನಾಣಯ್ಯ, ಈಗಿನ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ದಿ. ಬಿ.ಟಿ. ಪ್ರದೀಪ್, ಜೆ.ಎ. ಕರುಂಬಯ್ಯ, ಮನೆಯಪಂಡ ಪೊನ್ನಪ್ಪ, ಹಾಗೂ ಭಾಗಮಂಡಲದ ನಾಗರಿಕರು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರ ಗಮನ ಸೆಳೆದು ಮೇಲ್ಸೇತುವೆ ನಿರ್ಮಾಣಕ್ಕಾಗಿ ಮನವಿ ಮಾಡಿಕೊಂಡಿದ್ದಾಗಿ ಅವರು ನೆನಪಿಸಿದ್ದಾರೆ.