*ಸಿದ್ದಾಪುರ, ಜ. 6: ವಿಧಾಸಭಾ ಚುನಾವಣೆ ಸಮೀಪಿಸುತ್ತಿರುವಾಗ ಕೊಡಗು ಜಿಲ್ಲೆಯಲ್ಲಿ ಜಾತಿ ಆಧಾರದಲ್ಲಿ ಟಿಕೇಟು ನೀಡಬೇಕೆಂಬ ಗೊಂದಲದ ಹೇಳಿಕೆ ನೀಡಿ ಜನರಲ್ಲಿ ಮುಕ್ತ ಮತದಾನ ಮಾಡುವ ಬಗ್ಗೆ ಅತಂಕ ಸೃಷ್ಟಿಸುತ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಚೆಟ್ಟಳ್ಳಿ ಜನಪರ ಹೋರಾಟ ಸಮಿತಿ ವತಿಯಿಂದ ಸದ್ಯದಲ್ಲೇ ತಲಕಾವೇರಿಯಿಂದ ಭಾಗಮಂಡಲದವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ.

ಜನಪರ ಹೋರಾಟ ಸಮಿತಿ ಅಧ್ಯಕ್ಷ ನೂಜಿಬೈಲು ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಮತದಾನ ಪವಿತ್ರವಾದ ಹಕ್ಕನ್ನು ಚಲಾಯಿಸಲು ಮತದಾರರಿಗೆ ಮುಕ್ತ ಅವಕಾಶವಿದೆ ಕೊಡಗಿನಲ್ಲಿ ಎಲ್ಲಾ ಜನಾಂಗದವರು ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ.

ಆದರೆ ಇತ್ತೀಚೆಗೆ ಕೆಲ ಕೊಡವ ಸಮಾಜದವರು ಗೌಡ ಒಕ್ಕೂಟದವರು ಸಭೆ ಸೇರಿ ಮುಂದಿನ ಚುನಾವಣೆಯಲ್ಲಿ ತಮ್ಮ ತಮ್ಮ ಜನಾಂಗದ ಆಭ್ಯರ್ಥಿಗೆ ಟಿಕೇಟು ನೀಡಬೇಕೆಂಬ ಫರ್ಮಾನು ಹೊರಡಿಸಿರುವದು ಸರಿಯಲ್ಲ; ಇಷ್ಟು ವರ್ಷಗಳ ಕಾಲ ಕೊಡಗಿನಲ್ಲಿ ಇಂಥಹ ಜಾತಿ ಆಧಾರದಲ್ಲಿ ಚುನಾವಣೆ ನಡೆದಿಲ್ಲ ಎಂದು ವಿಷಾದಿಸಲಾಯಿತು.

ಆಯಾ ಪಕ್ಷದವರು ಯಾರಿಗೆ ಟಿಕೆಟು ನೀಡಿದರೆ ಜಯ ಸಾಧಿಸಬಹುದೆಂದು ನಿರ್ಧರಿಸುತ್ತಾರೆ. ಜಾತಿ ಆಧಾರದಲ್ಲಿ ಟಿಕೆಟು ನೀಡುವದಿಲ್ಲ ಜಾತಿ ಆಧಾರದಲ್ಲಿ ಟಿಕೆಟಿಗಾಗಿ ಇತರೆ ಜನಾಂಗದವರೂ ಬೇಡಿಕೆ ಮುಂದಿಟ್ಟರೆ ಏನಾಗಬಹುದು ಎಂದು ವಿಮರ್ಶಿಸಲಾಯಿತು.

ಈ ನಿಟ್ಟಿನಲ್ಲಿ ಜನರ ಜಾಗೃತಿ ಮೂಡಿಸಲು ತಲಕಾವೇರಿಯಿಂದ ಭಾಗಮಂಡಲದವರೆಗೆ ಜನಪರ ಹೋರಾಟ ಸಮಿತಿ ಸ್ಥಾಪಕ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ನೇತೃತ್ವದಲ್ಲಿ ಕಾಲ್ನಡಿಗೆ ಜಾಥ ನಡೆಸಲಾಗುವದು; ಆನಂತರ ಜಿಲ್ಲೆಯಾದ್ಯಂತ ಇತರೆ ಗ್ರಾಮಕ್ಕೂ ತೆರಳಿ ಜನರಿಗೆ ಜಾಗೃತಿ ಮೂಡಿಸುವ ತೀರ್ಮಾನವನ್ನು ಜನಪರ ಹೋರಾಟ ಸಮಿತಿ ಕೈಗೊಂಡಿತು.