ಮಡಿಕೇರಿ, ಜ. 6: ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಹಲವಾರು ಹಿಂದೂ ಸಂಘಟನೆಗೆ ಮುಖಂಡರ ಹತ್ಯೆ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವದೇ ಕಾರಣ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಅವರು ಆರೋಪಿಸಿದರು. ಕಕ್ಕಬೆ ಮುತ್ತವ್ವ ಸಭಾಂಗಣದಲ್ಲಿ ನಡೆದ ಕಕ್ಕಬೆ ಮತ್ತು ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ವರ್ಗದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಹೊರ ರಾಜ್ಯದ ಕೊಲೆ ಗಡುಕರಿಗೆ ರಾಜ್ಯದಲ್ಲಿ ಆಶ್ರಯ ಕಂಡು ಬರುತ್ತಿದೆ. ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಪಿ.ಎಫ್.ಐ., ಎಸ್.ಡಿ.ಪಿ.ಐ.ಗೆ ಸರಕಾರ ಬೆಂಬಲ ನೀಡುತ್ತಿದೆ. ಇದನ್ನು ತಡೆಗಟ್ಟಬೇಕಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರ ರಾಜ್ಯಕ್ಕೆ ಸಾಕಷ್ಟು ಅನುದಾನ ನೀಡುತ್ತಿದೆ ಇದನ್ನು ನಮ್ಮದೆನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸುವಿನ ಹಗ್ಗಕ್ಕೆ ಹಣ ನೀಡಿ ಹಸು ನನ್ನದೆಂದು ಹೇಳುತ್ತಿದ್ದಾರೆ ಎಂದು ಪುಟ್ಟಸ್ವಾಮಿ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಶೇ. 33 ಹಿಂದುಳಿದ ವರ್ಗದವರಿದ್ದಾರೆ. ಶೇ. 22 ರಷ್ಟು ಪರಿಶಿಷ್ಟ ಜಾತಿಗೆ ಸೇರಿದವರಿದ್ದಾರೆ. ರಾಜ್ಯದ 224 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಗೆಲ್ಲಬೇಕಾದರೆ ಈ ವರ್ಗದವರ ವಿಶ್ವಾಸ ನಂಬಿಕೆ ಗಳಿಸುವದರೊಂದಿಗೆ ಇವರನ್ನು ಗೌರವದಿಂದ ಕಾಣಬೇಕಾಗಿದೆ ಎಂದು ಸಲಹೆ ನೀಡಿದರು. ಸಿದ್ದರಾಮಯ್ಯ ಅಹಿಂದ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಲಿಂಗಾಯಿತ ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಿದ್ದರಾಮಯ್ಯ ಅವರ ಕನಸು ನುಚ್ಚು ನೂರು ಆಗಲಿದೆ ಎಂದು ಭವಿಷ್ಯ ನುಡಿದರು.
ರಾಜ್ಯದ ಕಾಂಗ್ರೆಸ್ ಆಡಳಿತದ ನಾಲ್ಕುವರೆ ವರ್ಷದಲ್ಲಿ 6521 ಕೊಲೆ, 19 ಸಾವಿರ ಅತ್ಯಾಚಾರ, 5 ಸಾವಿರ ಮಕ್ಕಳ ಮೇಲಿನ ದೌರ್ಜನ್ಯ, 3513 ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣ ದಾಖಲಾಗಿದೆ. ಇದಕ್ಕೆ ರಾಜ್ಯದ ಕಾನೂನು ಸುವ್ಯವಸ್ಥೆ ಹದÀಗೆಟ್ಟಿರುವದೇ ಕಾರಣ. ಇದನ್ನು ಅವಲೋಕಿಸಿದಾಗ ನಾವು ಭಾರತದಲ್ಲಿದ್ದೇವೆಯೇ? ಅಥವಾ ಪಾಕಿಸ್ತಾನದಲ್ಲಿದ್ದೇವೆಯೇ? ಎಂಬ ಅನುಮಾನ ಕಾಡುತ್ತಿದೆ ಎಂದು ದೂರಿದರು.
ಮನಮೋಹನ್ ಸಿಂಗ್ ಸರಕಾರ ಆಡಳಿತದಲ್ಲಿರುವ ಸಂದರ್ಭ 5 ವರ್ಷದಲ್ಲಿ ರಾಜ್ಯಕ್ಕೆ 64 ಸಾವಿರ ಕೋಟಿ ಅನುದಾನ ನೀಡಿದೆ. ಆದರೆ ಮೋದಿ ಸರಕಾರ ನಾಲ್ಕು ವರ್ಷ ಅವಧಿಯಲ್ಲಿ 1.35 ಕೋಟಿ ರೂ. ಅನುದಾನ ನೀಡಿದೆ. ಎಲ್ಲಾ ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬದು ಮೋದಿ ಅವರ ಧ್ಯೇಯವಾಗಿದೆ ಎಂದರು.
ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ 3500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಸುಳ್ಳು ರಾಜಕಾರಣ ಮಾಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಕಡೆಗಳಲ್ಲೂ ಭೂಮಿ ಪೂಜೆ ನೆರವೇರಿಸುತ್ತಿದ್ದಾರೆ. ಇದಕ್ಕೆ ಹಣ ನೀಡುವವರು ಯಾರು? ಎಂದು ಪ್ರಶ್ನಿಸಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ರಾಜ್ಯ ಸರಕಾರ ಬಿಜೆಪಿ ಪರ, ಹಿಂದೂ ಪರ ಕೆಲಸ ಮಾಡುತ್ತಿರುವ ಕಾರ್ಯಕರ್ತ ರನ್ನು ವ್ಯವಸ್ಥಿತವಾಗಿ ಅಮಾನುಷವಾಗಿ ಹತ್ಯೆ ಮಾಡಿಸುತ್ತಿದೆ ಎಂದು ದೂರಿದರು. ನಾವು ಅಹಿಂದ ಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ, ಬಿಜೆಪಿ ಕಾರ್ಯಕರ್ತರೆಯನ್ನುವ ಕಾರಣಕ್ಕಾಗಿ 22 ಜನ ಅಹಿಂದ ವರ್ಗಕ್ಕೆ ಸೇರಿದವರನ್ನು ಹತ್ಯೆ ಮಾಡಿದ್ದರೂ ಸುಮ್ಮನಿದ್ದಾರೆಂದು ಆರೋಪಿಸಿದರು.
ನಮ್ಮ ಜಿಲ್ಲೆಯ ಪರಿಸರ ಸಂರಕ್ಷಣೆ ನಮಗೆ ಗೊತ್ತಿದೆ. ಉಸ್ತುವಾರಿ ಸಚಿವರಿಂದ ಪರಿಸರ ರಕ್ಷಣೆ ಬಗ್ಗೆ ನಾವು ಕಲಿಯಬೇಕಾಗಿಲ್ಲ ಎಂದ ಅವರು ರಾಜ್ಯದಲ್ಲಿ ಒಂದು ವರ್ಗವನ್ನು ಎತ್ತಿಕಟ್ಟುವ ಮೂಲಕ ಕಾನೂನು ಸುವ್ಯವಸ್ಥೆ ಹದಗೆಡಿಸಲಾಗುತ್ತಿದೆ. ಹಿಂದೆ ಬಿಜೆಪಿ ಸರಕಾರವಿದ್ದಾಗ ಯಾವದೇ ಕೋಮುಗಲಭೆ ನಡೆದಿಲ್ಲ. ಆದರೆ ಇಂದು ಏನಾಗುತ್ತಿದೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರದ ಅಧಿಕಾರದಲ್ಲಿ ಮಹಿಳೆಯರು, ಮಕ್ಕಳು ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜವನ್ನು ಒಡೆಯುವ ಸಮಾಜ ಘಾತಕ ಶಕ್ತಿಗಳಾದ ಪಿ.ಎಫ್.ಐ., ಎಸ್.ಡಿ.ಪಿ.ಐ. ಸಂಘಟನೆಗಳನ್ನು ಪೆÇೀಷಿಸಲಾಗುತ್ತಿದೆ. ಕಾಲೇಜಿನಿಂದ ಮನೆಗೆ ವಾಪಾಸಾಗುತ್ತಿ ರುವ ವಿದ್ಯಾರ್ಥಿಯನ್ನು ಬಸ್ಸಿನಿಂದ ಹೊರಗೆಳೆದು ಹಲ್ಲೆ ನಡೆಸಲಾಗುತ್ತಿದೆ. ಆದರೂ ಹಲ್ಲೆಕೋರರಿಗೆ ಸರಕಾರ ರಕ್ಷಣೆ ನೀಡುತ್ತಿದೆ ಎಂದು ಆಕ್ಷೇಪಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಎಸ್.ಸಿ ಮೋರ್ಚದ ರಾಜ್ಯಾಧ್ಯಕ್ಷ ಡಿ.ಎಸ್. ವೀರಯ್ಯ, ರಾಜ್ಯ ಬಿಜೆಪಿ ಹಿಂದುಳಿದ ವರ್ಗದ ಉಪಾಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಪುಟ್ಟಸ್ವಾಮಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಜ್ಯ ಬಿಜೆಪಿ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ವೀರಾಜಪೇಟೆ ತಾಲೂಕು ಹಿಂದುಳಿದ ವರ್ಗದ ಬಿಜೆಪಿ ಅಧ್ಯಕ್ಷ ಬಿ.ಸಿ. ಜೀವನ್, ಬಿಜೆಪಿ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ರಘು ಆನಂದ, ಬಿಜೆಪಿ ಪರಿಶಿಷ್ಟ ಜಾತಿ ಜಿಲ್ಲಾಧ್ಯಕ್ಷ ಸತೀಶ್, ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ತಾಲೂಕು ಪಂಚಾಯಿತಿ ಸದಸ್ಯೆ ನೆರೆಯಂಡಮ್ಮಂಡ ಉಮಾಪ್ರಭು, ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ, ಕಕ್ಕಬ್ಬೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಲಿಯಂಡ ಸುನಂದ, ಕಕ್ಕಬ್ಬೆ ಸ್ಥಾನೀಯ ಸಮಿತಿ ಹಿಂದುಳಿದ ವರ್ಗದ ಅಧ್ಯಕ್ಷ ಕೆ.ಎನ್.ನಾಣಯ್ಯ, ನರಿಯಂದಡ ಬಿಜೆಪಿ ಸ್ಥಾನೀಯ ಸಮಿತಿ ಹಿಂದುಳಿದ ವರ್ಗದ ಅಧ್ಯಕ್ಷ ದೇಯಿರ ಸುಭಾಷ್ ಭೀಮಯ್ಯ, ಮಡಿಕೇರಿ ತಾಲೂಕು ಹಿಂದುಳಿದ ವರ್ಗದ ಉಪಾಧ್ಯಕ್ಷ ಕೆ.ಯು.ಗಿರೀಶ್, ಬಿ.ಎ.ದೇವಯ್ಯ, ರಾಜಶೇಖರ್, ದೇವರಾಜ್, ಕಣಿಯಂಡ ಜೆ.ಪ್ರಕಾಶ್ ಇದ್ದರು.