ಎರೆಹುಳು ಒಂದು ರೀತಿಯಲ್ಲಿ ರೈತನ ಮಿತ್ರನಾದರೆ ಜೇಡರ ಹುಳು ಮತ್ತೊಂದು ರೀತಿಯಲ್ಲಿ ಮಿತ್ರ ಎನ್ನಬಹುದು. ಪರಿಸರ ಸಮತೋಲನ ವನ್ನು ಕಾಪಾಡುವ ಜೇಡ ತನಗೆ ಸೂಕ್ತ ಕಂಡ ಪ್ರದೇಶಗಳಲ್ಲಿ ಬಲೆ ನೇಯ್ದು ಕ್ರಿಮಿ-ಕೀಟಗಳ ಬೇಟೆಯಾಡಿ ತನ್ನ ಹೊಟ್ಟೆ ಹೊರೆಯುವ ಮೂಲಕ ಕೃಷಿಕನಿಗೂ ಉಪಕಾರ ಮಾಡುತ್ತಿದೆ.

ಮನೆ ಪರಿಸರದಲ್ಲಿ ಜೇಡರ ಬಲೆಗಳಿದ್ದರೆ ಯಾವದೇ ಅಪಾಯವಿಲ್ಲವೆಂದು ತಜ್ಞರು ಹೇಳುತ್ತಾರೆ. ಆದರೆ ಜೇಡರ ಬಲೆಯನ್ನು ಇಷ್ಟಪಡುವವರು ವಿರಳ ಜೇಡರ ಹುಳುವಿನ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಾಗಾರ ಹಾಗೂ ವಿವಿಧ ಪ್ರಭೇದಗಳ ಜೇಡರ ಛಾಯಾಚಿತ್ರ ಪ್ರದರ್ಶನವೊಂದು ತಾ. 7 ರಂದು (ಇಂದು) ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ನಡೆಯಲಿದೆ.

ಮಡಿಕೇರಿಯ ಅಂಕುರ್ ಪ್ರಕೃತಿ ಸ್ನೇಹಿ ಕೃಷಿಕರ ಬಳಗದ ಶಿವಕುಮಾರ್ ಹಾಗೂ ಸಲೀಲಾಪಾಟ್ಕರ್ ತಂಡದ ಸಂಯೋಜನೆಯಲ್ಲಿ ಏರ್ಪಡಿಸಿರುವ ಕಾರ್ಯಕ್ರಮ ತಾ. 7 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ಗೊಳ್ಳಲಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ‘ಹಿತ್ತಲ ಜೇಡಗಳು’ ಎಂಬ ಪುಸ್ತಕವನ್ನು ಪಕ್ಷಿತಜ್ಞ ಡಾ. ಎಸ್.ವಿ. ನರಸಿಂಹನ್ ಬಿಡುಗಡೆ ಗೊಳಿಸಲಿದ್ದಾರೆ. ಜೇಡರ ಹುಳುವಿನ ವಿವಿಧ ಪ್ರಭೇದಗಳು, ಪ್ರಯೋಜನಗಳು, ಆಹಾರ ಕ್ರಮ, ಬದುಕು - ಭವಿಷ್ಯ ಇತ್ಯಾದಿ ವಿಷಯಗಳ ಕುರಿತು ಕಾರ್ಯಾಗಾರದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ವರ್ಣರಂಜಿತ ಜೇಡರ ಹುಳುಗಳ ನೂರಾರು ಚಿತ್ರಗಳನ್ನು ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗುವದು.

ತಜ್ಞರುಗಳಾದ ಡಾ. ಅಭಿಜಿತ್, ಕಿರಣ್ ಬಾಗಡೆ, ಪವನ್ ರಾಮಚಂದ್ರ, ಸುಮುಖ್ ಜಾವಗಲ್, ವಿಪಿನ್ ಬಾಳಿಗ ಮುಂತಾದವರು ಜೇಡರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ. - ಯಮ್ಮಿ.