ಶ್ರೀಮಂಗಲ, ಜ. 5: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ 65ನೇ ದಿನಕ್ಕೆ ಕಾಲಿಟ್ಟಿರುವ ಶಾಂತಿಯುತ ಪ್ರತಿಭಟನೆ ಈಗಾಗಲೇ ಸರಕಾರದ ಗಮನಕ್ಕೆ ಬಂದಿದ್ದು, ತಾ. 9 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪೊನ್ನಂಪೇಟೆ ತಾಲೂಕು ರಚನೆ ಬಗ್ಗೆ ಗಮನ ಸೆಳೆಯಲು ಹಾಗೂ ಪೊನ್ನಂಪೇಟೆ ತಾಲೂಕು ರಚನೆ ಘೋಷಣೆಗೆ ಪ್ರಾಮುಖ್ಯತೆ ಹಾಗೂ ತೀವ್ರತೆ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸುವ ಉದ್ದೇಶದಿಂದ ತಾ. 8ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12ಗಂಟೆಯವರೆಗೆ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ 21 ಗ್ರಾಮ ಪಂಚಾಯಿತಿಯಲ್ಲಿ ಬಂದ್ಗೆ ಪೊನ್ನಂಪೇಟೆ ತಾಲೂಕು ಪುನರ್ ರಚನಾ ಸಮಿತಿ ಕರೆ ನೀಡಿದ್ದು, ಅಂದು ಸಹಸ್ರಾರು ಸಂಖ್ಯೆಯಲ್ಲಿ ಪೊನ್ನಂಪೇಟೆ ಚಲೋ ಕಾರ್ಯಕ್ರಮಕ್ಕೆ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಸಂಚಾಲಕ ಮಾಚಿಮಾಡ ರವೀಂದ್ರ ತಿಳಿಸಿದರು.
ಈ ಬಗ್ಗೆ ಪೊನ್ನಂಪೇಟೆ ತಾಲೂಕು ಪುನರ್ ರಚನಾ ಸಮಿತಿ ಹಾಗೂ ಹಿರಿಯ ನಾಗರಿಕಾ ವೇದಿಕೆಯ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ತಾ.8ರಂದು ಪೊನ್ನಂಪೇಟೆ ಸುತ್ತಮುತ್ತಲಿನ 21 ಗ್ರಾ.ಪಂಗಳಾದ ತಿತಿಮತಿ, ಹಾತೂರು, ಗೋಣಿಕೊಪ್ಪ, ದೇವರಪುರ, ಮಾಯಮುಡಿ, ಬಾಳೆಲೆ, ಪೊನ್ನಪ್ಪಸಂತೆ, ಕಾನೂರು, ಹುದಿಕೇರಿ, ಟಿ.ಶೆಟ್ಟಿಗೇರಿ, ಬಿ.ಶೆಟ್ಟಿಗೇರಿ, ಶ್ರೀಮಂಗಲ, ಬಿರುನಾಣಿ, ಕಿರುಗೂರು, ನಿಟ್ಟೂರು, ನಾಲ್ಕೇರಿ, ಕುಟ್ಟ, ಅರುವತ್ತೋಕ್ಲು, ಪೊನ್ನಂಪೇಟೆ, ಬಾಡಗ, ಬಲ್ಯಮಂಡೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಬಂದ್ ಕರೆಯನ್ನು ನೀಡಲಾಗಿದ್ದು, ಸ್ವಯಂ ಪ್ರೇರಿತರಾಗಿ ಪೊನ್ನಂಪೇಟೆ ತಾಲೂಕು ರಚನೆಗೆ ಬೆಂಬಲಿಸಿ ಎಲ್ಲಾ ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡುವದರ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಬಂದ್ ಆಚರಣೆ ವೇಳೆ ಯಾವದೇ ಅಹಿತಕರ ಘಟನೆಗೆ ಆಸ್ಪದವಿಲ್ಲ. ಶಾಂತಿಯುತವಾಗಿ ರಸ್ತೆ ತಡೆ ಮಾಡದೆ ವಾಹನ ಸಂಚಾರಕ್ಕೆ ಯಾವದೇ ತೊಂದರೆಯಾಗದಂತೆ, ಶಾಲಾ ಕಾಲೇಜು, ಆಸ್ಪತ್ರೆ, ಔಷಧಿ ಮಳಿಗೆ ಹಾಗೂ ಹಾಲು, ಪೇಪರ್ ವಿತರಣೆಗೆ ತೊಂದರೆಯಾಗದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುವದು. 21 ಗ್ರಾ.ಪಂ.ನಿಂದ ಈಗಾಗಲೆ ಸಾಕಷ್ಟು ಸಂಘ ಸಂಸ್ಥೆಗಳು ಸಾರ್ವಜನಿಕರನ್ನು ತಾ. 8ರಂದು ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ಸೇರಿಸಿ ಬೃಹತ್ ಮಟ್ಟದ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಲಾಗುವದು ಎಂದು ಮಾಚಿಮಾಡ ರವೀಂದ್ರ ತಿಳಿಸಿದ್ದಾರೆ.
(ಮೊದಲ ಪುಟದಿಂದ) ಪೊನ್ನಂಪೇಟೆ ತಾಲೂಕು ಪುನರ್ ರಚನಾ ಸಮಿತಿಯ ಗೌರವ ಅಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಈಗಾಗಲೇ ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ 65 ದಿನಗಳ ನಿರಂತರ ಪ್ರತಿಭಟನೆಯನ್ನು ನಡೆಸಲಾಗಿದೆ. ತಾ. 4ರಂದು ಅರಕಲಗೋಡಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪೊನ್ನಂಪೇಟೆ ತಾಲೂಕು ರಚನೆಯ ಮತ್ತು ಕಾವೇರಿ ತಾಲೂಕಿನ ಪ್ರಮುಖರು ಭೇಟಿಯಾಗಿ ತಾಲೂಕು ರಚನೆಯ ಬಗ್ಗೆ ಗಮನವನ್ನು ಸೆಳೆಯಲಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರಕವಾದ ಉತ್ತರವನ್ನು ನೀಡಿದ್ದಾರೆ. ಮುಖ್ಯಮಂತ್ರಿ ತಾ. 9ರಂದು ಜಿಲ್ಲೆಗೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ತಾಲೂಕು ರಚನೆಯ ಬಗ್ಗೆ ಘೋಷಣೆ ಮಾಡುವ ಆಶಾಭಾವ ಇದೆ ಎಂದರು.
ಈ ಸಂದರ್ಭ ಪೊನ್ನಂಪೇಟೆಯ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರು ಹಾಗೂ ಸದಸ್ಯರು ಜನಪರ ಹೋರಾಟಗಾರ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ, ಹಿರಿಯ ಸಾಹಿತಿ ಬಾಚಿರಣಿಯಂಡ ಅಪ್ಪಣ್ಣ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸುವದರ ಮೂಲಕ ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿ ದರು. ಮಣಿ ಉತ್ತಪ್ಪ ಮಾತನಾಡಿ, ಮೂಲ ನಿವಾಸಿಗಳಿಗೆ ಧಕ್ಕೆಯಾಗದಂತೆ ತಾಲೂಕು ರಚನೆಯಾಗಬೇಕು. ಈ ಮೊದಲು ಕೊಡಗಿನಲ್ಲಿರುವ ಸ್ಥಳಗಳು ಯಾವ ಯಾವ ತಾಲೂಕಿಗೆ ಸೇರಿದ್ದವೋ, ಅದರಂತೆ ತಾಲೂಕು ರಚನೆಯಾಗಬೇಕು . ಈ ಬಗ್ಗೆ ನಡೆಯುತ್ತಿರುವ ಹೋರಾಟಕ್ಕೆ ಆಡಳಿತ ಸರ್ಕಾರ ಗಮನಹರಿಸಬೇಕು. ನ್ಯಾಯಾಲಯ ಮತ್ತಿತರ ಸೌಲಭ್ಯ ವನ್ನೊಳಗೊಂಡ ಪೊನ್ನಂಪೇಟೆ ಇಲ್ಲಿಯವರೆಗೆ ಕೊಡಗಿನ ಸಂಸ್ಕøತಿ ಯನ್ನು ಕಾಪಾಡಿಕೊಂಡು ಬಂದಿದೆ. ಆದ್ದರಿಂದ ಪೊನ್ನಂಪೇಟೆ ಯನ್ನು ತಾಲೂಕು ಮಾಡಬೇಕು . ಕಾವೇರಿ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕು ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ, ಚೆಪ್ಪುಡಿರ ಪೊನ್ನಪ್ಪ, ಮತ್ರಂಡ ಅಪ್ಪಚ್ಚು, ಕೋಟ್ರಂಗಡ ಬೋಪಯ್ಯ, ಚಕ್ಕೇರ ಸೋಮಯ್ಯ, ಚಕ್ಕೇರ ಶಶಿ ಉತ್ತಪ್ಪ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಸುಮಿತಾ ಗಣೇಶ್, ಮೂಕಳೇರ ಬೀಟಾ ಲಕ್ಷ್ಮಣ, ಮೂಕಳೇರ ಕುಶಾಲಪ್ಪ, ಎರ್ಮು ಹಾಜಿ, ಚೆಪ್ಪುಡಿರ ಲಾಲಾ, ಪಾನಿಕುಟ್ಟಿರ ಮಾದಪ್ಪ, ಕಾಕಮಾಡ ಚಂದ್ರ, ಕಾಳಿಮಾಡ ನಂಜಪ್ಪ, ಕಿರಿಯಮಾಡ ಬೆಳ್ಯಪ್ಪ, ಚೆಟ್ರುಮಾಡ ಶಂಕರು, ಮಲ್ಲಮಾಡ ಪ್ರಭು ಪೂಣಚ್ಚ, ಕೂಕಂಡ ಕಾವೇರಪ್ಪ, ಚೆಟ್ರುಮಾಡ ಕಾಶಿ, ಚೆಪ್ಪುಡಿರ ಸೋಮಯ್ಯ, ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಮತ್ರಂಡ ದಿಲ್ಲು, ಪೊನ್ನಂಪೇಟೆ ಗ್ರಾ.ಪಂ. ಸದಸ್ಯ ಮೂಕಳೇರ ಲಕ್ಷ್ಮಣ ಮತ್ತಿತರರು ಭಾಗವಹಿಸಿದ್ದರು.