ಕುಶಾಲನಗರ, ಜ. 6: ಕುಶಾಲನಗರದ ಎಸ್‍ಎಂಎಸ್ ಮೀಡಿಯಾ ಫ್ರೆಂಡ್ಸ್ ಆಶ್ರಯದಲ್ಲಿ ಸ್ಥಳೀಯ ಜಿಎಂಪಿ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಕಾರ್ಯನಿರತ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಿವರಾಜ್ ನಾಯಕತ್ವದ ಆತಿಥೇಯ ಎಸ್‍ಎಂಎಸ್ ಮೀಡಿಯಾ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನಗಳಿಸಿ ರೂ. 10 ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಸುವರ್ಣ ಮಂಜು ನಾಯಕತ್ವದ ಮಡಿಕೇರಿಯ ಮೀಡಿಯಾ ಇಲೆವೆನ್ ತಂಡ ದ್ವಿತೀಯ ಸ್ಥಾನಗಳಿಸಿ ರೂ. 5 ಸಾವಿರ ಹಾಗೂ ಟ್ರೋಫಿ ತನ್ನದಾಗಿಸಿಕೊಂಡರೆ, ಪಾರ್ಥ ಚಿಣ್ಣಪ್ಪ ನೇತೃತ್ವದ ವೀರಾಜಪೇಟೆಯ ಸೌತ್ ಟೈಗರ್ಸ್ ತಂಡ ತೃತೀಯ ಸ್ಥಾನಗಳಿಸಿ ರೂ. 3 ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಎಸ್‍ಎಂಎಸ್ ಮೀಡಿಯಾ ಫ್ರೆಂಡ್ಸ್ ತಂಡ ನಾಯಕ ಶಿವರಾಜ್ ಪಂದ್ಯ ಪುರುಷೋತ್ತಮ, ಜಗದೀಶ್ ಅತ್ಯುತ್ತಮ ಗೂಟ ರಕ್ಷಕ, ಮಹೇಶ್ ಮಂದಣ್ಣ ಬೆಸ್ಟ್ ಬೌಲರ್, ಅತಿ ಹೆಚ್ಚು ಕ್ಯಾಚ್ ಪಡೆದ ವಿಜಯ್ ಹಾನಗಲ್, ವೀರಾಜಪೇಟೆಯ ಮುಸ್ತಾಫ ಬೆಸ್ಟ್ ಬ್ಯಾಟ್ಸ್‍ಮೆನ್, ಪಾರ್ಥ ಚಿಣ್ಣಪ್ಪ ಬೆಸ್ಟ್ ಕ್ಯಾಚರ್, ಮೀಡಿಯಾ ಇಲೆವೆನ್ ತಂಡದ ವಿವೇಕ್ ಸರಣಿ ಪುರುಷೋತ್ತಮ ಪ್ರಶಸ್ತಿಗಳನ್ನು ಪಡೆದುಕೊಂಡರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭ ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭೋಜಣ್ಣ ರೆಡ್ಡಿ, ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ.ರಘು, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಉದ್ಯಮಿ ಉಮಾಶಂಕರ್, ಕಾವಲುಪಡೆ ಜಿಲ್ಲಾಧ್ಯಕ್ಷ ಕೃಷ್ಣ, ಕೂಡುಮಂಗಳೂರು ಗ್ರಾ.ಪಂ. ಸದಸ್ಯೆ ಜ್ಯೋತಿ ಪ್ರಮೀಳಾ, ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ಮುರಳೀಧರ್, ಹಿರಿಯ ಸಾಹಿತಿ ಜಯಪ್ರಕಾಶ್ ಇದ್ದರು.
ಆದಂ, ಚೇತನ್, ಅರುಣ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಎಸ್‍ಎಂಎಸ್ ಮೀಡಿಯಾ ಫ್ರೆಂಡ್ಸ್‍ನ ಕೆ.ಟಿ. ಶ್ರೀನಿವಾಸ್, ಮಹಮ್ಮದ್ ಮುಸ್ತಾಫ, ಹರೀಶ್ ಗೌಡ ಇದ್ದರು.