ಮಡಿಕೇರಿ, ಜ. 5: ಬಿಜೆಪಿ ಪಕ್ಷದ ಸೈನಿಕ ಪ್ರಕೋಷ್ಠದಿಂದ ಹಮ್ಮಿಕೊಳ್ಳಲಾಗಿರುವ ಸೈನಿಕರ ಮನೆ ಮನೆಗೆ ಅಭಿಯಾನ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು. ನಗರದ ಬಾಲಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕತ್ರಯರ ಸಮ್ಮುಖದಲ್ಲಿ ಇದನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ಮಾಜಿ ಸೈನಿಕರಿಗೆ ದೇಶ ಸೇವೆಯ ಫಲವಾಗಿ ಸರಕಾರಿ ಭೂಮಿ ಕೊಡುವ ವ್ಯವಸ್ಥೆಯೊಂದಿಗೆ ಆಸ್ಪತ್ರೆ, ಕ್ಯಾಂಟೀನ್ ಸೌಲಭ್ಯ, ನಿವೇಶನ, ‘ಒನ್ ರ್ಯಾಂಕ್ ಒನ್ ಪೆನ್ಶನ್’ ಸೌಲಭ್ಯಗಳನ್ನು ಕೊಡಿಸಲು ಸೈನಿಕ ಪ್ರಕೋಷ್ಠ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇಂದು ಪ್ರತಿಯೊಬ್ಬರೂ ಸಂಘಟನೆಯೊಂದಿಗೆ ಬೆಳೆಯುವದು ಅನಿವಾರ್ಯವಾಗಿದೆ. ಅಲ್ಲದೆ ಸಂಘಟನೆಗಳಿಗೆ ರಾಜಕೀಯ ಶಕ್ತಿ ತುಂಬಿದಲ್ಲಿ ಮಾತ್ರ ಹೆಚ್ಚು ಪರಿಣಾಮಕಾರಿಯಾಗಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಮಾಜಿ ಸೈನಿಕರು, ಸೈನಿಕ ಪ್ರಕೋಷ್ಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಸೈನಿಕರು, ಮಾಜಿ ಸೈನಿಕರು ಹಾಗೂ ಅವರ ಕುಟುಂಬಸ್ಥರು ನೆಲೆಸಿದ್ದಾರೆ. ಇವರಿಗೆ ಸರಕಾರದಿಂದ ಕೊಡುವ ಸವಲತ್ತುಗಳ ಬಗ್ಗೆ ತಿಳಿ ಹೇಳುವದರ ಜೊತೆಗೆ ಜೀವನ ನಿರ್ವಹಣೆಗೆ ಬೇಕಾದ ಭದ್ರತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸೈನಿಕ ಪ್ರಕೋಷ್ಠದ ಸದಸ್ಯರು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಮಡಿಕೇರಿ ಶಾಸಕ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಶಾಸಕ ಅಪ್ಪಚ್ಚು ರಂಜನ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಭಾರತೀಶ್, ಸೈನಿಕ ಪ್ರಕೋಷ್ಠದ ಸಂಚಾಲಕ ನಿವೃತ್ತ ಮೇಜರ್ ಓಡಿಯಂಡ ಎಸ್. ಚಿಂಗಪ್ಪ ಮಾತನಾಡಿದರು. ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಮನು ಮುತ್ತಪ್ಪ ಮತ್ತು ಮಾಜಿ ಸೈನಿಕರು ಹಾಜರಿದ್ದರು.