ವೀರಾಜಪೇಟೆ, ಜ. 6 : ತಾ. 9ರಂದು ಮಡಿಕೇರಿಯಲ್ಲಿ ಸರಕಾರ ಸಾಧನ ಸಮಾವೇಶವನ್ನು ಹಮ್ಮಿಕೊಂಡಿರುವದು ತ್ವರವಲ್ಲ; ಕೊಡಗಿನ ಜನತೆಯ ಜಲ್ವಂತ ಸಮಸ್ಯೆಗಳಿಗೆ ಸ್ಪಂದಿಸದ ಈ ಸರಕಾರ ಸಾಧನಾ ಸಮಾವೇಶ ನಡೆಸುವ ಅಗತ್ಯವಿಲ್ಲವೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಜಿಲ್ಲೆಯಲ್ಲಿ 5ಮಂದಿ ಉಸ್ತುವಾರಿ ಸಚಿವರು ಬದಲಾದರೂ ಕೊಡಗು ಪ್ರಗತಿ, ಅಭಿವೃದ್ಧಿಯಲ್ಲಿ ಯಾವದೇ ಬದಲಾವಣೆಯನ್ನು ಕಾಣಲಿಲ್ಲ; ಕಾಡಾನೆ ದಾಳಿಯಿಂದ 32ಮಂದಿ ಸಾವನ್ನಪ್ಪಿದರೂ ಕಾಡಾನೆಗಳ ಕಾಟದಿಂದ ಸರಕಾರ ಅರಣ್ಯದ ಅಂಚಿನಲ್ಲಿ ಬದುಕುವವರಿಗೆ ಬೆಳೆಗಾರರಿಗೆ ಯಾವದೇ ಭದ್ರತೆ ಒದಗಿಸಿಲ್ಲ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿಯೂ ಕುಟುಂಬಕ್ಕೆ ನ್ಯಾಯ ಒದಗಿಸುವ ಬದಲು ಸಚಿವರೊಬ್ಬರನ್ನು ರಕ್ಷಣೆ ಮಾಡಲು ತನಿಖೆಯ ದಿಕ್ಕನ್ನು ಬದಲಾಯಿಸಿ ದಾರಿ ತಪ್ಪಿಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಗಣಪತಿ ಕುಟುಂಬಕ್ಕೆ ಸಾಂತ್ವನ ಹೇಳುವ ಗೋಜಿಗೂ ಹೋಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಕೋಟುಪರಂಬು ವಲಯ ಅಧ್ಯಕ್ಷ ಅಮ್ಮಂಡ ಎನ್ ವಿವೇಕ್, ಎಂ.ಪಿ.ಕಿಶನ್, ಉಪಸ್ಥಿತರಿದ್ದರು.