ಶಿರಾಜ್ ಅಹ್ಮದ್ ಮಡಿಕೇರಿ, ಜ. 5: ಪ್ರತಿಯೊಂದು ಮಗು ಕುಟುಂಬದ ಭಾಗವಾಗಿದ್ದು, ಕುಟುಂಬದ ಪ್ರೀತಿ, ಪಾಲನೆ, ಗೌರವ, ರಕ್ಷಣೆ ಹಾಗೂ ಭದ್ರತೆಗೆ ಪ್ರತಿ ಮಗುವು ಅರ್ಹವಾಗಿರುತ್ತದೆ. ಆದರೆ ಬಾಲಕಾರ್ಮಿಕ ಹಾಗೂ ಕಿಶೋರಾವಸ್ಧೆಯ ಕಾರ್ಮಿಕ ಪದ್ಧತಿಯು ಮಾನವ ಹಕ್ಕುಗಳ ಉಲ್ಲಂಘನೆಯ ನಿಕೃಷ್ಟ ಅಂಶವಾಗಿದೆ. ಈ ಪದ್ಧತಿಯಿಂದಾಗಿ ಮಕ್ಕಳನ್ನು ದೈಹಿಕವಾಗಿ, ನೈತಿಕವಾಗಿ, ಮಾನಸಿಕ ವಾಗಿ ಹಾಗೂ ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿ ಅವರುಗಳನ್ನು ಶಿಕ್ಷಣದ ಅವಕಾಶದಿಂದ ವಂಚಿತರ ನ್ನಾಗಿಸುತ್ತಿದೆ. ಮಕ್ಕಳಿಂದ ದುಡಿಸಿ ಕೊಳ್ಳುವದು ಭಾರತದ ಸಂವಿಧಾನ ದಲ್ಲಿರುವ ಹಲವಾರು ವಿಧಿಗಳಲ್ಲಿ ವ್ಯಕ್ತಪಡಿಸಿರುವ ಆಶಯಕ್ಕೆ ವಿರುದ್ಧವಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಯ ಕಾಯ್ದೆಗಳಾದ ಶಿಕ್ಷಣ ಹಕ್ಕು ಕಾಯ್ದೆ, ಬಾಲನ್ಯಾಯ ಕಾಯ್ದೆ, ಹಾಗೂ ಬಾಲ್ಯವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಹಿನ್ನೆಲೆ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವದು ಅತಿ ಅವಶ್ಯಕವಾಗಿದೆ ಕರ್ನಾಟಕ ಸರ್ಕಾರವು ಈ ಪದ್ಧತಿಯನ್ನು ಪರಿಹರಿಸಲು ಹಲವಾರು ಕ್ರಿಯಾತ್ಮಕವಾದಂತಹ ಕ್ರಮಗಳನ್ನು ಕೈಗೊಂಡಿದೆ ಅದೇ ರೀತಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಗಳನ್ನು ಸ್ಥಾಪಿಸಿದೆ. ಇದರೊಂದಿಗೆ ಸಮಾಜದ ಸಂಘಟಿತ ಪ್ರಯತ್ನ ಹಾಗೂ ಹೋರಾಟದಿಂದ ಈ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಸಾಧ್ಯ ಎಂಬದಾಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಆರ್. ಶಿರಾಜ್ ಅಹ್ಮದ್ ಹೇಳಿದರು. ವೀರಾಜಪೇಟೆ ತಾಲೂಕಿನ ಸಿದ್ಧಾಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದ 2017-18ನೇ ಸಾಲಿನ ಮಕ್ಕಳ ಗ್ರಾಮಸಭೆ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಪೋಷಣೆ ಹಾಗೂ ರಕ್ಷಣೆ, ಮಕ್ಕಳ ಸಾಗಣಿಕೆ ನಿಷೇಧ, ಬಾಲ್ಯ ವಿವಾಹದಿಂದ ಮಕ್ಕಳ ಮೇಲಾಗುವ ದುಷ್ಟಪರಿಣಾಮಗಳು, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಟಿಕ ಆಹಾರದ ಅವಶ್ಯಕತೆ, ಜೀತ ಪದ್ಧತಿ ಹಾಗೂ ಕೃಷಿ ಕಾರ್ಮಿಕ ವೃತ್ತಿಯಲ್ಲಿ ಮಕ್ಕಳನ್ನು ತೊಡಗಿಸುವವರ ವಿರುದ್ಧ ಜಾಗೃತಿ ಮೂಡಿಸುತ್ತಾ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ ಸಿ.ಸಿ. ಸಂಖ್ಯೆ 552/17 ರಡಿ ಕಿಶೋರಾವಸ್ಥೆ ಕಾರ್ಮಿಕರನ್ನು ನೇಮಿಸಿಕೊಂಡ ಮಾಲೀಕರ ವಿರುದ್ಧದ ಪ್ರಕರಣದಲ್ಲಿ ರೂ. 2,000 ದಂಡವನ್ನು ಜೆಎಂಎಘ್ಸಿ ನ್ಯಾಯಾಲಯ ಮಡಿಕೇರಿಯಲ್ಲಿ ವಿಧಿಸಲಾಗಿದೆ. ಇದೇ ರೀತಿ ಹಿರಿಯ ಕಾರ್ಮಿಕ ನಿರೀಕ್ಷಕರು, ಮಡಿಕೇರಿರವರ ಕಚೇರಿಯಲ್ಲಿ ದಾಖಲಾದ ಪರಿಹಾರ ವಸೂಲಾತಿ ಅರ್ಜಿ ಸಂಖ್ಯೆ ಸಿ.ಆರ್.01/2017-18ರ ಪ್ರಕರಣದಲ್ಲಿ ರೂ. 20,000ಗಳನ್ನು ಬಾಲಕಾರ್ಮಿಕಳನ್ನು ನೇಮಿಸಿಕೊಂಡ ಮಾಲೀಕರಿಂದ ವಸೂಲಿ ಮಾಡಿ ಜಿಲ್ಲಾಧಿಕಾರಿಗಳ ಹೆಸರಿನಲ್ಲಿರುವ ಬಾಲ್ಯವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕರ ಪುನರ್ವಸತಿ ಮತ್ತು ಕಲ್ಯಾಣ ನಿಧಿಗೆ ಜಮಾ ಮಾಡಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭ ಮಕ್ಕಳು ಸಭೆಯಲ್ಲಿ ತಮ್ಮ ಸಮಸ್ಯೆ ಮತ್ತು ಬೇಡಿಕೆಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ತಿಳಿಸಿದರು. ಸಭೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾದ ವಿಶ್ವನಾಥ್.ಕೆ.ಸಿ., ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಆರ್. ಶಿರಾಝ್ ಅಹ್ಮದ್, ಪಂಚಾಯಿತಿ ಕಾರ್ಯದರ್ಶಿ ಧರಣಿ ಹಾಗೂ ಸಿಬ್ಬಂದಿಗಳಾದ ಹರೀಶ್, ಸವಿತಾ, ವಿಂಧ್ಯಾ, ವಿವಿಧ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಮಣಿ ವಹಿಸಿದ್ದರು.