ಮಡಿಕೇರಿ, ಜ. 5: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸರ್ಕಾರವು ಸ್ಥಾಪಿಸಿರುವ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 6 ರಿಂದ 12ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಇನ್ನಿತರ ಸಾಮಗ್ರಿಗಳನ್ನು ನೀಡುವದರ ಜೊತೆಗೆ ಉತ್ತಮವಾದ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಶಾಲೆಗಳಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅಂದರೆ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರವೇಶ ಲಭ್ಯವಿದೆ.
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ ರೂ. 2.50 ಲಕ್ಷಗಳು, ಪರಿಶಿಷ್ಟ ವರ್ಗದವರಿಗೆ ರೂ. 2.50 ಲಕ್ಷಗಳು ಹಾಗೂ ಹಿಂದುಳಿದ ವರ್ಗದ ಪ್ರ ವರ್ಗ-1 ರವರಿಗೆ ರೂ. 2.50 ಲಕ್ಷಗಳು, ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ, ರವರಿಗೆ ರೂ. 1 ಲಕ್ಷಗಳ ಆದಾಯ ಮಿತಿ ಇರುತ್ತದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಶೇ. 50 ರಷ್ಟು ಸೀಟುಗಳು ವಿದ್ಯಾರ್ಥಿನಿಯರಿಗೆ ಲಭ್ಯವಿದ್ದು, ಒಮ್ಮೆ ವಸತಿ ಶಾಲೆಗಳಿಗೆ ಸೇರಿದ ವಿದ್ಯಾರ್ಥಿ 12ನೇ ತರಗತಿಯವರೆಗೆ ಉಚಿತವಾಗಿ ವಿದ್ಯಾಭ್ಯಾಸ ನೀಡಲಾಗುವದು.
ಮೊರಾರ್ಜಿ ದೇಸಾಯಿ, ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ 50 ವಿದ್ಯಾರ್ಥಿಗಳನ್ನು ಅಟಲ್ ಬಿಹಾರಿ ವಾಜಪೇಯಿ ಶಾಲೆಗಳಲ್ಲಿ 6ನೇ ತರಗತಿಗೆ 80 ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಳ್ಳಲಾಗುವದು. ಪ್ರಸ್ತುತ ಕರ್ನಾಟಕದ ಯಾವದೇ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಮತ್ತು ಈಗಾಗಲೇ ಮಾಡಿರುವ ಅರ್ಹ ವಿದ್ಯಾರ್ಥಿಗಳು ಈ ಬಗ್ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಸಂಬಂಧ ಫೆ. 18 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವದು. ಈ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಅರ್ಹತೆ ಮತ್ತು ಮೀಸಲಾತಿ ಪಟ್ಟಿ ತಯಾರಿಸಿ, ಮೆರಿಟ್ ಆಧಾರದ ಮೇಲೆ ಮೀಸಲಾತಿ ಅನ್ವಯ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಲಾಗುವದು. ಮೊದಲ ಪ್ರಾಶಸ್ತ್ಯವಾಗಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವದು. ಇತರ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಎರಡನೇ ಆದ್ಯತೆ ನೀಡಲಾಗುವದು.
ಪರೀಕ್ಷೆಗೆ ಬೇಕಾದ ಅರ್ಜಿಗಳು ಆಯಾಯ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಹಾಗೂ ತಾಲೂಕಿನ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಲಭ್ಯವಿರುತ್ತವೆ. ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಸಲ್ಲಿಸಬಹುದು.
ಪ್ರವೇಶ ಅರ್ಜಿಯನ್ನು ತಾ. 13 ರವರೆಗೆ ನೀಡಲಾಗುವದು. ಶಾಲಾ ಪರೀಕ್ಷಾ ಅರ್ಜಿ ಸ್ವೀಕೃತಿ ಕೇಂದ್ರದ ಪ್ರಾಂಶುಪಾಲರಿಗೆ ಅರ್ಜಿಗಳನ್ನು ತಾ. 13 ಸಂಜೆ 5.30 ರವರೆಗೆ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯ ಪ್ರವೇಶ ಪತ್ರ ಪಡೆಯಲು ತಾ. 25 ರಿಂದ 31 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಯಾದೇವಿ ಗಲಗಲಿ ತಿಳಿಸಿದ್ದಾರೆ.
* ‘ಜಾಣ ಜಾಣೆಯರ ಬಳಗ’ ರಚಿಸಲು
ಕನ್ನಡ ಪುಸ್ತಕ ಪ್ರಾಧಿಕಾರ ವಿದ್ಯಾರ್ಥಿ ಯುವ ಜನರನ್ನು ಸಾಹಿತ್ಯಾಭಿರುಚಿಗೆ ಆಕರ್ಷಿಸಲು ಹಾಗೂ ಸಾಹಿತ್ಯದ ಕ್ರಿಯಾಶೀಲತೆಯನ್ನು ಬೆಳೆಸಲು ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ‘ಜಾಣ ಜಾಣೆಯರ ಬಳಗ’ವನ್ನು ರಚಿಸಲು ಅರ್ಜಿ ಆಹ್ವಾನಿಸಲಾಗಿದೆ.
ಕನಿಷ್ಟ 5 ರಿಂದ 15 ಮಂದಿ ವಿದ್ಯಾರ್ಥಿಗಳನ್ನೊಳಗೊಂಡಂತೆ ಕಾರ್ಯಕಾರಿ ಸಮಿತಿಯೊಂದನ್ನು ರಚಿಸಿಕೊಂಡು, ಆಯಾಯ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಕನ್ನಡ ವಿಭಾಗಗಳ ಮುಖ್ಯಸ್ಥರ ಅನುಮೋದನೆಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಕಾಲೇಜಿನಲ್ಲಿ ಕನ್ನಡ ಸಾಹಿತ್ಯಿಕ ವಾತಾವರಣವನ್ನು ಕ್ರಿಯಾಶೀಲವಾಗಿಡುವ ನಿಟ್ಟಿನಲ್ಲಿ ವರ್ಷದಲ್ಲಿ 4 ಕಾರ್ಯಕ್ರಮ ಒಂದಕ್ಕೆ ರೂ. 5 ಸಾವಿರಗಳ ಗರಿಷ್ಠ ಮಿತಿಯೊಳಗೆ ವಾಸ್ತವಿಕ ವೆಚ್ಚವನ್ನು ಭರಿಸಲಾಗುವದು. ಇದಲ್ಲದೆ ಪ್ರಾಧಿಕಾರ ಹಮ್ಮಿಕೊಳ್ಳುವ ಎಲ್ಲಾ ಯೋಜನೆ ಹಾಗೂ ಕಾರ್ಯಕ್ರಮಗಳಲ್ಲಿ ಈ ‘ಜಾಣ ಜಾಣೆಯರ ಬಳಗ’ವನ್ನು ತೊಡಗಿಸಿಕೊಳ್ಳಲಾಗುವದು. ಅರ್ಜಿ ಸಲ್ಲಿಸಲು ತಾ. 20 ಕೊನೆಯ ದಿನವಾಗಿದೆ.
ನಿಗದಿತ ಅರ್ಜಿ ನಮೂನೆಗಾಗಿ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಚೇರಿಯನ್ನು ಅಥವಾ ಕನ್ನಡ ಪುಸ್ತಕ ಪ್ರಾಧಿಕಾರದ ವೆಬ್‍ಸೈಟ್ ತಿತಿತಿ. ಞಚಿಟಿಟಿಚಿಜಚಿಠಿusಣಚಿಞಚಿಠಿಡಿಚಿಜiಞಚಿಡಿಚಿ.ಛಿom ನಲ್ಲಿ ಅರ್ಜಿಯನ್ನು ಪಡೆಯಬಹುದಾಗಿದೆ. ಅರ್ಜಿಗಳನ್ನು ತಾ. 20 ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002, ದೂರವಾಣಿ ಸಂಖ್ಯೆ :22107704/22484516 ಅವರಿಗೆ ಕಳುಹಿಸಿಕೊಡುವಂತೆ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ ತಿಳಿಸಿದ್ದಾರೆ.
* ರಸಪ್ರಶ್ನೆ ಕಾರ್ಯಕ್ರಮ
ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದಾದ್ಯಂತ ಪ್ರೌಢಶಾಲೆಗಳಲ್ಲಿ “ನನ್ನ ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮ” ಏರ್ಪಡಿಸುವ ಕುರಿತು ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆಯಡಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರೌಢ ಶಾಲೆಗಳು ತಮ್ಮ ತಮ್ಮ ಶಾಲೆಗಳಲ್ಲಿ ನನ್ನ ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ ಹಾಗೂ ರಸಪ್ರಶ್ನೆಯ ಒಂದು ಕಾರ್ಯಕ್ರಮ ಏರ್ಪಡಿಸಬಹುದಾಗಿದೆ.
ಕಾರ್ಯಕ್ರಮವನ್ನು ನಡೆಸುವ ಸಲುವಾಗಿ ಪ್ರಾಧಿಕಾರ ರೂ. 5 ಸಾವಿರಗಳ ಗರಿಷ್ಠ ಮಿತಿಯೊಳಗೆ ವಾಸ್ತವಿಕ ವೆಚ್ಚವನ್ನು ಭರಿಸುವದು. ತಮ್ಮ ಶಾಲಾ ವಿವರಗಳೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಬಹುದಾದ ದಿನಾಂಕ, ಆಹ್ವಾನಿಸುವ ಇಬ್ಬರು ತೀರ್ಪುಗಾರರ ಹೆಸರು ಮತ್ತಿತರ ವಿವರಗಳೊಂದಿಗೆ ಆಯಾಯ ಶಾಲಾ ಮುಖ್ಯಸ್ಥರು ಸ್ವಯಂ ಅರ್ಜಿ ಸಲ್ಲಿಸಲು ತಾ. 20 ಕೊನೆಯ ದಿನವಾಗಿದೆ. ಕಾರ್ಯಕ್ರಮದ ಮುನ್ನ ಪ್ರಾಧಿಕಾರದಿಂದ ಪೂರ್ವಾನುಮೋದನೆ ಪಡೆಯುವದು ಕಡ್ಡಾಯ.
ಅರ್ಜಿಗಳನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002, ದೂರವಾಣಿ: 080-22484516/22107704 ಇವರಿಗೆ ಸಲ್ಲಿಸುವದು. ಹೆಚ್ಚಿನ ಮಾಹಿತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ವೆಬ್‍ಸೈಟ್ ತಿತಿತಿ.ಞಚಿಟಿಟಿಚಿಜಚಿಠಿusಣಚಿಞಚಿ ಠಿಡಿಚಿಜhiಞಚಿಡಿಚಿ.ಛಿomನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ತಿಳಿಸಿದ್ದಾರೆ.