ಕೂಡಿಗೆಯಲ್ಲಿರುವ ಕ್ರೈಸ್ತ ಧರ್ಮಿಯರ ‘‘ಪವಿತ್ರ ಕುಟುಂಬ ದೇವಾಲಯ’’ (ಚರ್ಚ್) ಇದರ ವಾರ್ಷಿಕೋತ್ಸವ ತಾ. 7 ರಂದು ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕೂಡಿಗೆಯ ಈ ಚರ್ಚ್ ಅನ್ನು 1966ರಲ್ಲಿ ಕಟ್ಟಲಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ನವೀಕರಿಸಿ ಪುನರ್‍ನಿರ್ಮಾಣ ಮಾಡಲಾಯಿತು. ದೇಗುಲದ ಮುಂಭಾಗದ ಗೋಪುರದಲ್ಲಿ ಸಂತ ಅಂತೋಣಿ, ಸಂತ ಜೂದ ಸೇರಿದಂತೆ ಪವಿತ್ರ ಕುಟುಂಬದ ಪ್ರತಿಮೆ ಇದ್ದು ಭಕ್ತಾದಿಗಳನ್ನು ತನ್ನತ್ತ ಸೆಳೆಯುತ್ತಿದೆ. ಜೊಸೆಫ್ ಮೇರಿ ಹಾಗೂ ಏಸುವಿನ ಕುಟುಂಬವನ್ನು ಪವಿತ್ರ ಕುಟುಂಬ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷದ ಜನವರಿ ಮೊದಲ ಭಾನುವಾರ ಈ ಚರ್ಚ್‍ನ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದಲೇ ಆಚರಿಸಲಾಗುತ್ತದೆ. ಹಟ್ಟಿಹೊಳೆ ಧರ್ಮಕೇಂದ್ರದ ಫಾ. ಚಾಲ್ರ್ಸ್ ಜೋಸೆಫ್ ಅವರು ಸಮಾರಂಭದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿಕೊಡಲಿದ್ದಾರೆ. ಆ ಬಳಿಕ ಚರ್ಚ್‍ನ ಮುಂಭಾಗದ ಹೆದ್ದಾರಿ ಯಲ್ಲಿ ದೈವ ಸ್ತೋತ್ರದೊಂದಿಗೆ ಮೋಂಬತ್ತಿ ಮೆರವಣಿಗೆ ವಾದ್ಯ ಸಹಿತ ನಡೆಯಲಿದೆ. ವಿದ್ಯುತ್ ದೀಪಗಳಿಂದ ಅಲಂಕೃತವಾದ ತೇರಿನ ಮೆರವಣಿಗೆ ಕೂಡ ಸಾಗಲಿದೆ. ಈ ವಾರ್ಷಿಕೋತ್ಸವದಲ್ಲಿ ಸುತ್ತಲ ಧರ್ಮ ಕೇಂದ್ರಗಳ ಧರ್ಮ ಗುರುಗಳು, ಭಕ್ತರೂ ಪಾಲ್ಗೊಳ್ಳಲಿದ್ದು, ಅಂದು ದೇಶ ಶಾಂತಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಗುವದು ಎಂದೂ ಪವಿತ್ರ ಕುಟುಂಬ ದೇವಾಲಯದ ಧರ್ಮಗುರು ಜಾನ್ ಡಿ. ಕುನ್ನಾ ಅವರು ತಿಳಿಸಿದ್ದಾರೆ.