ವರದಿ-ಚಂದ್ರಮೋಹನ್ಕು ಶಾಲನಗರ, ಜ. 5: ಕಾವೇರಿ ನದಿಯ ನೀರಿನ ಗುಣಮಟ್ಟ ಮೂಲಸ್ಥಾನದಲ್ಲಿಯೇ ಕುಸಿತ ಕಂಡುಬಂದಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ದೃಢಪಡಿಸಿದೆ. ಈ ಬಗ್ಗೆ ಮಂಡಳಿಯ ಮಡಿಕೇರಿ ಪ್ರಾದೇಶಿಕ ಅಧಿಕಾರಿ ಜಿ.ಆರ್.ಗಣೇಶ್ ಮಾಹಿತಿ ನೀಡಿದ್ದಾರೆ.

ಮಂಡಳಿಯ ಅಧಿಕಾರಿಗಳ ತಂಡ ಪ್ರತಿ ಬಾರಿ ನೀರಿನ ಗುಣಮಟ್ಟ ಅಳೆಯಲು ತಲಕಾವೇರಿಯಿಂದ ಕಣಿವೆ ತನಕ ಜಿಲ್ಲೆಯಲ್ಲಿ 5 ಕೇಂದ್ರಗಳನ್ನು ಗುರುತಿಸಿದ್ದು, ನೀರಿನ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ. ನಂತರ ಈ ಬಗ್ಗೆ ಸಂಶೋಧನಾ ಕೇಂದ್ರದಿಂದ ವರದಿ ಆಧಾರದ ಮೇಲೆ ನೀರಿನ ಗುಣಮಟ್ಟ ನಿರ್ಧರಿಸಲಾಗುತ್ತದೆ ಎಂದಿದ್ದಾರೆ.

ಪ್ರಸಕ್ತ ಕೊಡಗಿನ ಭಾಗಮಂಡಲ, ನಾಪೋಕ್ಲು, ಕುಶಾಲನಗರ, ಕಣಿವೆ ಮತ್ತು ಹಾರಂಗಿ ಜಲಾನಯನ ಪ್ರದೇಶದಲ್ಲಿ ನೀರಿನ ಗುಣಮಟ್ಟ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ನದಿ ನೀರು ಭಾಗಮಂಡಲ ವ್ಯಾಪ್ತಿಯಲ್ಲಿ ಬಿ ದರ್ಜೆಗೆ ಇಳಿದಿದೆ. ಕುಶಾಲನಗರ ಕೊಪ್ಪ ಸೇತುವೆ ಬಳಿ ಪರಿಶೀಲನೆ ಸಂದರ್ಭ ಸಿ ದರ್ಜೆ ಕಂಡುಬಂದಿದೆ. ಕೂಡಿಗೆ ಬಳಿಯಲ್ಲಿ ಮತ್ತೆ ಬಿ ದರ್ಜೆ ಗುಣಮಟ್ಟ ಕಂಡುಬಂದಿದೆ ಎಂದಿದ್ದಾರೆ. ನಿಯಮ ಪ್ರಕಾರ ನೀರಿನ ಗುಣಮಟ್ಟ ಎ ದರ್ಜೆಯಲ್ಲಿದ್ದರೆ ಕುಡಿಯಲು ನೇರವಾಗಿ ಬಳಕೆ ಮಾಡಬಹುದು, ಬಿ ಯಲ್ಲಿದ್ದರೆ ಶುದ್ಧೀಕರಿಸಿ ಬಳಸುವದು, ಗುಣಮಟ್ಟ ಸಿ ದರ್ಜೆಗೆ ಇಳಿದಲ್ಲಿ ಮನುಷ್ಯರು ಬಳಕೆ ಮಾಡಲು ಅಸಾಧ್ಯ, ಡಿ ದರ್ಜೆ ನೀರು ಕೇವಲ ಕಾರ್ಖಾನೆಗೆ ಮಾತ್ರ ಬಳಸಬಹುದು.

ನೇರವಾಗಿ ನದಿಗೆ ಕಲುಷಿತ ತ್ಯಾಜ್ಯಗಳು ಸೇರ್ಪಡೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾಗೂ ವಿವಿಧ ಕಾರಣಗಳಿಂದ ನೀರಿನ ಗುಣಮಟ್ಟ ಕ್ಷೀಣಗೊಳ್ಳುತ್ತಿದೆ ಎಂದ ಅವರು ಇದರಿಂದ ಕುಡಿಯಲು ನೇರವಾಗಿ ಬಳಕೆ ಮಾಡಲು ಕೂಡ ಅಸಾಧ್ಯ ಎಂದು ಮಾಹಿತಿ ನೀಡಿದ್ದಾರೆ. ನದಿಯಲ್ಲಿ ಹರಿಯುವ ಸಂದರ್ಭ ನೀರು ತನ್ನಷ್ಟಕ್ಕೆ ಶುದ್ಧೀಕರಣಗೊಳ್ಳುವ ಶಕ್ತಿ ಹೊಂದಿರುವ ಹಿನ್ನಲೆಯಲ್ಲಿ ಅಲ್ಲಲ್ಲಿ ನೀರಿನ ಗುಣಮಟ್ಟ ವೃದ್ಧಿಗೊಳ್ಳುತ್ತದೆ. ನಾಗರೀಕರು ನೇರವಾಗಿ ಕಲುಷಿತ ನೀರನ್ನು ನದಿಗೆ ಸೇರದಂತೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿರುವ ಗಣೇಶನ್, ನದಿ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಂಡಳಿಯಿಂದ ಕೈಗೆತ್ತಿಕೊಳ್ಳಲಾ ಗುವದು. ಸ್ವಚ್ಛ ಪರಿಸರ ಹಾಗೂ ಸ್ವಚ್ಛ ಕಾವೇರಿ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕೋರಿದ್ದಾರೆ.

ನೀರು ಕಲುಷಿತ : ಪ್ರವಾಸಿಗರ ಒತ್ತಡದ ನಡುವೆ ಜೀವನದಿ ಕಾವೇರಿ ಸಂಪೂರ್ಣ

(ಮೊದಲ ಪುಟದಿಂದ) ಕಲುಷಿತಗೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ. ರಾಜ್ಯದಾದ್ಯಂತ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಗೆ ಪ್ರವಾಸ ಬರುವ ಶಾಲಾ ವಿದ್ಯಾರ್ಥಿಗಳು, ಪ್ರವಾಸಿಗರು ಕುಶಾಲನಗರ ಸಮೀಪ ಕೊಪ್ಪ ಗಡಿಭಾಗದಲ್ಲಿ ತಮ್ಮ ದೈನಂದಿನ ಚಟುವಟಿಕೆಗಳಿಗೆ ಕಾವೇರಿ ನದಿಯನ್ನು ಅವಲಂಬಿಸುವದರೊಂದಿಗೆ ನದಿ ಬಹುತೇಕ ಪ್ಲಾಸ್ಟಿಕ್‍ಮಯವಾಗುತ್ತಿದ್ದು, ನೀರಿನ ಗುಣಮಟ್ಟ ಕ್ಷೀಣಿಸುತ್ತಿದೆ.

ಇದರೊಂದಿಗೆ ಬಸ್‍ನಲ್ಲಿ ಆಗಮಿಸುವ ಪ್ರವಾಸಿಗರು ನದಿ ತಟದಲ್ಲಿ ಅಡುಗೆ ಮಾಡುವದು, ಶೌಚ ಇತ್ಯಾದಿಯನ್ನು ನದಿಯಲ್ಲಿ ಮಾಡುವ ಹಿನ್ನೆಲೆಯಲ್ಲಿ ಇಡೀ ಪರಿಸರ ಅನೈರ್ಮಲ್ಯದಿಂದ ಕೂಡುತ್ತಿದೆ. ಬೆಳಿಗ್ಗೆಯಿಂದ ಸಂಜೆ ತನಕ ಇಲ್ಲಿನ ಕಾವೇರಿ ಪ್ರತಿಮೆ ಬಳಿ ಹತ್ತಾರು ಬಸ್‍ಗಳು ನಿಲುಗಡೆಗೊಳ್ಳುತ್ತಿದ್ದು ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪ್ರವಾಸಿಗರು ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯುವದು ಸಾಮಾನ್ಯ ದೃಶ್ಯವಾಗಿದೆ.

ಈ ಬಗ್ಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರು ಹಲವು ಬಾರಿ ಎಚ್ಚರಿಕೆ ನೀಡಿದರೂ ಸಮಸ್ಯೆಗೆ ಪರಿಹಾರ ದೊರಕದ ಹಿನ್ನಲೆಯಲ್ಲಿ ಬೈಲುಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮಕೈಗೊಳ್ಳಲು ಆಗ್ರಹಿಸಿದ್ದಾರೆ. ಸ್ಥಳೀಯ ಪಂಚಾಯ್ತಿ ಮೂಲಕ ಫಲಕಗಳನ್ನು ಅಳವಡಿಸಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್.ಚಂದ್ರಮೋಹನ್ ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಇದೇ ಪರಿಸ್ಥಿತಿ ಮರುಕಳಿಸಿದ ಸಂದರ್ಭ ಪ್ರವಾಸಿಗರಿಂದಲೇ ಸ್ಥಳದ ಸ್ವಚ್ಛತೆಗೆ ಸ್ಥಳೀಯರು ಆಗ್ರಹಿಸಿದ ಘಟನೆಯೂ ನಡೆಯಿತು.