ಮಡಿಕೇರಿ, ಜ. 5: ಡಿವೈಎಸ್‍ಪಿ ಗಣಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಸಿಬಿಐ ತನಿಖೆ ನಡೆಯುತ್ತಿದೆ. ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಸಿಬಿಐಗೆ ನಿದೇರ್ಶನ ನೀಡಿತ್ತಾದರೂ ಇದೀಗ ತನಿಖೆಗೆ ಹೆಚ್ಚಿನ ಸಮಯಾವಕಾಶಬೇಕೆಂದು ಸಿಬಿಐ ಮನವಿಯನ್ನು ಪುರಷ್ಕರಿಸಿ ಸರ್ವೋಚ್ಚ ನ್ಯಾಯಾಲಯ ನಿನ್ನೆಯಷ್ಟೆ ಆರು ತಿಂಗಳ ಸಮಯಾವಕಾಶ ನೀಡಿದೆ.
ಈ ನಡುವೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಇಂದು ಮತ್ತೆ ಮಡಿಕೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಕೊಡಗಿಗೆ ಆಗಮಿಸಿದ್ದ ಸಿಬಿಐ ವಿಶೇಷ ತಂಡ ಹಲವು ಭಾಗಗಳಲ್ಲಿ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿ ಮರಳಿತ್ತು. ಇದೀಗ ಮತ್ತೆ ಮಡಿಕೇರಿಗೆ ಸಿಬಿಐ ಆಗಮನ ಮತ್ತಷ್ಟು ಕುತೂಹಲ ಸೃಷ್ಟಿಸಿದೆ.
ಸಿಬಿಐ ಮುಖ್ಯಸ್ಥ ತಲೈಮಣಿ ಹಾಗೂ ಇತರ ಅಧಿಕಾರಿಗಳು ಇಂದು ಮಡಿಕೇರಿಯಲ್ಲಿ ಮೃತ ಗಣಪತಿ ಅವರ ಸಹೋದರ ಎಂ.ಕೆ. ಮಾಚಯ್ಯ ಅವರೊಂದಿಗೆ ಚರ್ಚೆ ನಡೆಸಿ ಮತ್ತಷ್ಟು ಮಾಹಿತಿ ಕಲೆ ಹಾಕಿರುವದು ತಿಳಿದು ಬಂದಿದೆ.
‘ಶಕ್ತಿ’ಗೆ ತಿಳಿದು ಬಂದ ಕೆಲವು ಮೂಲಗಳ ಪ್ರಕಾರ ಸಿಬಿಐ ಅಧಿಕಾರಿಗಳು ಜಿಲ್ಲಾ ನ್ಯಾಯಾಲಯದ ಮೂಲಕವೇ ಹಲವು ದಾಖಲೆಗಳನ್ನು ಹೊಂದಿಕೊಳ್ಳುವ ಯತ್ನದಲ್ಲಿರುವ ದಾಗಿ ಹೇಳಲಾಗಿದೆ. ಗಣಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿ ದಂತೆ ಈ ಹಿಂದೆ ಸಿಓಡಿ ತನಿಖೆ ನಡೆದಿರುವದು ಮಾತ್ರವಲ್ಲದೆ ಬಳಿಕ ಕೇಶವ ನಾರಾಯಣ ನೇತೃತ್ವದ ಆಯೋಗದ ಮೂಲಕ ನ್ಯಾಯಾಂಗ ವಿಚಾರಣೆಯೂ ನಡೆದಿದೆ.
ಪೊಲೀಸ್ ಹಾಗೂ ಸಿಓಡಿ ತನಿಖೆಯ ವರದಿಯನ್ನು ಈ ಆಯೋಗದ ಅಧ್ಯಕ್ಷರು ಮಡಿಕೇರಿ ನ್ಯಾಯಾಲಯದ ಮೂಲಕ ಪಡೆದುಕೊಂಡಿದ್ದು ಇದು ಇನ್ನೂ ಅಧಿಕೃತವಾಗಿ ಸಿಬಿಐ ತಂಡಕ್ಕೆ ಹಸ್ತಾಂತರವಾಗಿಲ್ಲ ಎನ್ನಲಾಗಿದೆ.
ಆಯೋಗದ ಬಳಿಯಿರುವ ಹಿಂದಿನ ತನಿಖಾ ವರದಿಯನ್ನು ನೇರವಾಗಿ ಪಡೆದುಕೊಳ್ಳಲು ಸಿದ್ಧವಿಲ್ಲದ ಸಿಬಿಐ ಇದನ್ನು ನ್ಯಾಯಾಲಯದ ಮೂಲಕವೇ ಅಧಿಕೃತವಾಗಿ ಪಡೆದು ಮುಂದಿನ ತನಿಖೆ ನಡೆಸುವ ಪ್ರಯತ್ನದಲ್ಲಿದೆ ಎಂದು ಹೇಳಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ಅಧಿಕಾರಿಗಳು ಮಡಿಕೇರಿಗೆ ಆಗಮಿಸಿದ್ದಾಗಿ ಹೇಳಲಾಗುತ್ತಿದೆ.