*ಗೋಣಿಕೊಪ್ಪಲು, ಜ. 5: ಪೋಷಕರ ಆಸೆ, ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರದೆ ಅವರ ಭಾವನೆಗಳಿಗೆ ಒತ್ತು ನೀಡಿ ಪ್ರತಿಭೆಗಳನ್ನು ಗುರುತಿಸಿ ಎಂದು ಸಿ.ಐ.ಟಿ. ಪಿ.ಯು. ಕಾಲೇಜು ಪ್ರಾಂಶುಪಾಲೆ ಸಣ್ಣುವಂಡ ರೋಹಿಣಿ ತಿಮ್ಮಯ್ಯ ಪೋಷಕರಿಗೆ ಕಿವಿಮಾತು ಹೇಳಿದರು.
ಹುದಿಕೇರಿ ಲಿಟಲ್ ಫ್ಲವರ್ ಆಂಗ್ಲ ಮಾಧ್ಯಮ ಶಾಲೆಯ 19ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸಾಧನೆಗಳಿಗೆ ಅವಕಾಶ ಕಲ್ಪಿಸಬೇಕು. ಮಕ್ಕಳ ಬೆಳವಣಿಗೆಗೆ ಪೋಷಕರ ಜವಾಬ್ದಾರಿ ಮಹತ್ವವಾದದ್ದು ಎಂದು ಹೇಳಿದರು.
ಸಿನಿಮಾ ನಿರ್ದೇಶಕ ಚಮಟ್ಟಿರ ಪ್ರವೀಣ್ ಉತ್ತಪ್ಪ ಮಾತನಾಡಿ, ವಿದ್ಯಾಸಂಸ್ಥೆಗಳು ಇಂದು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳು ಉತ್ತಮ ತರಬೇತು ಇಲ್ಲದೆ ಮಾದಕ ವ್ಯಸನಿಗಳಾಗುತ್ತಾ ಗುರಿ ಇಲ್ಲದೆ ಅಲೆಯುತ್ತಿದ್ದಾರೆ. ಜೀವನದಲ್ಲಿ ಮಾನವೀಯತೆಯನ್ನು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಶಿಕ್ಷಣದೊಂದಿಗೆ ದೈಹಿಕ ಬಲ ಮತ್ತು ಮಾನಸಿಕ ದೃಢತೆಗಾಗಿ ಕ್ರೀಡೆ ಹಾಗೂ ಸಾಹಿತ್ಯಪರ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡು ತಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಮುಂದಾಗುವಂತೆ ಸಲಹೆ ನೀಡಿದರು.
ಪೊನ್ನಂಪೇಟೆ ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕ ಕೆ.ಪಿ. ಮಂದಣ್ಣ ಮಾತನಾಡಿ, ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆಗೆ ಶಿಕ್ಷಣ ಮಹತ್ವವಾದದ್ದು, ಪೋಷಕರು ಮಕ್ಕಳಿಗಾಗಿ ಸಮಯ ಮೀಸಲಿಟ್ಟು ಅವರೊಂದಿಗೆ ಸ್ನೇಹಿತರಂತೆ ವರ್ತಿಸಬೇಕು. ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವದು ಪೋಷಕರ ಜವಾಬ್ದಾರಿ ಎಂದು ಹೇಳಿದರು.
ಈ ಸಂದರ್ಭ ಶಾಲೆಯ ಕಾರ್ಯದರ್ಶಿ ಜ್ಯೋತಿ ಸತೀಶ್ ಉಪಸ್ಥಿತರಿದ್ದರು. ವಾರ್ಷಿಕ ವರದಿಯನ್ನು ಶೋಭಾ ಗಣಪತಿ ವಾಚಿಸಿದರು. ಮೋನಿಕಾ ಮತ್ತು ಸಂಗಡಿಗರಿಂದ ಪ್ರಾರ್ಥನೆ ಹಾಗೂ ಶಾಲಾ ವಿದ್ಯಾರ್ಥಿಗಳು ಬೊಳಕಾಟ್, ಕೋಲಾಟ್, ಉಮ್ಮತ್ತಾಟ್, ಕರಾಟೆ ಸೇರಿದಂತೆ ವಿವಿಧ ಜಾನಪದ, ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ಸಾಂಸ್ಕøತಿಕ ಮೆರುಗನ್ನು ತಂದರು.