ಮಡಿಕೇರಿ, ಜ. 5: ಪರೀಕ್ಷೆಯ ಬಗ್ಗೆ ಅನಗತ್ಯ ಆತಂಕ, ಭಯ, ತಲ್ಲಣ ತಾಳದೇ ಪರೀಕ್ಷೆಗಳನ್ನು ಹಬ್ಬದಂತೆ ಸಂಭ್ರಮಿಸಿ ಎಂದು ಹೆಸರಾಂತ ವ್ಯಕ್ತಿತ್ವ ವಿಕಸನ ತರಬೇತುದಾರ ಮೈಸೂರಿನ ಚೇತನ್ ರಾಮ್ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಬಿಇಓ ಕಚೇರಿಗಳ ಸಂಯುಕ್ತಾಶ್ರಯದಲ್ಲಿ ಸಂತ ಜೋಸೆಫರ ಕಾನ್ವೆಂಟ್ ಸಭಾಂಗಣದಲ್ಲಿ ಮಡಿಕೇರಿ ತಾಲೂಕಿನ ಎಸ್ಎಸ್ಎಲ್ಸಿ 1 ಸಾವಿರ ವಿದ್ಯಾರ್ಥಿ ಗಳಿಗೆ ಆಯೋಜಿಸಲಾಗಿದ್ದ ಶೈಕ್ಷಣಿಕ ಮಾರ್ಗದರ್ಶಿ ಕಾರ್ಯಾಗಾರದಲ್ಲಿ ಮಾತನಾಡಿದ ಚೇತನ್ ರಾಮ್, ಪಠ್ಯ ಪುಸ್ತಕ ಎಂಬದು ಪ್ರತಿಯೋರ್ವ ವಿದ್ಯಾರ್ಥಿಗೂ ತಾಯಿಯಿದ್ದಂತೆ. ತಾಯಿ ನೀಡುವ ಮಾರ್ಗ ದರ್ಶನವನ್ನೇ ನೀಡುವ ಪಠ್ಯ ಪುಸ್ತಕದ ಓದೇ ಪ್ರತಿಯೋರ್ವ ವಿದ್ಯಾರ್ಥಿಗೂ ಮುಖ್ಯವಾಗಬೇಕು. ಪಠ್ಯಪುಸ್ತಕಗಳಿಗಿಂತ ಗೈಡ್, ಇಂಟರ್ ನೆಟ್ ಮತ್ತಿತರ ಪರ್ಯಾಯ ಮಾಧ್ಯಮಗಳನ್ನು ಬಳಸಿಕೊಂಡರೂ ಅಮ್ಮನಂಥ ಪಠ್ಯ ಪುಸ್ತಕಕ್ಕೆ ಇವು ಯಾವವೂ ಸಮಾನವಲ್ಲ ಎಂದು ಪ್ರತಿಪಾದಿಸಿದರು.
ಪರೀಕ್ಷೆಯಲ್ಲಿ ನಿಗಧಿಪಡಿಸಿದ ಸಮಯಕ್ಕೆ ಅನುಗುಣವಾಗಿ ಉತ್ತರ ಬರೆಯಬೇಕು, ಅಂಕ ಮತ್ತು ಮೀಸಲಿರಿಸಿದ ಜಾಗ ಎಷ್ಟಿದೆ ಎಂಬದನ್ನು ಗಮನಿಸಿ ಅದಕ್ಕೆ ತಕ್ಕಷ್ಟೇ ವಾಕ್ಯಗಳನ್ನು ಬರೆಯಬೇಕು ಎಂದು ಹೇಳಿದ ಚೇತನ್ ರಾಮ್, ಸಾಮಾನ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತರ ಬರೆಯಲು ಸಮಯದ ಸಮಸ್ಯೆ ಇತ್ತು ಎಂದು ಹೇಳುವದೇ ಸುಳ್ಳು. ಸರಿಯಾಗಿ ವಿಷಯ ತಿಳಿದುಕೊಂಡಿದ್ದರೆ ನಿಗಧಿತ ಸಮಯದಲ್ಲಿಯೇ ಅತ್ಯುತ್ತಮ ಉತ್ತರಗಳನ್ನು ಬರೆಯಲು ಸಾಧ್ಯವಿದೆ ಎಂದು ಹೇಳಿದರು.
ಪರೀಕ್ಷೆ ಎಂದರೆ ಯುದ್ಧವಲ್ಲ, ಯಾರ ವಿರುದ್ಧವೂ ವಿದ್ಯಾರ್ಥಿ ಹೋರಾಟ ಕೈಗೊಳ್ಳುತ್ತಿಲ್ಲ. ಹೀಗಾಗಿ ಭಯ, ಹೋರಾಟ ಮನೋಭಾವ ಬಿಟ್ಟು ಹಬ್ಬಕ್ಕೆ ತೆರಳುವ ಸಂಭ್ರಮ ದೊಂದಿಗೆ ಪರೀಕ್ಷೆಗೆ ತೆರಳುವ ಮಾನಸಿಕ ಸಿದ್ಧತೆಯಲ್ಲಿ ವಿದ್ಯಾರ್ಥಿ ತೊಡಗಿಸಿಕೊಳ್ಳುವಂತೆಯೂ ಅವರು ಸಲಹೆ ನೀಡಿದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಏಕಾಂಗಿಯಾಗಿ ತಯಾರಿ ಕೈಗೊಳ್ಳುವ ಬದಲಿಗೆ ಗುರುಗಳು ಅಥವಾ ಸಹಪಾಠಿಗಳೊಂದಿಗೆ ಸಿದ್ಧತೆ ಕೈಗೊಳ್ಳಿ ಎಂದು ಕಿವಿಮಾತು ಹೇಳಿದ ಚೇತನ್ ರಾಮ್, ಪರೀಕ್ಷೆ ಹತ್ತಿರವಿರುವ 3 ತಿಂಗಳ ಕಾಲ ಆರೋಗ್ಯ ಸಂರಕ್ಷಣೆ ಮುಖ್ಯವಾಗಿದ್ದು ಮನೆಯಿಂದ ಹೊರತುಪಡಿಸಿ ಹೊರಗಿನ ಆಹಾರ, ನೀರು ಸೇವಿಸದಿರಿ. ಎಣ್ಣೆ ಪದಾರ್ಥಗಳನ್ನು ಬಿಟ್ಟು ಬಿಡಿ ಎಂದು ಸಲಹೆ ನೀಡಿದರು.
ಪರೀಕ್ಷೆಗೆ ಓದಿಬರೆದು, ಬರೆದು ಓದುವ ಕ್ರಮವನ್ನು ಅಳವಡಿಸಿ ಕೊಂಡರೆ ಜ್ಞಾಪನಾ ಶಕ್ತಿ ಹೆಚ್ಚುತ್ತದೆ. ಇದರಿಂದಾಗಿ ಪರೀಕ್ಷಾ ದಿನ ಸಲೀಸಾಗಿ ಉತ್ತರ ಬರೆಯಲು ಸಾಧ್ಯವಾಗುತ್ತದೆ ಎಂದರು.
ಖ್ಯಾತ ಮನೋಶಾಸ್ತ್ರಜ್ಞ ಡಾ. ರೂಪೇಶ್ ಗೋಪಾಲ್ ಮಾತನಾಡಿ, ಪರೀಕ್ಷೆಯ ಸಂದರ್ಭದ ಆತಂಕ ಸಹಜವಾಗಿಯೇ ಮಾನಸಿಕ ವಾಗಿಯೂ, ದೈಹಿಕವಾಗಿಯೂ ವಿದ್ಯಾರ್ಥಿ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಇಂಥ ಒತ್ತಡ ತಡೆಯುವ ಶಕ್ತಿಯಿಲ್ಲದೇ, ಆತ್ಯಹತ್ಯೆಯಂಥ ವಿಚಾರಗಳತ್ತ ಗಮನ ಹರಿಸುತ್ತಾರೆ. ಆದರೆ ಯಾವದೇ ಕಾರಣಕ್ಕೂ ಪರೀಕ್ಷೆ ಬಗ್ಗೆ ಆತಂಕಗೊಳ್ಳದೇ ಮಾನಸಿಕ ಪೂರ್ವ ಸಿದ್ಧತೆಯೊಂದಿಗೆ ಪರೀಕ್ಷೆಯನ್ನು ನಿಭಾಯಿಸಿ ಎಂದು ಹೇಳಿದರು. ಆಕಸ್ಮಾತ್ ಪರೀಕ್ಷೆಯಲ್ಲಿ ನಪಾಸ್ ಆದರೂ ಪರವಾಗಿಲ್ಲ. ಆದರೆ, ಸಾವಿಗೆ ಶರಣಾಗಿ ಜೀವನದ ಪರೀಕ್ಷೆಯಲ್ಲಿ ನಪಾಸಾಗದಿರಿ ಎಂದೂ ಅವರು ಕಿವಿಮಾತು ಹೇಳಿದರು.
ನೇತ್ರ ತಜ್ಞ ಡಾ. ಸಿ.ಆರ್. ಪ್ರಶಾಂತ್ ನೇತ್ರ ಸಂರಕ್ಷಣೆ ಕುರಿತಂತೆ ಮಾಹಿತಿ ನೀಡಿ, ದೃಷ್ಟಿಯ ನೆರವಿನಿಂದಲೇ ಶೇ. 80 ರಷ್ಟು ಕಲಿಕೆ ಸಾಧ್ಯವಾಗುತ್ತದೆ. ನಾಲ್ವರಲ್ಲಿ ಓರ್ವ ವಿದ್ಯಾರ್ಥಿಗೆ ದೃಷ್ಟಿ ಸಮಸ್ಯೆಯಿರುತ್ತದೆ. ದೃಷ್ಟಿ ದೋಷ ಕೂಡ ವಿದ್ಯಾರ್ಥಿಯ ಕಲಿಕೆಗೆ ಅಡ್ಡಿಯಾದೀತು,. ಹೀಗಾಗಿ ಪರೀಕ್ಷಾ ಸಂದರ್ಭ ಟಿವಿ, ಮೊಬೈಲ್ ವೀಕ್ಷಣೆ ಮೂಲಕ ಕಣ್ಣಿಗೆ ಹೆಚ್ಚಿನ ಒತ್ತಡ ನೀಡದಿರಿ ಎಂದು ಮಾರ್ಗದರ್ಶನ ನೀಡಿದರು. ನೈಸರ್ಗಿಕವಾಗಿ ಲಭ್ಯವಿರುವ ಹಣ್ಣು, ಹಂಪಲುಗಳ ಸೇವನೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಂದರ್ಭ ಹೆಚ್ಚಿನ ನೆರವು ನೀಡಬಲ್ಲದು ಎಂದು ಡಾ. ಪ್ರಶಾಂತ್ ಹೇಳಿದರು.
ಹಿರಿಯ ಪತ್ರಕರ್ತ, ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಪ್ರತಿ ವಿದ್ಯಾರ್ಥಿಗೂ ಜೀವನದ ಮುಖ್ಯ ಗುರಿಯೇ ಆದ್ಯತೆಯಾಗಿರಲಿ, ಏಕಾಗ್ರತೆಯಿದ್ದಲ್ಲಿ ನಿಗಧಿತ ಗುರಿ ತಲುಪಲು ಸಾಧ್ಯ ಎಂದರಲ್ಲದೇ ನಮ್ಮ ಚಿಂತನೆಗಳೂ ಹೊಸ ವರ್ಷದಲ್ಲಿ ಬದಲಾಗ ಬೇಕಾಗಿದೆ. ಸಹಕಾರಿ ಮನೋಭಾವ ರೂಡಿಸಿಕೊಳ್ಳಬೇಕಾಗಿದೆ ಎಂದರು.
ಸಮಾರೋಪ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ, ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಕಾರ್ಯದರ್ಶಿ ಪಿ.ಎಂ. ಸಂದೀಪ್, ಜೋನಲ್ ಲೆಫ್ಟಿನೆಂಟ್ ವಿನೋದ್ ಕುಶಾಲಪ್ಪ, ಯೋಜನಾ ನಿರ್ದೇಶಕ ಎಂ. ಧನಂಜಯ್ ಹಾಜರಿದ್ದರು.