ವೀರಾಜಪೇಟೆ, ಜ. 6: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲೆಂದು ಸರಕಾರ ಬಿಸಿ ಊಟ ನೀಡುತ್ತಿದ್ದು, ವಿದ್ಯಾರ್ಥಿಗಳು ತಪ್ಪದೆ ಶಾಲೆಗೆ ಬಂದು ಪಾಠದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಭಾಗವಹಿಸುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಹೇಳಿದರು.
ವೀರಾಜಪೇಟೆ ಸಮೀಪದ ಅಮ್ಮತ್ತಿ-ಕಾರ್ಮಾಡುವಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರೂ. 4 ಲಕ್ಷದ 63 ಸಾವಿರ ವೆಚ್ಚದ ಅಕ್ಷರ ದಾಸೋಹ ಅಡುಗೆ ಕೋಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಶಿ ಸುಬ್ರಮಣಿ, ವೀರಾಜಪೇಟೆ ತಾಲೂಕಿನ 21 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನೂತನ ಅಡುಗೆ ಕೋಣೆ ಕಾಮಗಾರಿಗೆ ಅನುದಾನ ಬಂದಿದ್ದು, ಹೆಚ್ಚು ಶಾಲೆಗಳಲ್ಲಿ ಕಾಮಗಾರಿ ಪಾರಂಭಿಸಲಾಗಿದೆ ಎಂದರು.
ಭೂಮಿಪೂಜೆ ಸಂದರ್ಭ ಅಮ್ಮತ್ತಿ-ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋನ ಭೀಮಯ್ಯ, ಸದಸ್ಯ ಮುಕ್ಕಾಟಿರ ಸಂತೋಷ್, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಉಷಾ, ಮುಖ್ಯೋಪಾಧ್ಯಾಯಿನಿ ಲೀಲಾವತಿ, ಶಿಕ್ಷಕ ನವೀನ್ ಕುಮಾರ್, ಇತರರು ಉಪಸ್ಥಿತರಿದ್ದರು.