ಗೋಣಿಕೊಪ್ಪಲು, ಜ. 6: ಗೋಣಿಕೊಪ್ಪ ಮಾರ್ಗ ಖಾಸಗಿ, ರಾಜ್ಯ ರಸ್ತೆ ಸಾರಿಗೆ, ಅಂತರರಾಜ್ಯ ರಸ್ತೆ ಸಾರಿಗೆಗಳ ಒತ್ತಡ ದಿನನಿತ್ಯ ಅಧಿಕವಾಗುತ್ತಿದೆ. ಆದರೆ, ಬಸ್ ನಿಲ್ದಾಣ ಹಾಗೆಯೇ ಇದೆ. ಇಲ್ಲಿ ರಾಜ್ಯ ರಸ್ತೆ ಸಾರಿಗೆ ಹಾಗೂ ಖಾಸಗಿ ಬಸ್ ಚಾಲಕರ ನಡುವೆ ದಿನ ನಿತ್ಯ ಜಟಾಪಟಿ ಸಾಮಾನ್ಯ. ನಿಲ್ದಾಣದ ಕೊರತೆಯಿಂದಾಗಿ ಸರ್ಕಾರಿ ಬಸ್ಗಳು ಕಿಲೋ ಮೀಟರ್ ದೂರ ತೆರಳಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಬಸ್ ನಿಲ್ದಾಣದಲ್ಲಿ ಹೆಚ್ಚುಹೊತ್ತು ಯಾವದೇ ಬಸ್ಗಳು ನಿಲ್ಲುವಂತಿಲ್ಲ. 10 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಬಸ್ಗಳು ನಿಲ್ದಾಣವನ್ನು ಆಶ್ರಯಿಸಬಹುದು ಎಂದು ಈ ಹಿಂದೆ ಟ್ರಾಫಿಕ್ ಸಮಸ್ಯೆ ಕುರಿತಾದ ಪೆÇಲೀಸ್ ಸಂಪರ್ಕ ಸಭೆಯಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಇದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಇದರಿಂದಾಗಿ ವೀರಾಜಪೇಟೆ-ಮಡಿಕೇರಿಯತ್ತ ತೆರಳುವ ಬಸ್ಗಳು ಮುಖ್ಯರಸ್ತೆಯ ಬದಿಯಲ್ಲಿಯೇ ನಿಲ್ಲಬೇಕಾಗಿದೆ. ಮೈಸೂರಿನತ್ತ ತೆರಳುವ ಬಸ್ಗಳು ಇಲ್ಲಿನ ರಿಫಾರ್ಮರ್ಸ್ ಕ್ಲಬ್ ಮುಂಭಾಗವೇ ನಿಲ್ಲುವಂತಾಗಿರುವದರಿಂದಾಗಿ ನಿಲ್ದಾಣದ ಮೇಲೆ ಅಧಿಕ ಒತ್ತಡ ಉಂಟಾಗಿ ಇತರ ಲಘುವಾಹನಗಳು, ಸರಕು ಸಾಗಾಟ ವಾಹನಗಳು, ಪಾದಚಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ನಿರಂತರ ಬವಣೆ ಅನುಭವಿಸಬೇಕಾಗಿ ಬಂದಿದೆ. ಈ ನಡುವೆ ಗೋಣಿಕೊಪ್ಪಲು ಮುಖ್ಯರಸ್ತೆ ಕಾಮಗಾರಿ ರೂ. 2 ಕೋಟಿ ವೆಚ್ಚದಲ್ಲಿ ಶೀಘ್ರ ಕಾರ್ಯಾರಂಭವಾಗಲಿದೆ. ಈ ನಿಟ್ಟಿನಲ್ಲಿ ಶಕ್ತಿ ಇಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.
ಗೋಣಿಕೊಪ್ಪಲು ಪುರಸಭೆ ಇದ್ದ ಸಂದರ್ಭ ಬುಟ್ಟಿಯಂಡ ಅಪ್ಪಾಜಿ ಅವರು ಅಧ್ಯಕ್ಷರಾಗಿದ್ದ ಸಂದರ್ಭ ನೂತನ ಬಸ್ ನಿಲ್ದಾಣ, ತಂಗುದಾಣ ಹಾಗೂ ಶೌಚಾಲಯವನ್ನು 1970 ರ ದಶಕದಲ್ಲಿ ನಿರ್ಮಾಣ ಮಾಡಲಾಗಿತ್ತು. ಇದೀಗ ನೂತನ ಗ್ರಾ.ಪಂ. ಆಡಳಿತ ಬಂದ ನಂತರ ಶಿಥಿಲಾವಸ್ಥೆಯಲ್ಲಿದ್ದ ಬಸ್ ನಿಲ್ದಾಣವನ್ನು ಒಡೆದು ಹಾಕಿ ಅಲ್ಲಿ ತಾತ್ಕಾಲಿಕವಾಗಿ ರೂ. 4 ಲಕ್ಷ ವೆಚ್ಚದಲ್ಲಿ ಪ್ರಯಾಣಿಕರಿಗೆ ತಂಗುದಾಣ ನಿರ್ಮಿಸಲಾಗಿದೆ. ಸುಮಾರು ರೂ. 10 ಲಕ್ಷವೆಚ್ಚದಲ್ಲಿ ಬಸ್ ನಿಲ್ದಾಣ ಹಿಂಭಾಗ ಮಹಿಳೆಯರು ಹಾಗೂ ಪುರುಷರಿಗಾಗಿ ನೂತನ ಶೌಚಾಲಯ ನಿರ್ಮಾಣವಾಗುತ್ತಿದ್ದು, ಮುಕ್ತಾಯ ಹಂತದಲ್ಲಿದೆ. ಇದೀಗ ತಾತ್ಕಾಲಿಕ ಶೌಚಾಲಯ ವ್ಯವಸ್ಥೆಯಲ್ಲಿ ಪ್ರಯಾಣಿಕರು ದಿನನಿತ್ಯ ಕಿರಿಕಿರಿ ಅನುಭವಿಸುವದು ಸಾಮಾನ್ಯವಾಗಿದೆ. ಆದರೆ, ಗೋಣಿಕೊಪ್ಪಲಿಗೆ ‘ಹೈಟೆಕ್ ಬಸ್’ ನಿಲ್ದಾಣ ಭಾಗ್ಯ ಒಲಿದಲ್ಲಿ ಈ ಎಲ್ಲ ಸಮಸ್ಯೆಗಳೂ ಹೆಚ್ಚೂಕಮ್ಮಿ ಪರಿಹಾರ ಆಗಲು ಸಾಧ್ಯವಿದೆ.
ಆದರೆ, ಕೋಟಿಗಟ್ಟಲೆ ಬಂಡವಾಳ ಕ್ರೋಢೀಕರಣದ ಚಿಂತೆ ಗ್ರಾಮ ಪಂಚಾಯಿತಿಯನ್ನು ಕಾಡುತ್ತಿದೆ. ಕಣ್ಣಾನೂರು ಅಥವಾ ಪುತ್ತೂರುವಿನಂತೆ ಸುಮಾರು ರೂ. 30 ಕೋಟಿ ವೆಚ್ಚದ ಬಸ್ ನಿಲ್ದಾಣ ಇಲ್ಲಿಯೂ ನಿರ್ಮಾಣವಾಗಬೇಕಾದ ಅಗತ್ಯತೆ ಕುರಿತು ಹಲವು ಬುದ್ಧಿ ಜೀವಿಗಳಿಂದ ಮಾತು ಕೇಳಿ ಬಂದಿತ್ತಾದರೂ ಇಲ್ಲಿನ ಕಾಂಗ್ರೆಸ್-ಬಿಜೆಪಿ ಚುನಾಯಿತ ಸದಸ್ಯರ ನಡುವೆ ಸಹಮತ ಕೊರತೆ ಹಿನ್ನೆಲೆ ನೆನೆಗುದಿಗೆ ಬೀಳುವಂತಾಗಿದೆ.
ಒಟ್ಟು 14 ಸ್ಥಾನಗೆದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರು ವಿರೋಧ ಪಕ್ಷವಾಗಿ ಕೂರುವಂತ ಸ್ಥಿತಿ ನಿರ್ಮಾಣವಾಗಿದ್ದರೆ, ಕೇವಲ 6 ಸ್ಥಾನಗಳಿಸಿದ ಬಿಜೆಪಿ ಬೆಂಬಲಿತರು ಮೀಸಲಾತಿ ಲಾಭ ಪಡೆದು ಅಧ್ಯಕ್ಷೆ-ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿರುವದು ದಿನನಿತ್ಯ ದ್ವಂದ್ವ ನಿಲುವಿಗೆ ಕಾರಣವಾಗಿದೆ. ತಾತ್ಕಾಲಿಕ ಬಸ್ ತಂಗುದಾಣ ಹಾಗೂ ನೂತನ ಶೌಚಾಲಯ ನಿರ್ಮಾಣ ಸಂದರ್ಭವೂ ಎರಡು ಬಣಗಳ ನಡುವೆ ವಾಗ್ವಾದ ನಡೆದಿತ್ತು. ಈ ಹಂತದಲ್ಲಿ ಇಲ್ಲಿನ ಪಿಡಿಓ ತಿಂಗಳಾನುಗಟ್ಟಲೆ ಅನಾರೋಗ್ಯದ ನೆಪದಲ್ಲಿ ರಜೆಯ ಮೇಲೆ ತೆರಳಿದ್ದರು.
ಗೋಣಿಕೊಪ್ಪಲಿನ ಬಸ್ ನಿಲ್ದಾಣ, ಕಾರು ನಿಲ್ದಾಣ, ಜೀಪು ನಿಲ್ದಾಣ, ಮಿನಿ ಲಾರಿ, ಆಟೋ, ಗೂಡ್ಸ್ ಆಟೋ ನಿಲ್ದಾಣಕ್ಕೂ ಇಲ್ಲಿ ಸೂಕ್ತ ಜಾಗವಿಲ್ಲ. ಒಟ್ಟಿನಲ್ಲಿ ದಿನನಿತ್ಯ ಸಮಸ್ಯೆ ಬಿಗಡಾಯಿಸುತ್ತಿದೆ.
ರೂ. 2.15 ಕೋಟಿ ವೆಚ್ಚದ ಹೈಟೆಕ್ ಬಸ್ ನಿಲ್ದಾಣಕ್ಕೆ ಶಿಫಾರಸ್ಸು!
ಗೋಣಿಕೊಪ್ಪಲಿನ ಪ್ರಮುಖ ಸಮಸ್ಯೆಯನ್ನು ಆಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಮ್ ಅವರು ವರ್ಷದ ಹಿಂದೆ ಇಲ್ಲಿನ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ್ದರು. ಆದರೆ, ರೂ. 30 ಕೋಟಿ ಬಂಡವಾಳ ಹೂಡಲು ಇಲ್ಲಿನ ಜನಪ್ರತಿನಿಧಿಗಳ ಕಿತ್ತಾಟದಿಂದಾಗಿ ಯಾವೊಬ್ಬ ಹೂಡಿಕೆದಾರನೂ ಇತ್ತ ಸುಳಿಯಲಿಲ್ಲ. ಈ ನಡುವೆ ಕಣ್ಣಾನೂರು ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿದ ಗುತ್ತಿಗೆದಾರನಿಗೆ ಗೋಣಿಕೊಪ್ಪಲಿನಲ್ಲಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಅದೇ ಮಾದರಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಇಚ್ಛೆ ಇತ್ತಾದರೂ ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಗುತ್ತಿಗೆದಾರ ಆಸಕ್ತಿ ಕಳೆದುಕೊಂಡಿದ್ದರು.
ಇದೀಗ ಸೀತಾರಾಮ್ ಅವರ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ಆಸಕ್ತಿ ವಹಿಸಿ ಸುಮಾರು ರೂ. 2.15 (215 ಲಕ್ಷ) ಕೋಟಿ ವೆಚ್ಚದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಕಾರ್ಯದರ್ಶಿ ಮಟ್ಟದಲ್ಲಿ ಅನುದಾನ ಬಿಡುಗಡೆ ಸಮ್ಮತಿ ದೊರಕಿದೆ ಎನ್ನಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ. ಪಾಟೀಲ್ ಅವರ ಮುಂದೆ ಯೋಜನೆಯ ಕಡತವಿದ್ದು, ಕನಿಷ್ಟ ಈ ಬಾರಿಯ ಬಜೆಟ್ನಲ್ಲಿ ಅನುದಾನಕ್ಕೆ ಒಪ್ಪಿಗೆ ದೊರೆತಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದನಂತರವಾದರೂ ಕಾಮಗಾರಿ ಆರಂಭಿಸಲು ಸಾಧ್ಯವಿದೆ. ಈ ನಡುವೆ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಭೇಟಿ ನೀಡಿ ಸರ್ಕಾರಿ ಬಸ್ಗೆ ಸೂಕ್ತ ನಿಲ್ದಾಣ ಇಲ್ಲದ ಹಿನ್ನೆಲೆ ಸದರಿ ಬಸ್ ನಿಲ್ದಾಣ ನಿವೇಶನವನ್ನು ಸಾರಿಗೆ ನಿಗಮಕ್ಕೆ ವಹಿಸಲು ಕೋರಿದ್ದರು. ಹಾಗೇನಾದರೂ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನಿಲ್ದಾಣ ಹಸ್ತಾಂತರಿಸಿದ್ದಲ್ಲಿ ಇಲ್ಲಿನ ಖಾಸಗಿ ಬಸ್ಗಳಿಗೆ ನಿರ್ಬಂಧ ವಿಧಿಸುವ ಸಾಧ್ಯತೆ ಇದ್ದು, ಹೊಸ ಬಿಕ್ಕಟ್ಟು ಸೃಷ್ಟಿಯಾಗುತ್ತದೆ. ಈ ಹಿನ್ನೆಲೆ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ಯೋಜನೆ ನೆನಗುದಿಗೆ ಬೀಳುವಂತಾಯಿತು.
ಇದೀಗ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ರೂ. 2.15 ಕೋಟಿ ಬಿಡುಗಡೆ ಮಾಡಿದ್ದೇ ಆದಲ್ಲಿ ಬಸ್ ನಿಲ್ದಾಣ ಒಂದಷ್ಟು ಅಗಲೀಕರಣಗೊಂಡು ಖಾಸಗಿ ಹಾಗೂ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ಸಮಸ್ಯೆ ತಕ್ಕ ಮಟ್ಟಿಗೆ ಬಗೆಹರಿಯಬಹುದು. ಆದರೆ, ಹೈಟೆಕ್ ಬಸ್ ನಿಲ್ದಾಣ ಮತ್ತಷ್ಟು ಯೋಜನಾ ಬದ್ಧವಾಗಿ ನಿರ್ಮಾಣವಾಗಲಿ ಎಂಬ ಆಶಯ ಜನತೆಯದ್ದು.
ಬೆಂಗಳೂರು ಯಶವಂತಪುರ ಮುಂತಾದ ಬಸ್ ನಿಲ್ದಾಣದಲ್ಲಿ ಎರಡಂತಸ್ತು, ಮೂರಂತಸ್ತು ಬಸ್ ನಿಲ್ದಾಣ ಮಾದರಿ ನಿರ್ಮಾಣವಾದಲ್ಲಿ ಇರುವ ಮೂರು, ಮೂರುವರೆ ಎಕರೆ ನಿವೇಶನದಲ್ಲಿ ಕಾರು ನಿಲ್ದಾಣ, ಆಟೋ, ಜೀಪು ಇತ್ಯಾದಿ ವಾಹನಗಳಿಗೂ ಸುಸಜ್ಜಿತ ನಿಲ್ದಾಣ ರೂಪುಗೊಳಿಸಲು ಸಾಧ್ಯವಿದೆ. ಬೆಂಗಳೂರು ಮಾದರಿ 24/7 ಶೌಚಾಲಯ ವ್ಯವಸ್ಥೆ ಇದ್ದಲ್ಲಿ ರಾತ್ರಿ ವೇಳೆಯ ಪ್ರಯಾಣಿಕರಿಗೆ ಅದರಲ್ಲೂ ಮಹಿಳೆಯರು ಮಕ್ಕಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ. ಪ್ರಯಾಣಿಕರಿಗೆ ಉತ್ತಮ ವಿಶ್ರಾಂತಿ ಕೊಠಡಿ, ಹೊಟೇಲ್, ಅಂಗಡಿ ಮಳಿಗೆ, ಮಲ್ಟಿಫ್ಲೆಕ್ಸ್ ಸಿನೆಮಾ ಮಂದಿರ ಇತ್ಯಾದಿಗಳಿಗೂ ಸ್ಥಳಾವಕಾಶ ಸಿಗಲಿದೆ. ಇಲ್ಲಿನ ಹಳೇ ಪುರಸಭೆ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಗ್ರಾಮಸಭೆ ನಡೆಸುವದೇ ಕಷ್ಟಸಾಧ್ಯವಾಗಿದೆ. ಹಳೆಯ ಕಟ್ಟಡ ಹಾಗೂ ಮಾರುಕಟ್ಟೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸುಮಾರು 40ಕ್ಕೂ ಅಧಿಕ ಅಂಗಡಿ ಮಳಿಗೆಗಳನ್ನು ತೆರವು ಮಾಡಿದ್ದಲ್ಲಿ ಮೊದಲ ಅಂತಸ್ತಿನಲ್ಲಿ ಸುಮಾರು 1000 ಆಸನವಿರುವ ಸಭಾ ಭವನ ನಿರ್ಮಿಸಲೂ ಸಾಧ್ಯವಿದೆ. ಭವಿಷ್ಯದಲ್ಲಿ ಗ್ರಾ.ಪಂ.ಗೆ ನೂತನ ಕಟ್ಟಡ ಸಂಕೀರ್ಣದಿಂದ ಆದಾಯ ಕ್ರೋಢೀಕರಣ ಮಾಡಲೂ ಅವಕಾಶವಿದೆ. ಆದರೆ, ಗೋಣಿಕೊಪ್ಪಲು ಮುಖ್ಯರಸ್ತೆ ಇಬ್ಬದಿಯ ಚರಂಡಿ ವ್ಯವಸ್ಥೆಯೂ ಇನ್ನೂ ದುರಸ್ತಿ ಭಾಗ್ಯ ಕಂಡಿಲ್ಲ.
ರೂ. 2 ಕೋಟಿ ವೆಚ್ಚದ ಮುಖ್ಯ ರಸ್ತೆ ಅಭಿವೃದ್ಧಿ
ಗೋಣಿಕೊಪ್ಪಲು ಮುಖ್ಯರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಟ್ಟಿದ್ದು, ಇದೀಗ ರಾಜ್ಯ ಹೆದ್ದಾರಿ ಪ್ರಾಧಿಕಾರ ಸುಮಾರು ರೂ. 2 ಕೋಟಿ ವೆಚ್ಚದಲ್ಲಿ ಮುಖ್ಯರಸ್ತೆಯನ್ನು ಅಭಿವೃದ್ಧಿಗೊಳಿಸಲಿದೆ. ಟೆಂಡರ್ ಪ್ರಕ್ರಿಯೆಯೂ ಮುಗಿದಿದ್ದು ಉತ್ತರ ಕರ್ನಾಟಕದ ಅರುಣ್ ಕುಮಾರ್ ಎಂಬವರಿಗೆ ಗುತ್ತಿಗೆ ನೀಡಲಾಗಿದೆ ಎಂದು ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರ ರಮೇಶ್ ಮಾಹಿತಿ ನೀಡಿದ್ದಾರೆ. ಆದರೆ, ಇಲ್ಲಿ ಗುತ್ತಿಗೆದಾರ ಸ್ಥಳೀಯ ವ್ಯಕ್ತಿಗಳಿಗೆ ಉಪಗುತ್ತಿಗೆ ನೀಡುವ ಸಾಧ್ಯತೆಯೂ ಇದ್ದು ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ ಎನ್ನಲಾಗಿದೆ. ಗೋಣಿಕೊಪ್ಪಲು ಮುಖ್ಯರಸ್ತೆ ಇಲ್ಲಿನ ಎಪಿಎಂಸಿ ಮುಂಭಾಗದಿಂದ ಕಾವೇರಿ ಕಾಲೇಜುವರೆಗೂ ಅಭಿವೃದ್ಧಿಗೊಳ್ಳುವ ಅವಶ್ಯಕತೆ ಇದ್ದು ಇದೀಗ ರೂ. 2 ಕೋಟಿ ವೆಚ್ಚದ ಅನುದಾನವನ್ನು ಕೇವಲ ಒಂದೂವರೆ ಕಿ.ಮೀ. ರಸ್ತೆ ಅಭಿವೃದ್ಧಿಗೆ ಮಾತ್ರ ವಿನಿಯೋಗವಾಗಲಿದೆ ಎನ್ನಲಾಗುತ್ತಿದೆ. ರೂ. 1 ಕೋಟಿ ವೆಚ್ಚದ ಫುಟ್ಪಾತ್ಗೂ ಅನುದಾನ ಬಿಡುಗಡೆಗೊಂಡಿದ್ದು, ಸದ್ಯಕ್ಕೆ ಮುಖ್ಯರಸ್ತೆ ಅಗಲೀಕರಣ ಕಾರ್ಯ ಇಲ್ಲ ಎಂದು ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಭು ಈ ಹಿಂದೆಯೇ ಸ್ಪಷ್ಟ ಪಡಿಸಿದ್ದರು.
ಗೋಣಿಕೊಪ್ಪಲು ಬಸ್ ನಿಲ್ದಾಣ, ಮುಖ್ಯರಸ್ತೆ ಅಭಿವೃದ್ಧಿ ಹಾಗೂ ನೂತನ ಒಳಚಂರಂಡಿ ವ್ಯವಸ್ಥೆ ಶೀಘ್ರ ಕಾರ್ಯಾರಂಭಗೊಂಡಲ್ಲಿ ವಾಣಿಜ್ಯ ನಗರಿ ಗೋಣಿಕೊಪ್ಪಲಿನ ಜನತೆ ಸಮಾಧಾನದ ನಿಟ್ಟುಸಿರುಬಿಡಬಹುದಾಗಿದೆ.
- ಟಿ.ಎಲ್. ಶ್ರೀನಿವಾಸ್