ಸಿದ್ದಾಪುರ, ಜ. 5: ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಕಾಫಿ ಬೆಳೆ, ಭತ್ತದ ಕೃಷಿ ಹಾಗೂ ಕೃಷಿ ಪರಿಕರಗಳನ್ನು ನಾಶಮಾಡಿರುವ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಕರಡಿಗೋಡು ಕಾಫಿ ತೋಟದಲ್ಲಿ ನಡೆದಿದೆ.

ಕರಡಿಗೋಡು ಗ್ರಾಮದ ನಡಿಕೇರಿಯಂಡ ಮಾಚಯ್ಯ, ಅಪ್ಪಯ್ಯ (ವಿಕ್ರಂ), ಕಾರ್ಯಪ್ಪ ಎಂಬವರುಗಳ ಕಾಫಿ ತೋಟದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕಾಡಾನೆಗಳ ಹಿಂಡು ತೋಟದಲ್ಲೇ ಬೀಡುಬಿಟ್ಟು ದಾಂದಲೆ ನಡೆಸಿ ಬೆಳೆಗಳನ್ನು ನಾಶಮಾಡಿವೆ. ಸುಮಾರು 20 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಳೆದ ಕೆಲವು ದಿನಗಳಿಂದ ತೋಟದಲ್ಲೇ ಬೀಡುಬಿಟ್ಟಿದ್ದು, ಕಾಫಿ ಫಸಲನ್ನು ನಾಶಮಾಡಿದ್ದಲ್ಲದೇ, ಗದ್ದೆಯಲ್ಲಿದ್ದ ಭತ್ತ ಹಾಗೂ ತಾಳೆ ಬೆಳೆಯನ್ನೂ ದ್ವಂಸ ಮಾಡಿವೆ. ಇದಲ್ಲದೇ ಮನೆಯ ಸಮೀಪದಲ್ಲಿಟ್ಟಿದ್ದ ನೀರು ಹಾಯಿಸುವ ಪೈಪ್‍ಗಳನ್ನು ಕಾಲಿನಿಂದ ತುಳಿದು ನಾಶಪಡಿಸಿದೆ. ಕಾಡಾನೆಗಳು ಕಾಫಿ ಫಸಲು ಇರುವ ಗಿಡಗಳನ್ನು ಮುರಿದು ಹಾಕಿದ್ದು, ಕೆಲ ಕಾಫಿ ಗಿಡಗಳನ್ನು ಬೇರು ಸಹಿತ ಕಿತ್ತುಹಾಕಿದೆ. ತೋಟದ ಮದ್ಯಭಾಗ ದಲ್ಲಿ ಕಾಡಾನೆಗಳ ದಾಂದಲೆಯಿಂದ ಕಾಫಿ ತೋಟ ಮೈದಾನದಂತಾಗಿದೆ.

ಕಾಡಾನೆ ಹಿಂಡು ಕಾಫಿ ತೋಟದಲ್ಲಿ ಬೀಡುಬಿಟ್ಟ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ರಜೆ ನೀಡಲಾಗಿದೆ. ಕಾಫಿ ಕೊಯ್ಲು ಸಮಯವಾದರೂ ಕೂಡ ಕಾಡಾನೆ ಹಾವಳಿ ಮಿತಿಮೀರಿದ ಕಾರಣ ಕಾರ್ಮಿಕರಿಗೆ ರಜೆ ನೀಡಲಾಗಿದ್ದು, ಈ ಭಾಗದಲ್ಲಿ ಶಾಲಾ ಕಾಲೇಜಿಗೆ ತೆರಳುವ ವಿಧ್ಯಾರ್ಥಿಗಳು ಕೂಡ ಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಕೃಷಿಯನ್ನೇ ಅವಲಂಭಿಸಿ ಬದುಕುತ್ತಿರುವ ಬೆಳೆಗಾರರಿಗೆ ಕಾಡಾನೆ ಉಪಟಳದಿಂದ ತೀವ್ರ ತೊಂದರೆ ಯಾಗುತ್ತಿದ್ದು, ಈಗಾಗಲೇ ಬೆಳೆಗೆ ಸೂಕ್ತ ಬೆಲೆ ಇಲ್ಲವಾಗಿದ್ದು, ಕಾಫಿ ತೋಟವನ್ನು ನಿಬಾಯಿಸಿಕೊಂಡು ಹೋಗುವದು ಕಷ್ಟಕರವಾಗಿದೆ ಎಂದು ಕರಡಿಗೋಡು ತೋಟದ ಮಾಲೀಕ ವಿಕ್ರಂ ಅಪ್ಪಯ್ಯ ತಿಳಿಸಿದರು.

ನಡಿಕೇರಿಯಂಡ ಮಾಚಯ್ಯ ಮಾತನಾಡಿ, ಕಳೆದ ಕೆಲವು ದಿನಗಳಿಂದ 20 ಕ್ಕೂ ಅಧಿಕ ಕಾಡಾನೆಗಳು ತಮ್ಮ ತೋಟದಲ್ಲಿ ಬೀಡುಬಿಟ್ಟು ದಾಂದಲೆ ನಡೆಸುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಕಾಡಾನೆ ಗಳನ್ನು ಕಾಡಿಗಟ್ಟಲು ಪ್ರಯತ್ನಿಸಿದ್ದು, ಕಾಡಾನೆಗಳು ಅರಣ್ಯ ಇಲಾಖಾ ಸಿಬ್ಬಂದಿಗಳ ಮೇಲೆಯೇ ಧಾಳಿಗೆ ಮುಂದಾಗಿದೆ. ಕಾಡಾನೆ ಉಪಟಳ ದಿಂದ 5 ಲಕ್ಷಕ್ಕೂ ಅಧಿಕ ನಷ್ಟ ಸಂಭವಿ ಸಿದೆ. ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಸರಕಾರ ಶಾಶ್ವತ ಯೋಜನೆ ರೂಪಿಸಬೇಕೆಂದು ಅವರು ಒತ್ತಾಯಿಸಿದರು.

-ಎ.ಎನ್. ವಾಸು