ಕೂಡಿಗೆ, ಜ. 6: ಕೈಗಾರಿಕಾ ಉದ್ಯೋಗ ಕೇಂದ್ರ ಮಡಿಕೇರಿ ಹಾಗೂ ಕೂಡಿಗೆ ಕಾರ್ಪೋರೇಷನ್ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಕೇಂದ್ರದ ವತಿಯಿಂದ 2017-18ನೇ ಸಾಲಿನ ತಂತ್ರಜ್ಞಾನ ತರಬೇತಿ ಸಂಸ್ಥೆಗಳಿಗೆ ನೆರವು ಯೋಜನೆಯಡಿಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಕಂಪ್ಯೂಟರ್ ಬೇಸಿಕ್ ಮತ್ತು ಟ್ಯಾಲಿ ತರಬೇತಿ ಶಿಬಿರವನ್ನು ಕಾರ್ಪೋರೇಷನ್ ಬ್ಯಾಂಕ್‍ನ ಮೈಸೂರು ವಿಭಾಗದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಾಮಚಂದ್ರ ಭಟ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ತರಬೇತಿಯಿಂದ ಸಿಗುವ ಉಪಯೋಗಗಳನ್ನು ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು. ಕೈಗಾರಿಕಾ ಉದ್ಯೋಗ ಕೇಂದ್ರದ ಉಪನಿರ್ದೇಶಕ ಶಬೀರ್‍ಬಾಷಾ ಮಾತನಾಡಿ, ಸ್ವ-ಉದ್ಯೋಗ ನಡೆಸಲು ಕೇಂದ್ರದ ವತಿಯಿಂದ ರಿಯಾಯಿತಿ ನೀಡಲಾಗುತ್ತಿದ್ದು, ಶಿಬಿರಾರ್ಥಿಗಳು ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ಸ್ವ-ಉದ್ಯೋಗ ನಡೆಸಲು ಮುಂದಾಗಬೇಕು ಎಂದರು.

ಸಂಸ್ಥೆಯ ನಿರ್ದೇಶಕ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಹಿರಿಯ ಸಹಾಯಕರಾದ ಸಲಾವುದ್ದೀನ್, ಸಂಸ್ಥೆಯ ಮನೋಜ್ ಕುಮಾರ್ ಮತ್ತು ಸುಶ್ಮಿ ಇದ್ದರು. ಶಿಬಿರದಲ್ಲಿ 27 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.