ಕುಶಾಲನಗರ, ಜ. 6: ಕುಶಾಲನಗರ ವ್ಯಾಪ್ತಿಯಲ್ಲಿ ಜೀವನದಿ ಕಾವೇರಿ ಕಲುಷಿತದ ನಡುವೆ ಕೆರೆಗಳು ಕೂಡ ಸಂಪೂರ್ಣ ಅವನತಿಯತ್ತ ಸಾಗುತ್ತಿರುವದು ಕಂಡುಬಂದಿದೆ. ಪಟ್ಟಣದ ಬೆರಳೆಣಿಕೆಯ ಕೆರೆಗಳ ಅಭಿವೃದ್ಧಿ ಮರೀಚಿಕೆಯಾಗುವದರೊಂದಿಗೆ ಕಲುಷಿತ ನೀರು, ಪ್ಲಾಸ್ಟಿಕ್ ತ್ಯಾಜ್ಯಗಳು ನೇರವಾಗಿ ಕೆರೆ ಸೇರಿ ಸಂಪೂರ್ಣ ಪಾಚಿ ಕಟ್ಟುವದರೊಂದಿಗೆ ಮಲಿನಗೊಂಡಿರುವ ದೃಶ್ಯ ಸಮೀಪದ ತಾವರೆಕೆರೆಯಲ್ಲಿ ಕಂಡುಬಂದಿದೆ.

ಇಷ್ಟೊಂದು ಆವಾಂತರಗಳು ನಡೆಯುತ್ತಿದ್ದರೂ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಾತ್ರ ಯಾವದೇ ರೀತಿಯ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ. ಸಮೀಪದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ಕೂಡ ಅಧಿಕಾರಿಗಳು ನಿರ್ಲಕ್ಷ್ಯ ತಾಳಿರುವದು ಈ ಆವಾಂತರಗಳಿಗೆ ಪ್ರಮುಖ ಕಾರಣ ಎನ್ನುತ್ತಾರೆ. ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿರುವ ರೇಣುಕಾ ಅವರ ವಾರ್ಡ್‍ನಲ್ಲಿ ಈ ಕೆರೆ ಇದ್ದು ಇದರ ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎನ್ನುವ ದೂರುಗಳು ಕೇಳಿಬಂದಿವೆ.

ದಶಕಗಳ ಹಿಂದೆ ತಾವರೆಕೆರೆ ಅಭಿವೃದ್ಧಿ ಹೆಸರಿನಲ್ಲಿ ಅಂದಾಜು 50 ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಿದ್ದು ಇದು ನೀರುಪಾಲಾಗಿದೆ ಎಂದರೆ ತಪ್ಪಾಗಲಾರದು. ಕೆರೆಯಿಂದ ತೆಗೆದ ಹೂಳು ಮತ್ತೆ ಕೆರೆಗೆ ತುಂಬಿರುವದು ಈ ಯೋಜನೆಯ ವೈಶಿಷ್ಟ್ಯತೆ. ಒಟ್ಟಾರೆ ಲಕ್ಷಾಂತರ ರೂಪಾಯಿಗಳ ಸರಕಾರದ ಹಣವನ್ನು ಪೋಲು ಮಾಡಿರುವದು ಇಲ್ಲಿ ನೆನಪಿಸಬಹುದು.

ತದನಂತರದ ದಿನಗಳಲ್ಲಿ ಕೆರೆಯ ಗಾತ್ರ ಕಿರಿದಾಗುತ್ತಾ ಬರುವದರೊಂದಿಗೆ ಕಾಡು ಬೆಳೆದು ನಿಂತಿರುವ ದೃಶ್ಯ ಗೋಚರಿಸುತ್ತಿದೆ. ಇದೀಗ ಕುಡಾದಿಂದ ಯೋಜನೆಯೊಂದನ್ನು ರೂಪಿಸಿದ್ದು ಸರಕಾರದ ಅನುದಾನದೊಂದಿಗೆ ಕೋಟಿ ವೆಚ್ಚದಲ್ಲಿ ಕೆರೆಯ ನಿರ್ವಹಣೆ, ಅಭಿವೃದ್ಧಿ ಮಾಡುವ ಬಗ್ಗೆ ನೀಲಿನಕ್ಷೆ ತಯಾರಾಗಿದೆ ಎಂದು ಕುಡಾ ಅಧ್ಯಕ್ಷ ಬಿ.ಜಿ. ಮಂಜುನಾಥ್ ಗುಂಡುರಾವ್ ಹೇಳಿಕೆ ನೀಡಿದ್ದಾರೆ. ಸದ್ಯದಲ್ಲಿಯೇ ಕಾಮಗಾರಿಗೆ ಅನುಮೋದನೆ ದೊರಕಲಿದೆ ಎಂದಿದ್ದಾರೆ. ಆದರೆ ಈ ಹಿಂದಿನಂತೆ ಯೋಜನೆ ನಿರರ್ಥಕವಾಗಬಾರದು ಎನ್ನುವದು ಸ್ಥಳೀಯರ ಆಗ್ರಹವಾಗಿದೆ.

ಕೆರೆಯ ಒತ್ತುವರಿ ತೆರವು ಮಾಡುವ ಹಿನ್ನೆಲೆ ಸರ್ವೆ ಕಾರ್ಯ ನಡೆಸಬೇಕು ಎನ್ನುವ ಆಗ್ರಹವನ್ನು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ. ಕೆರೆಗೆ ನೇರವಾಗಿ ಬಿಡುವ ಕಲುಷಿತ ನೀರಿನ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಿದ ಸಂದರ್ಭ ಅವರು ಈ ಬಗ್ಗೆ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವದು. ಕಚೇರಿಯಿಂದ ನೋಟೀಸ್ ನೀಡಲಾಗಿದೆ. ಸದ್ಯದಲ್ಲಿಯೇ ಇಂತಹ ವಾಣಿಜ್ಯ ಮಳಿಗೆಗಳಿಗೆ ಬೀಗ ಜಡಿಯುವ ಕ್ರಮ ತೆಗೆದುಕೊಳ್ಳಲಾಗುವದು ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ವ್ಯಾಪ್ತಿಯ ವಿವಿಧೆಡೆ ಮಾಯವಾಗಿರುವ ಕೆರೆಗಳ ಸಾಲಿನಲ್ಲಿ ಪಟ್ಟಣದ ತಾವರೆಕೆರೆ ಕೂಡ ಸಧ್ಯದಲ್ಲಿಯೇ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎನ್ನುವದು ಸ್ಥಳೀಯ ಪರಿಸರ ಪ್ರೇಮಿಗಳ ಆತಂಕವಾಗಿದೆ. ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ತಾವರೆಕೆರೆಯ ರಕ್ಷಣೆಗೆ ಮುಂದಾಗಬೇಕಿದೆ. - ಚಂದ್ರಮೋಹನ್