ಸುಂಟಿಕೊಪ್ಪ, ಜ. 4: ಸಮಾಜದಲ್ಲಿ ಹಿರಿಯ ನಾಗರಿಕರು ಮತ್ತು ವಯೋವೃದ್ಧರ ಬಗ್ಗೆ ಯಾರೂ ಕೂಡ ತಾತ್ಸಾರ ಮನೋಭಾವನೆ ಹೊಂದದೆ ಅವರ ಆರೋಗ್ಯ ರಕ್ಷಣೆ ಹಾಗೂ ಜೀವನ ನಿರ್ವಹಣೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ ಹೇಳಿದರು.
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ ವತಿಯಿಂದ ಬೆಂಗಳೂರಿನ ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ಹಿರಿಯ ನಾಗರಿಕರ ರಕ್ಷಣಾ ವಿಭಾಗದ ಆಶ್ರಯದಲ್ಲಿ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿರಿಯ ನಾಗರಿಕರ ರಕ್ಷಣೆ ಕುರಿತು ಈಚೆಗೆ ಏರ್ಪಡಿಸಿದ್ದ ಸಂವೇದನಾ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವೃದ್ಧರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಅಸಂಪ್ರದಾಯ ಸಾಮಾಜಿಕ ಸನ್ನಿವೇಶಗಳು ಬೆಳೆಯುತ್ತಿವೆ. ಇದನ್ನು ತಡೆಗಟ್ಟುವ ಮೂಲಕ ವೃದ್ಧ ಪೋಷಕರ ರಕ್ಷಣೆಗೆ ಪ್ರತಿಯೊಬ್ಬರೂ ಸಾಮಾಜಿಕ ಹೊಣೆಗಾರಿಕೆ ಹೊಂದಬೇಕಾಗಿದೆ. ಈ ದಿಸೆಯಲ್ಲಿ ಸರ್ಕಾರ ಮತ್ತು ಸಂಘ-ಸಂಸ್ಥೆಗಳು ವಯೋವೃದ್ಧರ ರಕ್ಷಣೆಗಾಗಿ ವಿವಿಧ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಪ್ರತಿಯೊಬ್ಬರೂ ತಮ್ಮ ಪೋಷಕರ ರಕ್ಷಣೆ ಮಾಡುವ ಮೂಲಕ ಸಮಾಜದ ಋಣ ತೀರಿಸುವ ಹೊಣೆಗಾರಿಕೆ ಹೊಂದಬೇಕು. ಸಮಾಜದಲ್ಲಿನ ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕೆ ಸಾಂತ್ವನ ಕೇಂದ್ರಗಳ ಮೂಲಕ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಮಲ್ಲೇಸ್ವಾಮಿ ತಿಳಿಸಿದರು.
ಹಿರಿಯ ನಾಗರಿಕರ ರಕ್ಷಣೆ ಕುರಿತು ಮಾತನಾಡಿದ ಸಾಮಾಜಿಕ ರಕ್ಷಣಾ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಬಸವರಾಜ್, ಸಮುದಾಯದಲ್ಲಿ ಪೋಷಕರು ಮತ್ತು ಹಿರಿಯ ನಾಗರಿಕರಿಗೆ ನೀಡುವ ಗೌರವ ಹಾಗೂ ರಕ್ಷಣಾ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವ ದಿಸೆಯಲ್ಲಿ ಇಂತಹ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು. ಕನ್ನಡ ಭಾಷಾ ಶಿಕ್ಷಕಿ ಕೆ.ಕೆ.ಪುಷ್ಪ ಇಂದಿನ ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಕುರಿತು ವಿಷಯ ಮಂಡಿಸಿದರು. ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಮಡಿಕೇರಿ ಶಕ್ತಿ ಅಸೋಸಿಯೇಟ್ಸ್‍ನ ಸಂಯೋಜಕ ಸತೀಶ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಟಿ.ವೆಂಕಟೇಶ್, ಶಿಕ್ಷಕಿಯರಾದ ಎಂ.ಎನ್.ಲತಾ, ಎಸ್.ಆರ್.ಚಿತ್ರಾ, ಮಂಜುಳಾ ಎಂ.ಕೆರೂರ್ ಇದ್ದರು.
ಇದಕ್ಕೂ ಮುನ್ನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಿರಿಯ ನಾಗರಿಕರ ರಕ್ಷಣೆ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಅಮೀರ್ (ಪ್ರಥಮ), ಸಫ್ರೀನಾ (ದ್ವಿತೀಯ) ಹಾಗೂ ನಂದಿನಿ (ತೃತೀಯ) ಬಹುಮಾನ ಪಡೆದರು. ನಂತರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.