ಮಡಿಕೇರಿ, ಜ. 4: ಗೋಣಿಕೊಪ್ಪಲು ಎ.ಪಿ.ಎಂ.ಸಿ.ಯಲ್ಲಿ ಬೆಳಕಿಗೆ ಬಂದ ವಿಯೆಟ್ನಾಂ ಕರಿಮೆಣಸು ವಹಿವಾಟಿನಿಂದಾಗಿ ಕೊಡಗಿನ ಬೆಳೆಗಾರರಿಗೆ ಸಾಕಷ್ಟು ವಂಚನೆಯಾಗುತ್ತಿತ್ತು. ಇದನ್ನು ಕೊಡಗು ಕಾಂಗ್ರೆಸ್‍ನ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದ್ದು, ಇವರ ತಕ್ಷಣದ ಸ್ಪಂದನೆ ಹಾಗೂ ಪ್ರಯತ್ನದ ಫಲವಾಗಿ ಕರಿಮೆಣಸು ಆಮದು ಶುಲ್ಕವನ್ನು ರೂ. 500 ಕ್ಕೆ ಹೆಚ್ಚಳ ಮಾಡಲಾಗಿದೆ. ಇದು ಜಿಲ್ಲೆಯ ರೈತರಿಗೆ ಹೆಚ್ಚು ಪ್ರಯೋಜನವಾಗಿದೆ. ಈ ಹಿನ್ನೆಲೆ ಕಾಂಗ್ರೆಸ್‍ನಿಂದ ಮುಖ್ಯ ಮಂತ್ರಿಗಳನ್ನು ಸನ್ಮಾನಿಸಲಾಗುವದು ಎಂದು ಕಾಂಗ್ರೆಸ್ ವಕ್ತಾರ ಆಪಟ್ಟಿರ ಎಸ್. ಟಾಟು ಮೊಣ್ಣಪ್ಪ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕರಿಮೆಣಸಿಗೆ ಆಮದು ಶುಲ್ಕ ಹೆಚ್ಚು ವಿಧಿಸಿರುವದರಿಂದ ಕೊಡಗಿನ ಕಾಳುಮೆಣಸು ಮಾರುಕಟ್ಟೆ ಚೇತರಿಗೆಯಾಗಲಿದೆ. ಅಲ್ಲದೆ ಇಲ್ಲಿನ ಕಾಳುಮೆಣಸಿನ ಗುಣಮಟ್ಟ ಉತ್ತಮವಾಗಿರುವದರಿಂದ ಬೆಳೆಗಾರರಿಗೆ ಸೂಕ್ತ ಬೆಲೆಯೂ ದೊರೆಯಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸರಕಾರದ ಸಾಧನಾ ಸಂಭ್ರಮ ಸಮಾವೇಶದಲ್ಲಿ ಪಾಲ್ಗೊಳ್ಳಲು ತಾ. 9 ರಂದು ಕೊಡಗಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಸನ್ಮಾನಿಸಿ, ಗೌರವಿಸಲಾಗುವದು ಎಂದು ತಿಳಿಸಿರುವ ಅವರು, ಸಿದ್ದರಾಮಯ್ಯ ಅವರ ಸರಕಾರ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿ ಬಂದ ಬಳಿಕ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದೆ. ಕೊಡಗಿಗೆ ಅನುದಾನ ಬಿಡುಗಡೆಗೊಳಿಸಲು ವಿಶೇಷ ಕಾಳಜಿ ತೋರಿರುವ ಮುಖ್ಯಮಂತ್ರಿಗಳನ್ನು ಜಿಲ್ಲೆಯ ಜನತೆ ಮರೆಯುವಂತಿಲ್ಲ. ಪ್ರತಿವರ್ಷದ ಬಜೆಟ್‍ನಲ್ಲಿ ಕೊಡಗಿನ ಅಭಿವೃದ್ಧಿಗಾಗಿ ತಲಾ ರೂ. 50 ಕೋಟಿಯಂತೆ ಒಟ್ಟು ರೂ. 250 ಕೋಟಿಯ ಬೃಹತ್ ಮೊತ್ತವನ್ನು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ನೀಡಿದ್ದಾರೆ. ಈ ಹಿನ್ನೆಲೆ ಕೊಡಗು ಜಿಲ್ಲಾ ಕಾಂಗ್ರೆಸ್ ಸೇರಿದಂತೆ ಕೊಡಗಿನ ಎಲ್ಲಾ ಬ್ಲಾಕ್ ಕಾಂಗ್ರೆಸ್ ಮತ್ತು ಪಕ್ಷದ ಮುಂಚೂಣಿ ಘಟಕಗಳ ವತಿಯಿಂದ ಸಿದ್ದರಾಮಯ್ಯ ಅವರನ್ನು ಕೊಡಗಿನ ಬೆಳಗಾರರ, ರೈತರ ಮತ್ತು ಕಾರ್ಮಿಕರ ಪರವಾಗಿ ಸನ್ಮಾನಿಸಲಾಗುವದು ಎಂದು ಹೇಳಿದ್ದಾರೆ.
ಸಹಕಾರಿ ಸಂಘಗಳಲ್ಲಿ ಸಾಲ ಪಡೆದ ರೈತರಿಗಾಗಿ ರೂ. 50 ಸಾವಿರ ಸಾಲ ಮನ್ನಾ ಯೋಜನೆಯನ್ನು ಸಿದ್ದರಾಮಯ್ಯ ಅವರು ಘೋಷಿಸಿದ್ದರು. ಇದರಿಂದ ಕೊಡಗಿನ ಸಾಕಷ್ಟು ಸಂಖ್ಯೆಯ ರೈತರಿಗೆ ಪ್ರಯೋಜನವಾಗಿದೆ. ಕೊಡಗಿನ ಎಲ್ಲಾ ಪ್ರದೇಶದ ಗ್ರಾಮೀಣ ರಸ್ತೆಗಳು ಸುಧಾರಣೆ ಯಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ ಘೋಷಿಸಿರುವ ವಿಶೇಷ ಪ್ಯಾಕೇಜ್ ಪ್ರಮುಖ ಕಾರಣ.
ಈ ಹಿನ್ನೆಲೆ ಮುಖ್ಯ ಮಂತ್ರಿಗಳನ್ನು ಜಿಲ್ಲೆಯ ಜನತೆಯ ಪರವಾಗಿ ಕಾಂಗ್ರೆಸ್‍ನಿಂದ ಗೌರವಿಸಲು ನಿರ್ಧರಿಸಲಾಗಿದೆ ಎಂದು ಎ.ಎಸ್. ಟಾಟು ಮೊಣ್ಣಪ್ಪ ವಿವರಿಸಿದ್ದಾರೆ.