ಕುಶಾಲನಗರ, ಜ. 4: ಕಾವೇರಿ ತಾಲೂಕು ಹೋರಾಟ ಸಮಿತಿಯ ಪ್ರತಿಭಟನೆ ಇದೀಗ ಕಾವೇರಿದ್ದು ಪ್ರತಿಭಟನಾಕಾರರು ರಸ್ತೆಗಿಳಿದು ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ಕುಶಾಲನಗರ ಕೇಂದ್ರವಾಗಿರಿಸಿಕೊಂಡು ನೂತನ ತಾಲೂಕು ರಚನೆಗೆ ಆಗ್ರಹಿಸಿ ಸ್ಥಳೀಯ ಗುಂಡುರಾವ್ ಸತ್ಯಾಗ್ರಹ ವೇದಿಕೆಯಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರೆದಿದ್ದು ಓರ್ವ ತೀವ್ರ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಸಮಿತಿಯ ಕಾರ್ಯಕರ್ತರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ವೈದ್ಯರು ಆಗಮಿಸದ ಹಿನ್ನಲೆಯಲ್ಲಿ ಸತ್ಯಾಗ್ರಹ ವೇದಿಕೆಯ ಮುಂಭಾಗ ರಸ್ತೆಯಲ್ಲಿ ಟಯರ್‍ಗೆ ಬೆಂಕಿ ಹಾಕಿ ಪ್ರತಿಭಟಿಸಿ ರಸ್ತೆ ತಡೆ ನಡೆಸಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು. ಜನವರಿ 1 ರಿಂದ ಸಮಿತಿಯ ಅಧ್ಯಕ್ಷರಾದ ವಿ.ಪಿ.ಶಶಿಧರ್, ಕೆ.ಎಸ್.ರಾಜಶೇಖರ್, ಮುಸ್ತಾಫ ಅವರುಗಳು ಅಮರಣಾಂತ ಉಪವಾಸ ಕೈಗೊಂಡಿದ್ದು ಈ ಸಂಬಂಧ ಗುರುವಾರ ಕುಶಾಲನಗರದಲ್ಲಿ ಅರ್ಧ ದಿನ ಬಂದ್ ನಡೆಯಿತು.

ಪ್ರಸ್ತಾವಿತ ತಾಲೂಕು ಗಡಿಭಾU Àಗಳಾದ ಶಿರಂಗಾಲ, ನೆಲ್ಲಿಹುದಿಕೇರಿ, ಸುಂಟಿಕೊಪ್ಪ ಮತ್ತಿತರ ಭಾಗಗಳಿಂದ ಸ್ಥಾನೀಯ ಸಮಿತಿ ಸದಸ್ಯರು ಮೆರವಣಿಗೆಯಲ್ಲಿ ಬಂದು ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ

(ಮೊದಲ ಪುಟದಿಂದ) ಸೂಚಿಸಿ ಮಾನವ ಸರಪಳಿ ರಚಿಸುವದ ರೊಂದಿಗೆ ರಸ್ತೆ ತಡೆ ನಡೆಸಿದರು.

ಶಾಂತಿಯುತವಾಗಿ ನಡೆದ ಬಂದ್ ನಂತರ ಅಸ್ವಸ್ಥಗೊಂಡ ಉಪವಾಸ ನಿರತರ ಆರೋಗ್ಯವನ್ನು ವಿಚಾರಿಸದ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ವಿರುದ್ಧ ಘೋಷಣೆಗಳು ಕೇಳಿಬಂದವು.

ಬಂದ್ ಶಾಂತಿಯುತ

ಕಾವೇರಿ ತಾಲೂಕು ರಚನೆಗಾಗಿ ಆಗ್ರಹಿಸಿ ಕುಶಾಲನಗರದಲ್ಲಿ ಗುರುವಾರ ಶಾಂತಿಯುತ ಬಂದ್ ನಡೆಯಿತು. ಕಳೆದ 3 ತಿಂಗಳಿನಿಂದ ನಡೆಯುತ್ತಿರುವ ಹೋರಾಟ ಇದೀಗ ತಾರಕಕ್ಕೇರಿದ್ದು ಕಾವೇರಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷÀ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಕಳೆದ 4 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.

ಈ ಸಂಬಂಧ ಕುಶಾಲನಗರ ಪಟ್ಟಣದಲ್ಲಿ ಅರ್ಧ ದಿನ ಬಂದ್ ನಡೆಯಿತು. ಸಮಿತಿಯ ಕರೆಯ ಮೇರೆಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆ ತನಕ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬೆಂಬಲ ವ್ಯಕ್ತಪಡಿಸಿದರು. ಹೋರಾಟ ಸಮಿತಿಯ ಕೇಂದ್ರ ಸಮಿತಿ ಹಾಗೂ ಸ್ಥಾನೀಯ ಸಮಿತಿಯ ಪ್ರಮುಖರ ನೇತೃತ್ವದಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಂತರ ಗಣಪತಿ ದೇವಾಲಯ ಮುಂಭಾಗ ಮಾನವ ಸರಪಳಿ ರಚಿಸಿ ತಾಲೂಕು ರಚನೆಗಾಗಿ ನೂರಾರು ಕಾರ್ಯಕರ್ತರು ಆಗ್ರಹಿಸಿದರು.

ಪ್ರತಿಭಟನೆ ಸಂದರ್ಭ ಜಿಲ್ಲಾ ಪಂಚಾಯ್ತಿ ಸದಸ್ಯೆ ಕುಮುದಾ ಧರ್ಮಪ್ಪ, ಪಿ.ಎಂ.ಲತೀಫ್, ಸುನಿತಾ, ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷರುಗಳಾದ ಭಾರತಿ, ಭವ್ಯ, ಕುಶಾಲನಗರ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಟಿ.ಆರ್.ಶರವಣಕುಮಾರ್, ಸದಸ್ಯರುಗಳು ಸೇರಿದಂತೆ ಕೇಂದ್ರ ಸಮಿತಿ, ಸ್ಥಾನೀಯ ಸಮಿತಿ ಪ್ರಮುಖರು ಇದ್ದರು.

ಹಿಂತಿರುಗಿದ ಜೆಡಿಎಸ್ ಕಾರ್ಯಕರ್ತರು

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಆಗಮಿಸುವ ಕಾರ್ಯಕ್ರಮದ ಹಿನ್ನಲೆಯಲ್ಲಿ ಬಸವನಹಳ್ಳಿ ಹೆಲಿಪ್ಯಾಡ್‍ನಲ್ಲಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕುಟುಂಬ ಸದಸ್ಯರೊಬ್ಬರ ನಿಧನದಿಂದ ಕುಮಾರಸ್ವಾಮಿ ಅವರ ಕಾರ್ಯಕ್ರಮ ರದ್ದಾಗಿದ್ದು ಬೆಳಗ್ಗಿನಿಂದಲೇ ಹೆಲಿಪ್ಯಾಡ್‍ನಲ್ಲಿ ಕಾಯುತ್ತಿದ್ದ ಮಾಜಿ ಸಚಿವ ಬಿ.ಎ.ಜೀವಿಜಯ, ಜಿಲ್ಲಾ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಹಿಂತಿರುಗಿದರು.

ಮಾನವ ಸರಪಳಿ

ಗುಡ್ಡೆಹೊಸೂರು: ಕಾವೇರಿ ತಾಲೂಕು ರಚನಾ ಹೋರಾಟ ಸಮಿತಿ ಗುಡ್ಡೆಹೊಸೂರು ವತಿಯಿಂದ ಮೂರನೇ ಹಂತದ ಮಾನವ ಸರಪಳಿ ರಚಿಸಿ ಸರಕಾರದ ಮೇಲೆ ಒತ್ತಡ ಹೇರಿ ತಾಲೂಕು ರಚಿಸುವಂತೆ ಗುಡ್ಡೆಹೊಸೂರಿನಲ್ಲಿ ನಿರಂತರ ಹೋರಾಟ ನಡೆಯುತ್ತಿದೆ. ಈ ಸಂದರ್ಭ ಗುಡ್ಡೆಹೊಸೂರು ರಾಜ್ಯಹೆದ್ದಾರಿ ಬಂದ್ ಮಾಡಿ ಮಾನವ ಸರಪಳಿ ರಚಿಸಲಾಯಿತು. ಕಾಲುನಡಿಗೆ ಜಾಥಾ ಕುಶಾಲನಗರಕ್ಕೆ ತೆರಳಲಾಯಿತು. ಇದರ ನೇತೃತ್ವವನ್ನು ಗುಡ್ಡೆಹೊಸೂರು ಸಮಿತಿಯ ಅಧ್ಯಕ್ಷ ಕೋಡಿಪೂವಯ್ಯ ಮತ್ತು ಉಪಾಧ್ಯಕ್ಷ ಬಿ.ಎನ್ ಶುಭಶೇಖರ್ ವಹಿಸಿದ್ದರು.

ಓರ್ವ ಆಸ್ಪತ್ರೆಗೆ : ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರು ವವರ ಪೈಕಿ ಓರ್ವ ಅಸ್ವಸ್ಥರಾಗಿದ್ದು ಮಡಿಕೇರಿ ಆಸ್ಪತ್ರೆಗೆ ಸಾಗಿಸಲಾಗಿದೆ. 4ನೇ ದಿನದ ಉಪವಾಸ ಸತ್ಯಾಗ್ರಹ ಸಂದರ್ಭ ಎಂ.ಇ.ಮುಸ್ತಾಫ ಎಂಬವರು ಅಸ್ವಸ್ಥರಾಗಿದ್ದು ಸ್ಥಳೀಯ ವೈದ್ಯರ ಸಲಹೆ ಮೇರೆಗೆ ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಉಳಿದಂತೆ ಹೋರಾಟ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್ ಮತ್ತು ಪ್ರಮುಖರಾದ ಕೆ.ಎಸ್.ರಾಜಶೇಖರ್ ಉಪವಾಸ ಮುಂದುವರೆಸಿದ್ದಾರೆ.

ಈ ನಡುವೆ ಸಂಜೆ ಕುಶಾಲನಗರ ಹಿರಿಯ ನಾಗರಿಕರಾದ ವಿ.ಎನ್.ವಸಂತಕುಮಾರ್ ನೇತೃತ್ವದಲ್ಲಿ ಕೆಲವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಉಪವಾಸ ಸ್ಥಗಿತಗೊಳಿಸಲು ಮನವಿ ಮಾಡಿದರೂ ಯಾವದೇ ಸ್ಪಂದನ ದೊರಕದೆ ಪ್ರತಿಭಟನೆ ಮುಂದುವರೆಸಿದ್ದಾರೆ.

ಬಿಜೆಪಿಯಿಂದ ಪ್ರತ್ಯೇಕ ಹೋರಾಟ

ಕಾವೇರಿ ನೂತನ ತಾಲೂಕು ರಚನೆಗೆ ಒತ್ತಾಯಿಸಿ ಕಳೆದ 3 ತಿಂಗಳಿನಿಂದ ಹೋರಾಟ ನಡೆದರೂ ಸರಕಾರ ಯಾವದೇ ರೀತಿಯ ಸಕಾರಾತ್ಮಕ ಸ್ಪಂದನ ನೀಡದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಸರಕಾರದ ವಿರುದ್ಧ ಪ್ರತ್ಯೇಕ ಹೋರಾಟ ನಡೆಸಲು ನಿರ್ಣಯ ಕೈಗೊಂಡಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎನ್. ಕುಮಾರಪ್ಪ ತಿಳಿಸಿದ್ದಾರೆ.

ಅವರು ಕುಶಾಲನಗರದಲ್ಲಿ ಪ್ರಸ್ತಾವಿತ ತಾಲೂಕು ವ್ಯಾಪ್ತಿಯ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು ಇದುವರೆಗೆ ನಡೆದ ಹೋರಾಟದಲ್ಲಿ ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿದ್ದು ಯಾವದೇ ರೀತಿಯ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಈ ತಿಂಗಳ 9 ರಿಂದ ಪಕ್ಷದ ಅಡಿಯಲ್ಲಿ ಹೋರಾಟ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. 9 ರಂದು ಮಡಿಕೇರಿಗೆ ಭೇಟಿ ನೀಡುವ ಮುಖ್ಯಮಂತ್ರಿಗಳ ನಿರ್ಧಾರ ಅವಲಂಭಿಸಿ ಹೋರಾಟಕ್ಕೆ ಚಾಲನೆ ನೀಡಲಾಗುವದು. ಎರಡು ಹೋಬಳಿಗಳ ಬಿಜೆಪಿ ಸ್ಥಾನೀಯ ಸಮಿತಿ ಮೂಲಕ ತಾಲೂಕು ರಚನೆಗೆ ಮುಂದಿನ ಕಾರ್ಯಕ್ರಮಗಳ ರೂಪುರೇಷೆ ಸಿದ್ದಪಡಿಸಲಾಗುವದು ಎಂದಿದ್ದಾರೆ.

ಈ ಸಂದರ್ಭ ಪಕ್ಷದ ಪದಾಧಿಕಾರಿಗಳಾದ ಎಂ.ಡಿ.ಕೃಷ್ಣಪ್ಪ, ಮಂಡೇಪಂಡ ಬೋಸ್ ಮೊಣ್ಣಪ್ಪ, ಶಿವಾಜಿ, ಹೆಚ್.ಎನ್.ರಾಮಚಂದ್ರ, ಚಂದ್ರಶೇಖರ್, ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ರೇಣುಕಾ, ಎಂ.ಎಂ.ಚರಣ್, ಲಲಿತಾ, ಡಿ.ಕೆ.ತಿಮ್ಮಪ್ಪ, ಭಾರತೀಯ ಕಾಫಿ ಮಂಡಳಿ ಸದಸ್ಯರಾದ ಜಿ.ಎಲ್.ನಾಗರಾಜ್, ಎಂ.ವಿ.&divound; Áರಾಯಣ, ಪುಂಡರೀಕಾಕ್ಷ ಮತ್ತಿತರರು ಇದ್ದರು.

ಗುಡ್ಡೆಹೊಸೂರು: ಗುಡ್ಡೆಹೊಸೂರಿ ನಲ್ಲಿ ಕಾವೇರಿ ತಾಲೂಕು ರಚನಾ ಹೋರಾಟ ಸಮಿತಿ ವತಿಯಿಂದ ಉಪವಾಸ ಸತ್ಯಾಗ್ರಹ ನಡೆಯಿತು.

ಹೋರಾಟ ಸಮಿತಿಯ ಗುಡ್ಡೆಹೊಸೂರು ವಿಭಾಗದ ಅಧ್ಯಕ್ಷ ಕೆ.ಕೆ. ಪೂವಯ್ಯ ಮತ್ತು ಉಪಾಧ್ಯಕ್ಷ ಬಿ.ಎನ್. ಶುಭಶೇಖರ್ ಮತ್ತು ಗ್ರಾ.ಪಂ. ಸದಸ್ಯರು ಮತ್ತು ಹೋರಾಟ ಸಮಿತಿಯ ಸದಸ್ಯರು ಇದ್ದರು.

ಸುಂಟಿಕೊಪ್ಪ : ಕಾವೇರಿ ತಾಲೂಕು ಹೋರಾಟ ಸಮಿತಿಯ ಸುಂಟಿಕೊಪ್ಪ ಸ್ಥಾನೀಯ ಸಮಿತಿ ವತಿಯಿಂದ ಕುಶಾಲನಗರಕ್ಕೆ ಕಾಲ್ನಡಿಗೆ ಜಾಥಾ ನಡೆಯಿತು.

ಗದ್ದೆಹಳ್ಳದ ರಾಮ ಬಡಾವಣೆಯಿಂದ ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಕಾವೇರಿ ತಾಲೂಕು ಹೋರಾಟ ಸುಂಟಿಕೊಪ್ಪ ಸ್ಥಾನೀಯ ಸಮಿತಿ ಸದಸ್ಯರುಗಳು ಬೇಕೆ ಬೇಕು ಕಾವೇರಿ ತಾಲೂಕು ಬೇಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ 10 ನಿಮಿಷಗಳ ಕಾಲ ರಸ್ತೆ ತಡೆ ನಡೆಸಿದರು.

ಜಾಥಾವನ್ನು ಉದ್ದೇಶಿಸಿ ಗುಡ್ಡೆಹೊಸೂರು ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಮಾತನಾಡಿ ಕಾವೇರಿ ಹೋರಾಟ ಕೇಂದ್ರೀಯ ಸಮಿತಿ ಪ್ರಮುಖರು ಅಮರಣಾಂತ ಉಪವಾಸ ಕೈಗೊಂಡಿದ್ದು, ಅವರಿಗೆ ಬೆಂಬಲ ಸೂಚಿಸಲು ನೆಲ್ಯಹುದಿಕೇರಿ, ಚೆಟ್ಟಳ್ಳಿ, ಗುಡ್ಡೆಹೊಸೂರು ಕಂಬಿಬಾಣೆ ಕೊಡಗರಹಳ್ಳಿ ಹಾಗೂ ವಿವಿಧ ಕಡೆಗಳಿಂದ ಕಾವೇರಿ ಹೋರಾಟ ಸಮಿತಿ ಸದಸ್ಯರುಗಳನ್ನೊಳಗೊಂಡು ಕಾಲ್ನಡಿಗೆ ಜಾಥಾವನ್ನು ಕುಶಾಲನಗರ ದವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾಲ್ನಡಿಗೆ ಜಾಥಾದಲ್ಲಿ ಸುಂಟಿಕೊಪ್ಪ ಸ್ಥಾನೀಯ ಸಮಿತಿ ಅಧ್ಯಕ್ಷ ಪಿ.ಎಫ್. ಸಬಾಸ್ಟೀನ್, ಕಾರ್ಯದರ್ಶಿ ಪಿ.ಆರ್. ಸುನಿಲ್‍ಕುಮಾರ್, ತಾಲೂಕು ಪಂಚಾಯಿತಿ ಸದಸ್ಯೆ ವಿಮಾಲಾವತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯರುಗಳಾದ ರಜಾಕ್, ಶಾಹೀದ್, ನಾಗರತ್ನ ಸುರೇಶ್, ಗಿರಿಜ ಉದಯಕುಮಾರ್, ಕಂಬಿಬಾಣೆ ಗ್ರಾ.ಪಂ. ಅಧ್ಯಕ್ಷ ಕೆ.ಬಿ. ಕೃಷ್ಣ, ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್, ಡಿ. ನರಸಿಂಹ, ವೈಎಂ. ಕರುಂಬಯ್ಯ, ಶಭೀರ್ ಹಾಗೂ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.