ವೀರಾಜಪೇಟೆ, ಜ. 4: ಮಹರಾಷ್ಟ್ರದ ಪೂಣಿ ಜಿಲ್ಲೆಯ ಕೋರೆಗಾಂವ್‍ನಲ್ಲಿ ದಲಿತ ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವದಲ್ಲದೆ ಅಮಾಯಕನಿಗೆ ಹಿಂಸೆ ನೀಡಿ ಬಲಿಗೆ ಕಾರಣವಾಗಿರುವದನ್ನು ಖಂಡಿಸಿ ವೀರಾಜಪೇಟೆ ದಲಿತ ಸಂಘರ್ಷ ಸಮಿತಿ ಹಾಗೂ ಸಿ.ಪಿ.ಐ. ನಗರ ಸಮಿತಿ ವತಿಯಿಂದ ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಮಾನ್ಯ ರಾಷ್ಟ್ರಪತಿಗೆ ಕಳಿಸುವಂತೆ ವೀರಾಜಪೇಟೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಕಾರರನ್ನುದ್ಧೇಶಿಸಿ ಸಿ.ಪಿ.ಐ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನೀಲ್ ಮಾತನಾಡಿ ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆ ವೇಳೆ ಅಡ್ಡಿಪಡಿಸಿದ ಸಂಘಪರಿವಾರದವರು ಮೆರವಣಿಗೆ ಸಂದರ್ಭ ಕಲ್ಲು ತೂರಿ ವಾಹನಕ್ಕೆ ಬೆಂಕಿ ಹಚ್ಚಿ ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಮಾಡುತ್ತಿದ್ದು ಸರಕಾರ ಅವರನ್ನು ಬಂದಿಸಬೇಕು ಹಾಗೂ ಬಲಿಯಾಗಿರುವ ಅಮಾಯಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತಾಗಬೇಕು ಎಂದರು.

ಪ್ರತಿಭಟನೆಯ ನೇತೃತ್ವವನ್ನು ದಲಿತ ಸಂಘರ್ಷ ಸಮಿತಿಯ ರಜನಿಕಾಂತ್ ವಹಿಸಿದ್ದರು. ಸಮಿತಿಯ ವಿದ್ಯಾರ್ಥಿ ಒಕ್ಕೂಟದ ಸತೀಶ್, ನಗರ ಸಂಚಾಲಕ ಹೆಚ್.ಎಸ್.ಗಣೇಶ್, ಹಾಗೂ ಆಕಾಶ್, ರವಿ, ಪವನ್, ವಿಷ್ಣು, ಮಲ್ಲಿಕಾರ್ಜುನ, ಇಶನ್ ಮುಂತಾವರು ಹಾಜರಿದ್ದರು.